ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 28
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಅವರು ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳನ್ನು ಮರೆತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರಗಳತ್ತ ಸುಳಿಯುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಒಂದೇ ಸವನೆ ಸುತ್ತಾಡಿದವರು ಈಗ ಜನರ ಸಮಸ್ಯೆ, ಅಹವಾಲುಗಳನ್ನು ಕೇಳಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ.
ರಾಯಚೂರು ಜಿಲ್ಲೆಯ ಜೀವನಾಡಿಯಾದ ತುಂಗಭದ್ರಾ ಡ್ಯಾಂಗೆ ಹೊಸ ಕ್ರಸ್ಟ್ಗೇಟ್ ಅಳವಡಿಸುತ್ತಿರುವುದರಿಂದ ನೀರಾವರಿ ಪ್ರದೇಶ ಒಂದೇ ಬೆಳೆಗೆ ಸೀಮಿತವಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಉಂಟಾಗಿ ಗುಳೆ ಸಮಸ್ಯೆ ಹೆಚ್ಚಿದೆ. ಈ ನಡುವೆ ಈ ಭಾಗದ ಅಭಿವೃದ್ಧಿಗೆ ಕೇಂದ್ರ ಪುರಸ್ಕೃತ ಯೋಜನೆಗಳನ್ನು ತರುವಲ್ಲಿ ಮತ್ತು ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆಂಬ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
“ಖಾಸಗಿ ಕಾರ್ಯಕ್ರಮಗಳ ಬಗ್ಗೆ ಪ್ರೀತಿ, ಕ್ಷೇತ್ರಗಳ ಭೇಟಿಗೆ ನಿರಾಸಕ್ತಿ”
ಸಂಸದರು ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಅವರ ಅಹವಾಲು, ಸಮಸ್ಯೆಗಳನ್ನು ಕಂಡುಕೊಳ್ಳಲು ಸಿಂಧನೂರು, ಮಸ್ಕಿ ಕ್ಷೇತ್ರಕ್ಕೆ ಭೇಟಿ ಕೊಡುವುದಕ್ಕಿಂತ ಖಾಸಗಿ ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದೇ ಜಾಸ್ತಿ. ಹೀಗಾದರೆ ಜನಸಾಮಾನ್ಯರ ಗತಿ ಏನು ? ಜನರ ಸಮಸ್ಯೆಗಳನ್ನು ಅರಿತುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಾರೆನ್ನುವ ನಿರೀಕ್ಷೆಯಿತ್ತು, ಆದರೆ ಚುನಾವಣೆ ನಡೆದು ಒಂದೂವರೆ ವರ್ಷವಾಗಿದ್ದು, ಸಂಸದರು ನಮ್ಮ ಕ್ಷೇತ್ರಗಳತ್ತ ಸುಳಿಯುತ್ತಿಲ್ಲ, ಇನ್ನೂ ಜನಸಾಮಾನ್ಯರ ಸಮಸ್ಯೆಗಳನ್ನು ಕೇಳುವ ಮಾತೆಲ್ಲಿ. ಇತ್ತೀಚೆಗೆ ಸಂಸದರ ನಡೆ ಖಾಸಗಿ ಕಾರ್ಯಕ್ರಮಗಳ ಬಗ್ಗೆ ಪ್ರೀತಿ, ಕ್ಷೇತ್ರಗಳ ಭೇಟಿಗೆ ನಿರಾಸಕ್ತಿಯಂತಾಗಿದೆ” ಎಂದು ಮಸ್ಕಿ ಕ್ಷೇತ್ರದ ನಾಗರಿಕರೊಬ್ಬರು ಆಪಾದಿಸಿದ್ದಾರೆ.
“ಕೇಂದ್ರ ಪುರಸ್ಕೃತ ಯೋಜನೆಗಳು ಬಾಕಿ, ಹೆಚ್ಚಿದ ಗುಳೆ ಸಮಸ್ಯೆ”
“ಈ ಎರಡೂ ಕ್ಷೇತ್ರಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳು ಹಲವು ಬಾಕಿ ಉಳಿದಿದ್ದು, ಗುಳೆ ಸಮಸ್ಯೆ ಹೆಚ್ಚಿದೆ. ಅಲ್ಲದೇ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಹತ್ತು ಹಲವು ಕೊರತೆಗಳಿದ್ದು, ಸಂಸದರ ಅನುದಾನದಲ್ಲಿ ಅಭಿವೃದ್ಧಿಗೆ ಕಾಳಜಿ ವಹಿಸದೇ ಇರುವುದರಿಂದ ಪ್ರಗತಿಗೆ ಕುಂಠಿತವಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯನ್ನು ಸಂಸದರು ಮರೆತು ವರ್ತಿಸುತ್ತಿದ್ದಾರೆ” ಎಂದು ಸಂಘಟನೆಯ ಮುಖಂಡರೊಬ್ಬರು ದೂರುತ್ತಾರೆ.
