ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ಸಿಂಧನೂರು, ಜೂನ್ 01
ಹಿಂಗಾರು ಜೋಳ ಖರೀದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕುಂಟು ನೆಪವೊಡ್ಡಿ ರೈತರ ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದು, ಖರೀದಿ ಪ್ರಕ್ರಿಯೆಗೆ ವಿನಾಃಕಾರಣ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಈ ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಲು ಒತ್ತಾಯಿಸಿ ಜೂನ್ 2ರಂದು ಸಿಂಧನೂರು ಬಂದ್ ಮಾಡಲು ರೈತ ಸಂಘಟನೆಗಳು ಮುಂದಾಗಿವೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ, ಸಿಂಧನೂರು ತಾಲೂಕು ಜೋಳ ಬೆಳೆಗಾರರ ಸಮಸ್ತ ಒಕ್ಕೂಟ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕಳೆದ ಎರಡ್ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಇಲ್ಲಿಯವರೆಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ತಿಂಗಳಾನುಗಟ್ಟಲೇ ಖರೀದಿ ಪ್ರಕ್ರಿಯೆಯನ್ನು ವಿಳಂಬ ಮಾಡಿ ಈಗ ಜೋಳದಲ್ಲಿ ಹುಳು ಬಿದ್ದಿವೆ, ಗುಣಮಟ್ಟ ಕಡಿಮೆ ಇದೆ. ಹೀಗೆ ಹತ್ತು ಹಲವು ಕುಂಟು ನೆಪ ಹೇಳಿ ರೈತರ ದಿಕ್ಕು ತಪ್ಪಿಸಿರುವುದನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ. ರೈತರಿಗೆ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವೇ ಹೊಣೆ ಎಂದು ರೈತ ಮುಖಂಡರು ಪ್ರತಿಕ್ರಿಯಿಸಿದ್ದಾರೆ.
“ಒಂದು ಜಿಲ್ಲೆಯ ರೈತರ ಜೋಳ ಖರೀದಿಸಲಾಗದಷ್ಟು ಸರ್ಕಾರ ಬಡವಾಯಿತೆ ?”
ಸಿಂಧನೂರು ತಾಲೂಕು, ಮಾನ್ವಿ ತಾಲೂಕಿನ ಹೊಳೆ ದಂಡೆ ಸೇರಿದಂತೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಉಪ ಕಾಲುವೆಗಳ ವ್ಯಾಪ್ತಿಯ ಟೇಲೆಂಡ್ ಭಾಗದ ರೈತರು ಬೆಳೆದಿರುವ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ಕಳೆದ ಎರಡೂವರೆ ತಿಂಗಳಿಂದ ಮೀನಾಮೇಷ ಮಾಡುತ್ತ ಬಂದಿದೆ. ಹಾಗಾದರೆ ಕೇವಲ ಒಂದೇ ಒಂದು ಜಿಲ್ಲೆಯಲ್ಲಿ ಅದರಲ್ಲೂ 2 ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಜೋಳವನ್ನು ಖರೀದಿಸಲು ಈ ಸರ್ಕಾರಕ್ಕೆ ಆಗುತ್ತಿಲ್ಲವೆಂದರೆ ನಾಚಿಕೆಗೇಡು. ರಾಜ್ಯ ಸರ್ಕಾರ ಅಷ್ಟು ಬಡವಾಯಿತೇ ? ಹಾಗಾದರೆ ರೈತರು ಬೆಳೆ ಬೆಳೆಯುವುದೇ ಅಪರಾಧವೇ ? ಎಂದು ರೈತರೊಬ್ಬರು ಪ್ರಶ್ನಿಸುತ್ತಾರೆ.

“ಪ್ರತಿಪಕ್ಷಗಳು ಬೆಂಕಿ ಹತ್ತಿದಾಗ ಬಾಯಿ ತೋಡಲು ಬಂದಿವೆ?”
“ತಾಲೂಕಿನ ಜೋಳ ಬೆಳೆಗಾರರು ಕಳೆದ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಬೆಳೆದ ಜೋಳವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ನಿರಂತರ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಸಂಘರ್ಷಕ್ಕಿಳಿದು ಹೋರಾಟ ನಡೆಸುತ್ತಿದ್ದೇವೆ. ಇದು ಎಲ್ಲ ಪಕ್ಷಗಳ ನಾಯಕರ ಗಮನಕ್ಕೂ ಇದೆ. ಆದರೆ ಇಷ್ಟು ದಿನ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ಒಯ್ದು ಗಮನ ಸೆಳೆಯಲು ಮುಂದಾಗದವರು ಈಗ ರಾಜಕಾರಣ ಮಾಡಲು ನಾ ಮುಂದು ತಾ ಮುಂದು ಎಂದು ಬರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇದೊಂದು ರೀತಿ “ಬೆಂಕಿ ಹತ್ತಿದಾಗ ಬಾಯಿ ತೋಡಲು ಮುಂದಾದರು’ ಎನ್ನುವ ಪ್ರಹಸನ ದಂತಿದೆ. ಇವರಿಗೆ ರೈತರ ಸಮಸ್ಯೆ ಪರಿಹರಿಸುವುದಕ್ಕಿಂತ ರಾಜಕಾರಣ ಮುಖ್ಯವಾಗಿದೆ. ಆಡಳಿತ ಪಕ್ಷದವರು ಹಾಗೂ ಪ್ರತಿಪಕ್ಷದವರ ಬೇಜವಾಬ್ದಾರಿಯಿಂದಾಗಿ ತಾಲೂಕಿನ ರೈತರು ಬೆಂಕಿಯಿAದ ಬಾಣಲೆಗೆ ಬಿದ್ದಂತಾಗಿದ್ದಾರೆ” ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.
“ಎಮ್ಮೆಲ್ಲೆ, ಎಮ್ಮೆಲ್ಸಿಯವರ ಬಳಿ ಹತ್ತಾರು ಬಾರಿ ತಿರುಗಾಡಿದರೂ ಸಮಸ್ಯೆ ಬಗೆಹರಿದಿಲ್ಲ?”
“ಸ್ಥಳೀಯ ಎಮ್ಮೆಲ್ಲೆ, ಎಮ್ಮೆಲ್ಸಿಯವರ ಬಳಿ ಹತ್ತಾರು ಬಾರಿ ಜೋಳ ಬೆಳೆಗಾರರ ಸಮಸ್ಯೆಯನ್ನು ಹೇಳಿಕೊಂಡರೂ ಇದುವರೆಗೂ ಬಗೆಹರಿದಿಲ್ಲ. ಪ್ರತಿಬಾರಿಯೂ ಕೃಷಿ ಸಚಿವರು, ಆಹಾರ ಇಲಾಖೆ ಸಚಿವರು ಸಂಬAಧಿಸಿದ ಮೇಲಧಿಕಾರಿಗಳಿಗೆ ಗಮನ ಸೆಳೆಯಲಾಗಿದೆ. ಸಚಿವರಿಗೆ ಪತ್ರ ನೀಡಲಾಗಿದೆ, ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ ರೈತರು ಬೀದಿಗೆ ಬಿದ್ದಿದ್ದೇವೆ. ಜೋಳ ಬೆಳೆದ ತಪ್ಪಿಗೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಈ ರಾಜಕಾರಣಿಗಳನ್ನು ನಂಬಿ ಕೆಟ್ಟುಹೋಗಿದ್ದೇವೆ” ಎಂದು ಹೋರಾಟ ನಿರತ ರೈತರೊಬ್ಬರು ನೊಂದು ನುಡಿಯುತ್ತಾರೆ.