ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು / ಮಸ್ಕಿ, ಸೆಪ್ಟೆಂಬರ್ 1
ಸಿಂಧನೂರು ಹಾಗೂ ಮಸ್ಕಿ ತಾಲೂಕು ವ್ಯಾಪ್ತಿಯಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಮಕ್ಕಳು ವೈರಲ್ ಫಿವರ್, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಗಳು ಒಳ ಮತ್ತು ಹೊರ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ವಿಭಾಗ ಸಮರ್ಪಕವಾಗಿಲ್ಲದ ಕಾರಣ ಬಡ ಕುಟುಂಬದ ಮಕ್ಕಳು ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಪರಿತಪಿಸುತ್ತಿದ್ದಾರೆ. ಈ ತಾಲೂಕುಗಳ ವ್ಯಾಪ್ತಿಯಲ್ಲಿ ಮಕ್ಕಳಿಗೆ, ಜನಸಾಮಾನ್ಯರಿಗೆ ಗಂಭೀರ ಪರಿಸ್ಥಿತಿ ಎದುರಾಗಿದ್ದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ದಿವ್ಯ ನಿರ್ಲಕ್ಷ್ಯ ವಹಿಸಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸ್ಕಿ ತಾಲೂಕಿನಲ್ಲಿ ಪಿಎಚ್‌ಸಿ (ಪ್ರಾಥಮಿಕ ಆರೋಗ್ಯ ಕೇಂದ್ರ) ಹೊರತುಪಡಿಸಿ ಸರ್ಕಾರದ ಯಾವೊಂದು ದೊಡ್ಡ ಆಸ್ಪತ್ರೆ ಇಲ್ಲ, ಸಿಂಧನೂರಿನಲ್ಲಿ ಮಕ್ಕಳ ವಿಭಾಗ ಇದ್ದರೂ ಉಪಯೋಗವಿಲ್ಲದಂತಾಗಿದ್ದು, ದಿನದಿಂದ ದಿನಕ್ಕೆ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಪೋಷಕರು ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಸಿಂಧನೂರು ನಗರದಲ್ಲಿ ಅಧಿಕೃತವಾಗಿ 14 ಮಕ್ಕಳ ಆಸ್ಪತ್ರೆಗಳು ಇವೆ ಎಂದು ಹೇಳಲಾಗುತ್ತಿದ್ದು, ಬಹುತೇಕ ಆಸ್ಪತ್ರೆಗಳಲ್ಲೂ ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಗಣನೀಯವಾಗಿದ್ದು, ಇದರಿಂದ ಖಾಸಗಿ ವೈದ್ಯರಿಗೂ ವೃತ್ತಿ ಒತ್ತಡ ಮಿತಿ ಮೀರಿದೆ ಎಂದು ಹೇಳಲಾಗುತ್ತಿದೆ.

ಬೆಳಿಗ್ಗೆ 9 ಗಂಟೆಯೊಳಗೆ 100ಕ್ಕೂ ಹೆಚ್ಚು ಚೀಟಿ !?
ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 9 ಗಂಟೆಯೊಳಗೆ 100ಕ್ಕೂ ಹೆಚ್ಚು ಜನ ಚಿಕಿತ್ಸೆಗಾಗಿ ಶುಲ್ಕ ಪಾವತಿಸಿ ಚೀಟಿ ಮಾಡಿಸಿದ್ದು ಸೋಮವಾರ ಕಂಡುಬಂತು. ಬಸ್ ನಿಲ್ದಾಣ ಸಮೀಪವಿರುವ ಖಾಸಗಿ ಆಸ್ಪತ್ರೆಯೊಂದರ ಮುಂದೆ ನೂರಾರು ಜನರು ಮಕ್ಕಳೊಂದಿಗೆ ಸರದಿ ಸಾಲಿನಲ್ಲಿ ಚಿಕಿತ್ಸೆಗಾಗಿ ಕಾಯ್ದು ನಿಂತಿದ್ದರು. ಚಿಕಿತ್ಸೆ ಅರಸಿ ಪಾಲಕರು ಆಸ್ಪತ್ರೆಗಳತ್ತ ಧಾವಿಸುತ್ತಿರುವುದು ಕಂಡುಬಂತು.
ಸರದಿಯಲ್ಲಿ ನಿಂತಾಗ ಮಗು ಸಾವು ?
ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲು ಸರದಿ ಸಾಲಿನಲ್ಲಿ ನಿಂತ ಸಂದರ್ಭದಲ್ಲಿ ಮಗುವೊಂದು ಇತ್ತೀಚೆಗೆ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಚೀಟಿ ಮಾಡಿಸಲು ಕೆಲ ಆಸ್ಪತ್ರೆಯ ಮುಂದೆ ನಸುಕಿನಲ್ಲಿಯೇ ಸರದಿ ಸಾಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಚೀಟಿ ಸಿಗುತ್ತದೆಯೋ ಇಲ್ಲವೋ ? ಎಂದು ಕೆಲ ಪಾಲಕರು ಮಳೆಯಲ್ಲೂ ಸರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಇತ್ತೀಚೆಗೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದವರು ಚೀಟಿ ತೆಗೆಸುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾದ ಬಗ್ಗೆ ವರದಿಯಾಗಿದೆ. ಆಸ್ಪತ್ರೆಯ ಸಿಬ್ಬಂದಿಯವರು “ಮಗು ಕರೆದುಕೊಂಡು ಬಂದರೆ ಮಾತ್ರ ಚೀಟಿ ಮಾಡುತ್ತೇವೆ ಎನ್ನುತ್ತಾರೆ, ಒಂದೊಂದು ಬಾರಿ ಹಾಗೆಯೇ ಚೀಟಿ ಮಾಡುತ್ತಾರೆ, ತುರ್ತು ಚಿಕಿತ್ಸೆ ಅವಶ್ಯವಿರುವ ಮಕ್ಕಳ ಬಗ್ಗೆ ನಿರ್ಲಕ್ಷö್ಯ ವಹಿಸುವುದು ಸೇರಿದಂತೆ ಹಲವು ಲೋಪದೋಷಗಳು ನಡೆಯುತ್ತಿದ್ದರೂ ಕೇಳುವವರು ಇಲ್ಲ. ಇನ್ನೂ ಹಲವು ಆಸ್ಪತ್ರೆಯ ಆಸುಪಾಸು ಗಲೀಜು ವಾತಾವರಣವಿದ್ದರೂ, ಮೂಲ ಸೌಲಭ್ಯಗಳ ಕೊರತೆ ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ಇಲ್ಲದೇ ಇದ್ದರೂ ಬೇರೆ ದಾರಿಯಿಲ್ಲದೇ ತಾಪತ್ರಯ ಅನುಭವಿಸಿ ಮಕ್ಕಳಿಗೆ ಚಿಕಿತ್ಸೆ ಪಡೆದುಕೊಂಡು ಹೋಗುತ್ತಿದ್ದೇವೆ” ಎಂದು ಮಕ್ಕಳ ಪಾಲಕರು ದೂರುತ್ತಾರೆ.

“ಸರದಿಯಲ್ಲಿ ನಿಂತು, ನೂಕುನುಗ್ಗಲು ಅನುಭವಿಸಿ, ಬೈಸಿಕೊಂಡು ಚಿಕಿತ್ಸೆ ಪಡೆಯಬೇಕಾದ ದುಸ್ಥಿತಿ “
“ಕೆಲ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ನೂಕು ನುಗ್ಗಲು ಅನುಭವಿಸಿ, ಕಾವಲುಗಾರರು, ಕೆಲ ಸಿಬ್ಬಂದಿಯಿಂದ ಬಾಯಿಗೆ ಬಂದಂತೆ ಬೈಸಿಕೊಂಡು, ಇನ್ನಿಲ್ಲದ ಕಿರುಕುಳ ಅನುಭವಿಸುವಂತಾಗಿದೆ. ನಮ್ಮೂರು ಕಡೆ ಚಲೋ ಆಸ್ಪತ್ರೆ ಇದ್ದಿದ್ರೆ ಇಂಥಾ ಪಡುಬಟ್ಲ ನಾವ್ ಯಾಕ್ ಅನುಭವಿಸ್ತಿದ್ವಿ. ಈ ಕಡೆ ರೊಕ್ಕನೂ ಹೋತಾವ, ಅಕ್ಕಡೆ ತಿಪ್ಲನೂ ತಪ್ಪವಲ್ತು” ಎಂದು ಮಸ್ಕಿ ತಾಲೂಕಿನ ಗ್ರಾಮವೊಂದರಿಂದ ಚಿಕಿತ್ಸೆಗಾಗಿ ಬಂದಿದ್ದ ಮಕ್ಕಳ ಪಾಲಕರೊಬ್ಬರು ದೂರುತ್ತಾರೆ.
‘ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ ?’
“ಕಳೆದ ಹಲವು ದಿನಗಳಿಂದ ಸಿಂಧನೂರು, ಮಸ್ಕಿ ತಾಲೂಕು ಅಷ್ಟೇ ಅಲ್ಲದೇ ಜಿಲ್ಲೆಯ ಹಲವು ತಾಲೂಕುಗಳಲ್ಲಿ ವಾತಾವರಣದ ವೈಪರೀತ್ಯದಿಂದ ಮಕ್ಕಳು ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದರೂ, ಸ್ವತಃ ವೈದ್ಯರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ರಾಯಚೂರು ಜಿಲ್ಲೆಗೆ ಡಾ.ಶರಣ ಪ್ರಕಾಶ ಪಾಟೀಲ್ ಅವರು ಉಸ್ತುವಾರಿ ಸಚಿವರೋ ಇಲ್ಲಾ ಎನ್.ಎಸ್.ಭೋಸರಾಜು ಉಸ್ತುವಾರಿ ಸಚಿವರೋ ? ಎಂಬುದು ಗೊತ್ತಾಗುತ್ತಿಲ್ಲ. ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ಕಡೆಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೋ ತಿಳಿಯುತ್ತಿಲ್ಲ” ಎಂದು ಕಾರ್ಮಿಕ ಸಂಘಟನೆಯ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ಖಾಸಗಿ ಆಸ್ಪತ್ರೆಗಳಿಂದ ಹೆಚ್ಚಿನ ಶುಲ್ಕ ವಸೂಲಿ ಆರೋಪ ?
“ದಿನವೂ ಮಕ್ಕಳ ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ವಸೂಲಿಗಿಳಿದಿವೆ. ಚಿಕಿತ್ಸೆಗೆ ಬಂದವರೊಂದಿಗೆ ಅಸಭ್ಯವಾಗಿ ವರ್ತಿಸುವುದಲ್ಲದೇ, ದರ್ಪದಿಂದ ಮಾತನಾಡುತ್ತಾರೆ. ತಮಗೆ ಬೇಕಾದಂತೆ ನಿಯಮ ಪಾಲಿಸುವುದರಿಂದ ರೋಗಿಗಳು ದಿನವೂ ಗೊಂದಲಕ್ಕೊಳಗಾಗುತ್ತಿದ್ದಾರೆ. ಇವರ ನಿಯಮಗಳಿಗೆ ಆಕ್ಷೇಪ ಎತ್ತಿದರೆ, ಬೇಕಿದ್ದರೆ ಚೀಟಿ ಮಾಡಿಸಿ ಇಲ್ಲದಿದ್ದರೆ ಬಿಡಿ ಎಂಬ ಉಡಾಫೆ ಉತ್ತರ ನೀಡುತ್ತಾರೆ” ಎಂದು ಮಗುವಿನ ಪಾಲಕರೊಬ್ಬರು ತಿಳಿಸಿದರು.

ಸಿಂಧನೂರು ಸರ್ಕಾರಿ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗ ಆಟಕ್ಕುಂಟು ಲೆಕ್ಕಕ್ಕಿಲ್ಲ !
“ಮೊನ್ನೆ ಹೆರಿಗೆಯಾಗಿದ್ದು ಮಕ್ಕಳ ವೈದ್ಯರ ಬಳಿ ತೋರಿಸಲು ತಾಸಿನಿಂದ ಇಲ್ಲಿಯೇ ಕುಳಿತಿದ್ದೇವೆ. ಇನ್ನೂ ವೈದ್ಯರು ಬಂದಿಲ್ಲ” ಎಂದು ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರು ಆಯನೂರಿನ ವ್ಯಕ್ತಿಯೊಬ್ಬರು ತಿಳಿಸಿದರು. ಇನ್ನೂ ಚಿಕಿತ್ಸೆ ಅರಸಿ ಬಂದಿದ್ದ ಬಾಲಕನೊಬ್ಬರ ಅನಾರೋಗ್ಯದಿಂದ ಬಳಲಿ ಚೇರುಗಳ ಮೇಲೆ ಮಲಗಿದ್ದು ಕಂಡುಬಂತು. ಅದರ ಜೊತೆಗೆ ಮೂರ್ನಾಲ್ಕು ಮಕ್ಕಳು ಚಿಕಿತ್ಸೆ ಚೀಟಿ ಪಡೆದು ಕುಳಿತಿದ್ದರು. ಆದರೂ ಇನ್ನೂ ವೈದ್ಯರ ಬಂದಿರಲಿಲ್ಲ. ಇನ್ನೂ ಚಿಕ್ಕಮಕ್ಕಳ ವಾರ್ಡ್ನಲ್ಲಿ ಇಬ್ಬರು ಮಕ್ಕಳು ಮಾತ್ರ ಅಡ್ಮಿಟ್ ಇದ್ದದ್ದು ಗಮನಕ್ಕೆ ಬಂತು.

‘ಸಿಂಧನೂರು, ಮಸ್ಕಿ ಶಾಸಕರ ಬೇಜವಾಬ್ದಾರಿ’
“ಸಿಂಧನೂರು ಮತ್ತು ಮಸ್ಕಿ ತಾಲೂಕು ವ್ಯಾಪ್ತಿಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ವೈರಲ್ ಫಿವರ್ ಸೇರಿದಂತೆ ಇನ್ನಿತರೆ ಅನಾರೋಗ್ಯ ಸಮಸ್ಯೆಗಳಿಂದ ಮಕ್ಕಳು ಬಳಲುತ್ತಿದ್ದು, ಪೋಷಕರು ಆತಂಕಿತರಾಗಿದ್ದಾರೆ. ಆದರೆ ಈ ಬಗ್ಗೆ ಕನಿಷ್ಠ ಕಾಳಜಿ ತೋರದೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಸ್ಕಿ ಆರ್.ಬಸನಗೌಡ ತುರ್ವಿಹಾಳ ಅವರು ವರ್ತಿಸುತ್ತಿದ್ದಾರೆ. ಇದುವರೆಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸದೇ ಉಭಯ ಶಾಸಕರು ಬೇಜವಾಬ್ದಾರಿ ವಹಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ” ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಿತಿ ಮೀರಿದ ಸೊಳ್ಳೆಗಳ ಹಾವಳಿ, ಫಾಗಿಂಗ್ ಇಲ್ಲ
“ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಸೊಳ್ಳೆಗಳ ಹಾವಳಿ ಮಿತಿಮೀರಿದ್ದು ಮಕ್ಕಳು, ಜನಸಾಮಾನ್ಯರು ಹೈರಾಣಾಗಿದ್ದಾರೆ. ರಾತ್ರಿಯಾದರೆ ಸಾಕು ಸೊಳ್ಳೆಗಳ ಕಾಟಕ್ಕೆ ಬೇಸತ್ತುಹೋಗಿದ್ದಾರೆ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ಸೇರಿದಂತೆ ಸ್ಥಳೀಯಾಡಳಿತಗಳು ಸ್ವಚ್ಛತೆ, ನೈರ್ಮಲ್ಯ ಕಾಪಾಡುವಲ್ಲಿ ವಿಫಲವಾಗಿದ್ದು, ಇದರಿಂದ ಮಕ್ಕಳು ಇನ್ನಿಲ್ಲದ ಅನಾರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ವಾತಾವರಣದಲ್ಲಿ ವೈಪರೀತ್ಯ ಉಂಟಾಗಿ ಮಕ್ಕಳು ಇನ್ನಿಲ್ಲದ ಸಂಕಟ ಅನುಭವಿಸುತ್ತಿದ್ದರೂ ಪಾಗಿಂಗ್ ಮಾಡುತ್ತಿಲ್ಲ. ಸಂಬಂಧಿಸಿದ ಇಲಾಖೆಗಳು ಹೊಣೆಗಾರಿಕೆ ಮರೆತಿರುವುದರಿಂದ ಪಾಲಕರು ಮಕ್ಕಳ ಚಿಕಿತ್ಸೆಗಾಗಿ ಅಲೆದಾಡುವಂತಾಗಿದೆ” ಎಂದು ಗ್ರಾಮಸ್ಥರು ದೂರುತ್ತಾರೆ.

