ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 21
ಇದೇ ಸೆಪ್ಟೆಂಬರ್ 27ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಅವರಿಂದ ನಗರದ ಪಿಡಬ್ಲುö್ಯಡಿ ಕ್ಯಾಂಪಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಆದರೆ, ಯಂತ್ರೋಕರಣಗಳು, ಅಗತ್ಯ ಪರಿಕರಗಳ ವ್ಯವಸ್ಥೆ ಸೇರಿದಂತೆ ಹಲವು ಕೆಲಸ-ಕಾರ್ಯಗಳು ಬಾಕಿಯಿದ್ದರೂ ನಾಮ್‌ಕೇವಾಸ್ತೆ ಉದ್ಘಾಟನೆಗೆ ಮುಂದಾಗಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆ ದೊರೆಯಲು ಇನ್ನೆಷ್ಟು ದಿನಬೇಕೋ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
2020, ಏಪ್ರಿಲ್‌ನಲ್ಲಿ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾಗಿ ಐದು ವರ್ಷಗಳು ಕಳೆದರೂ ಪೂರ್ಣ ಪ್ರಮಾಣದ ಸೇವಾ ಕಾರ್ಯಾಚರಣೆಗೆ ಇಲ್ಲಿಯವರೆಗೂ ಮುಂದಾಗದಿರುವುದು ಮಹಿಳೆಯರು ಸೇರಿದಂತೆ ಸಾರ್ವಜನಿಕರನ್ನು ಕೆರಳಿಸಿದೆ. 60 ಹಾಸಿಗೆಯ ಸೌಲಭ್ಯವುಳ್ಳ ಈ ಆಸ್ಪತ್ರೆೆ ಆರಂಭವಾದರೆ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಅನುಕೂಲವಾಗಲಿದೆ. ಆದರೆ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳ ನಿರಾಸಕ್ತಿ ಆಸ್ಪತ್ರೆಗೆ ಐದು ವರ್ಷವಾದರೂ ಉದ್ಘಾಟನೆಯ ಭಾಗ್ಯ ದೊರೆತಿಲ್ಲ ಎನ್ನುವುದು ಸಾರ್ವಜನಿಕರ ಆಪಾದನೆಯಾಗಿದೆ.

ಮುಂದಿನ ಕಾಂಪೌಂಡ್ ಆಯ್ತು, ಹಿಂದಿನ ಕೌಂಪೌಂಡ್ ಇಲ್ಲ !
ಆಸ್ಪತ್ರೆಯ ಮುಂಬದಿ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ ಹಿಂಬದಿ ಕಾಂಪೌಂಡ್ ನಿರ್ಮಿಸಿಲ್ಲ. ಹಿಂಬದಿ ಕಾಂಪೌಂಡ್ ನಿರ್ಮಿಸಲು ಬಜೆಟ್ ಕೊರತೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಯ ಒಂದು ಬದಿ ಕಡಿದಾದ ವಾತಾವರಣವಿದ್ದು, ಜನರ ಓಡಾಟಕ್ಕೆ ಮತ್ತು ಆಸ್ಪತ್ರೆಗೆ ಬರುವವರಿಗೆ ತೊಂದರೆ ಯಾಗಲಿದೆ. ಆವರಣದಲ್ಲಿ ಕಾಂಕ್ರಿಟ್ ನೆಲಹಾಸು ಹಾಕಲಾಗಿದ್ದು, ಅಲ್ಲಲ್ಲಿ ಹಾಗೆಯೇ ಬಿಡಲಾಗಿದೆ. ಕೆಲವೊಂದು ಕಡೆ ತಗ್ಗು-ದಿನ್ನೆಗಳಿದ್ದು ಗೋಡೆಗೆ ಹೊಂದಿಕೊಂಡು ಮಳೆ ನೀರು ನಿಂತಿದೆ. ಇಲ್ಲಿ ಕಾಂಕ್ರಿಟ್ ನೆಲಹಾಸು ಹಾಕದೇ ಇದ್ದರೆ ಕಟ್ಟಡಕ್ಕೆ ತೊಂದರೆಯಾಗಲಿದೆ.

ಏರ್ ರಿಸೀವರ್ ಸ್ಥಳದಲ್ಲಿ ಅವ್ಯವಸ್ಥೆ ?
ಆಸ್ಪತ್ರೆಯ ಹಿಂಭಾಗದ ಸ್ಥಳದಲ್ಲಿ ಎರಡು ಏರ್ ರಿಸೀವರ್‌ಗಳನ್ನು ಅಳವಡಿಸಿದ್ದು, ಈ ಸ್ಥಳದಲ್ಲಿ ಅವ್ಯವಸ್ಥೆ ಇದೆ. ಮರಂ ಹಾಕಿದ ನೆಲದ ಮೇಲೆ ರಿಸೀವರ್‌ವೊಂದಕ್ಕೆ ಕಬ್ಬಿಣದ ಸರಳಿನ ಮೂಲಕ ಆಸರೆ ಒದಗಿಸಲಾಗಿದೆ. ಜೋರು ಗಾಳಿ-ಮಳೆ ಸಂದರ್ಭದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಅತ್ಯಂತ ನಿಗಾ ವಹಿಸಬೇಕಾದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿರುವುದಿಲ್ಲ.

ಪೂರ್ಣ ಪ್ರಮಾಣದ ಯಂತ್ರೋಪಕರಣಗಳು ಬಂದಿಲ್ಲ ?
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಇಂದು, ನಾಳೆ ಎನ್ನುತ್ತಾ ದಿನದೂಡತ್ತಲೇ ಬರಲಾಗುತ್ತಿತ್ತು. ಆದರೆ ಕೊನೆ ಗಳಿಗೆಯಲ್ಲಿ ಇದೇ ತಿಂಗಳು ಸೆ.27ರಂದು ಉದ್ಘಾಟನೆಯಾಗುತ್ತಿದ್ದರೂ ಪೂರ್ಣ ಪ್ರಮಾಣದ ಯಂತ್ರೋಪಕರಣಗಳು ಬಂದಿಲ್ಲ. ಈಗಾಗಲೇ ಅಲ್ಪಸ್ವಲ್ಪ ಬಂದ ಯಂತ್ರೋಪಕರಣಗಳನ್ನು, ಬೆಡ್‌ಗಳನ್ನು ಅಳವಡಿಸುವ ಕೆಲಸ ಮುಗಿದಿದೆ. ವಾರ್ಡ್, ಒಟಿ ವಿಭಾಗವಾರು ಕೊಠಡಿಗಳಿಗೆ ಹೆಸರು ನಮೂದಿಸಲಾಗಿದೆ. ಬರಬೇಕಾದ ಯಂತ್ರೋಪರಣಗಳು ಹಾಗೂ ಅಗತ್ಯ ಪರಿಕರ, ಸಾಮಗ್ರಿಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ವೈದ್ಯರು, ಸಿಬ್ಬಂದಿ ನೇಮಕ ಪ್ರಕ್ರಿಯೆ
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಡಾ.ನಾಗರಾಜ ಕಾಟ್ವಾ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ತಾಲೂಕು ಆಸ್ಪತ್ರೆಯ ಸಿಎಂಒ ಆಗಿದ್ದ ಕಾಟ್ವಾ ಪ್ರಸೂತಿ ವಿಭಾಗದಲ್ಲಿಯೂ ತಜ್ಞ ವೈದ್ಯರಾಗಿದ್ದು, ಆಸ್ಪತ್ರೆ ಬೇಗ ಕಾರ್ಯಾಚರಣೆ ಆರಂಭಿಸಿದರೆ ಜನರಿಗೆ ಅನುಕೂಲವಾಗಲಿದೆ.ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನೇಮಕ ಪ್ರಕ್ರಿಯೆ ಮುಗಿದಿದೆ ಎಂದು ಹೇಳಲಾಗುತ್ತಿದ್ದು, ಡಿ ಗ್ರೂಪ್ ನೌಕರರು ಸೇರಿದಂತೆ ಇನ್ನಿತರೆ ಕೆಲಸಗಾರರ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಗೊತ್ತಾಗಿದೆ.
ಉದ್ಘಾಟನೆಯೂ ವಿಳಂಬ, ಸೇವೆಯೂ ಇನ್ನಷ್ಟು ವಿಳಂಬ ?
ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಾಲ್ವರು ಮಹಿಳೆಯರು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಿಯೋಗ ತೆರಳಿ ಸಿಂಧನೂರು ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದ ಬೆನ್ನೆಲ್ಲೆ ಎರಡ್ಮೂರು ತಿಂಗಳಲ್ಲಿ ಆಸ್ಪತ್ರೆ ಉದ್ಘಾಟಿಸಿ, ಸಾರ್ವಜನಿಕ ಸೇವೆಗೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ 1 ವರ್ಷ ಕಳೆದ ಮೇಲೂ ಇನ್ನೂ ಉದ್ಘಾಟನೆ ಜಪ ಮಾಡುತ್ತಿರುವುದಲ್ಲದೇ, ಆಸ್ಪತ್ರೆ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಹಲವು ಸೌಕರ್ಯ ಕೊರತೆ ಇರುವುದು ಗಮನಿಸಿದರೆ, ಇನ್ನೆಷ್ಟು ದಿನವಾಗುತ್ತದೆಯೋ ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆ ಪಡೆಯಲು ಎನ್ನುವ ಅಸಮಾಧಾನ ವ್ಯಕ್ತವಾಗಿದೆ.
