ಸಿಂಧನೂರು: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಟ್ರ್ಯಾಕ್ಟರ್‌ನ್ನು ಹಗ್ಗದಿಂದ ಎಳೆದು ಪ್ರತಿಭಟನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಜೂನ್ 05, 2026

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಗ್ಯಾಸ್, ಸಿಎನ್‌ಜಿ ಬೆಲೆಯನ್ನು ಮೇಲಿಂದ ಮೇಲೆ ಏರಿಕೆ ಮಾಡುವ ಮೂಲಕ ದೇಶದ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಈ ಕೂಡಲೇ ಇಂಧನಗಳ ಬೆಲೆ ಇಳಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಬಸವ ಸರ್ಕಲ್‌ನಿಂದ ತಹಸೀಲ್ದಾರ್ ಕಚೇರಿವರೆಗೆ ಟ್ರ್ಯಾಕ್ಟರ್‌ನ್ನು ಹಗ್ಗದಿಂದ ಎಳೆದು ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
5 ರಾಜ್ಯಗಳ ಚುನಾವಣೆಗಳಲ್ಲಿ ಭರಪೂರ ಭರವಸೆಗಳನ್ನು ನೀಡಿ, ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ. ಇಂಧನ ಬೆಲೆ ಏರಿಕೆ ಕೇವಲ ಪೆಟ್ರೋಲ್, ಡೀಸೆಲ್ ಬಳಕೆದಾರರಿಗೆ ಮಾತ್ರ ಸಂಬಂಧಪಟ್ಟ ವಿಚಾರ ಮಾತ್ರವಲ್ಲದೇ ಸಮಾಜದ ಜನಜೀವನದ ಬಹುತೇಕ ವಲಯಗಳ ಮೇಲೆ ಪರಿಣಾಮ ಬೀರುತ್ತದೆ ಸರಕುಗಳ ಬೆಲೆ ದುಬಾರಿಯಾಗಿ, ಜನರ ಕೊಳ್ಳುವ ಶಕ್ತಿ ಕ್ಷೀಣಗೊಂಡಿದೆ. ಈಗಾಗಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರನ್ನು ಇದು ಮತ್ತಷ್ಟು ಬಿಕ್ಕಟ್ಟಿಗೆ ತಳ್ಳಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ಇಂಧನ ಬೆಲೆ ಏರಿಸಿ ದೇಶದ ಜನರ ಮೇಲೆ ಬಿಜೆಪಿ ಹೊರೆ ಹೊರಿಸಿದೆ : ಚಂದ್ರಶೇಖರ ಗೊರಬಾಳ
ಈ ಸಂದರ್ಭದಲ್ಲಿ ಸಂಘಟನೆಯ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, “ದೇಶದ ಒಟ್ಟು ಸರಕು ಸಾಗಣೆಯಲ್ಲಿ ರಸ್ತೆ ಸಾರಿಗೆಯ ಪಾಲು ಶೇ.71ರಷ್ಟಿದೆ. ಬಸ್ ಪ್ರಯಾಣ, ಲಾರಿ ಟ್ರಾನ್ಸ್‌ಪೋರ್ಟ್‌, ಮಕ್ಕಳ ವಾಹನ ವೆಚ್ಚ ಎಲ್ಲವೂ ಶೇ.15 ರಿಂದ 20ರಷ್ಟು ಹೆಚ್ಚಳಗೊಂಡಿವೆ. ತೈಲ ಬೆಲೆ ಹೆಚ್ಚಳದಿಂದ ದಿನಬಳಕೆ ಅಗತ್ಯ ವಸ್ತುಗಳು ಅಷ್ಟೇ ಅಲ್ಲದೇ ರಸಗೊಬ್ಬರ ಸೇರಿದಂತೆ ನೂರಾರು ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಸ್ತುತ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರಿಗೆ ರಸಗೊಬ್ಬರ ಕೊರತೆಯಾಗಿದೆ. ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಪೆಟ್ರೋಲ್ ಬಂಕ್‌ಗಳ ಮುಂದೆ ಕ್ಯಾನ್ ಹಿಡಿದು ನಿಲ್ಲುವಂತಾಗಿದೆ. ದಿನವಿಡೀ ಸರದಿ ಸಾಲಲ್ಲಿ ನಿಂತರೂ ಎಲ್‌ಪಿಜಿ ಗ್ಯಾಸ್‌ಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗದಂತಾಗಿವೆ. ಕಳೆದ 12 ವರ್ಷದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಜನಸಾಮಾನ್ಯರಿಂದ 57 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 1 ಬ್ಯಾರೆಲ್‌ಗೆ 70 ಡಾಲರ್ ಇದ್ದಾಗ್ಯೂ ತೈಲ ಕಂಪನಿಗಳು ಪೆಟ್ರೋಲ್ ಲೀಟರ್‌ಗೆ 100 ರೂಪಾಯಿಗೆ ಮಾರಾಟ ಮಾಡಿ ಲಕ್ಷಾಂತರ ಕೋಟಿ ಲಾಭ ಮಾಡಿದ್ದವು. ಕೊರೊನಾ ಸಂದರ್ಭ ಮತ್ತು ಉಕ್ರೇನ್-ರಷ್ಯಾ ಯುದ್ಧ ಆರಂಭವಾದ ನಂತರ ರಷ್ಯಾದಿಂದ ಅತ್ಯಂತ ಕಡಿಮೆ ದರದಲ್ಲಿ ಭಾರತ ಕಚ್ಚಾತೈಲ ಆಮದು ಮಾಡಿಕೊಂಡು 6 ಲಕ್ಷ ಕೋಟಿ ಲಾಭ ಮಾಡಿಕೊಂಡಾಗ್ಯೂ ಅದರ ಲಾಭವನ್ನು ಇಲ್ಲಿನ ಗ್ರಾಹಕರಿಗೆ ಕಿಂಚಿತ್ತೂ ವರ್ಗಾಯಿಸಿಲ್ಲ. ಆದರೆ ಈಗ ಆಗಿರುವ ಅಲ್ಪಸ್ವಲ್ಪ ಕಚ್ಚಾತೈಲದ ಬೆಲೆ ಏರಿಳಿತವನ್ನು ನಷ್ಟವೆಂದು ಬಿಂಬಿಸಿ ಬಿಜೆಪಿ ಸರ್ಕಾರ ದೇಶದ ಜನರ ತಲೆಮೇಲೆ ಹೊರೆ ಹೊರಿಸಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ಬಡವರು ಮತ್ತು ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ : ಡಿ.ಎಚ್.ಪೂಜಾರ್ ಆಕ್ರೋಶ
ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಮಾತನಾಡಿ “ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದೇಶದಲ್ಲಿ ಹಾಹಾಕಾರ ಸೃಷ್ಟಿಯಾಗಿದ್ದು, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇದರಿಂದ ದುಡಿಯುವ ಜನರು, ರೈತರು, ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೇ 15ರಿಂದ ಮೇ 25ರ ಒಳಗೆ ಕೇವಲ 11 ದಿನಗಳಲ್ಲಿ ಪೆಟ್ರೋಲ್ 7.50 ರೂಪಾಯಿ ಹಾಗೂ ಡಿಸೇಲ್ 7.50 ರೂಪಾಯಿ ಹಾಗೂ ವಾಣಿಜ್ಯ ಸಿಲಿಂಡರ್ ಗ್ಯಾಸ್ ಬೆಲೆಯನ್ನು 3113 ರೂಪಾಯಿಗೆ ಏರಿಕೆ ಮಾಡಿದೆ. ಅಲ್ಲದೇ ಇಷ್ಟರಲ್ಲೇ ಇನ್ನೂ 10 ರೂಪಾಯಿವರೆಗೆ ಏರಿಕೆ ಮಾಡಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 95 ಡಾಲರ್‌ಗೆ ಇಳಿದರೂ ಬೆಲೆ ಏರಿಕೆಯನ್ನು ಮುಂದುವರಿಸಲಾಗಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

Namma Sindhanuru Click For Breaking & Local News

ಗ್ಯಾಸ್ ಬೆಲೆ ತುಟ್ಟಿ, ಹೊಗೆಮುಕ್ತ ಮನೆ ಎಲ್ಲಿ: ಮಹಿಳಾ ಮುಖಂಡೆ ವಿರುಪಮ್ಮ ಪ್ರಶ್ನೆ
ಗ್ರಾಕೂಸ್ ಮಹಿಳಾ ಮುಖಂಡರಾದ ವಿರುಪಮ್ಮ ಮಾತನಾಡಿ, “ಹೊಗೆಮುಕ್ತ ಮನೆಯ ಹೆಸರಿನಲ್ಲಿ ಉಜ್ವಲ ಯೋಜನೆಯನ್ನು ಜಾರಿಗೆ ತಂದು, ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ನಾಲ್ಕೆöÊದು ನೂರು ರೂಪಾಯಿಗೆ ಸಿಗುತ್ತಿದ್ದ 14.2 ಕೆ.ಜಿ.ಯ ಗ್ಯಾಸ್ ಸಿಲಿಂಡರ್‌ನ್ನು 933 ರೂಪಾಯಿವರೆಗೆ ಏರಿಸಿದ್ದರಿಂದ ಗ್ಯಾಸ್ ಕೊಳ್ಳಲಾಗದ ಮಹಿಳೆಯರು ಪುನಃ ಕಟ್ಟಿಗೆ ಒಲೆಗೆ ಮೊರೆ ಹೋಗುತ್ತಿದ್ದು, ಮತ್ತೆ ಹೊಗೆಯಲ್ಲಿ ದಿನವೂ ಕಣ್ಣೀರು ಸುರಿಸುವಂತಾಗಿದೆ” ಎಂದು ಹೇಳಿದರು.
ಮೋದಿ ಸರ್ಕಾರ ದೇಶದ ಜನರ ಹಿತಾಸಕ್ತಿ ಬಲಿಕೊಟ್ಟಿದೆ: ನಾಗರಾಜ್ ಪೂಜಾರ
ಕಾರ್ಮಿಕ ಮುಖಂಡ ನಾಗರಾಜ್ ಪೂಜಾರ್ ಮಾತನಾಡಿ, “ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹನ್ನೆರಡು ವರ್ಷಗಳಿಂದ ಕಾರ್ಪೋರೇಟ್ ಕಂಪನಿಗಳಿಗೆ ಭಾರಿ ಆದಾಯ ತೆರಿಗೆ ರಿಯಾಯಿತಿ ನೀಡಿ ಈ ಹಿಂದೆ ಶೇ.30 ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಸಲಾಗಿದೆ. ‘ಎನ್‌ಪಿಎ ಮತ್ತು ರೈಟ್‌ಆಫ್’ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳ 21 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಇಂತಹ ಹತ್ತು ಹಲವು ಕಾರಣಗಳಿಂದ ದೇಶದ ಆರ್ಥಿಕತೆ ಕುಸಿದಿದೆ. ಅಮೆರಿಕಾದ ಹಿತಾಸಕ್ತಿಗಾಗಿ ಮೋದಿ ಸರ್ಕಾರ ದೇಶದ ಜನರ ಹಿತಾಸಕ್ತಿಯನ್ನೇ ಬಲಿಕೊಟ್ಟಿದೆ. ಬಿಜೆಪಿ ಸರ್ಕಾರದ ವಿದೇಶಾಂಗ ಹಾಗೂ ಕಾರ್ಪೋರೇಟ್ ಪರವಾದ ನೀತಿಗಳ ಜಾರಿಯಿಂದ ಜನರ ಜೀವನ ಬೀದಿಗೆ ಬಿದ್ದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಬೇಕು: ಬಸವಂತರಾಯಗೌಡ
ಬಸವಂತರಾಯಗೌಡ ಮಾತನಾಡಿ, “ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಗ್ಯಾಸ್ ಬೆಲೆಯನ್ನು ಇಳಿಕೆ ಮಾಡಬೇಕು ಹಾಗೂ ರೈತರಿಗೆ ಅಗತ್ಯವಾಗಿರುವ ರಸಗೊಬ್ಬರವನ್ನು ಪೂರೈಸಬೇಕು ಹಾಗೂ ದೇಶದಲ್ಲಿ ಇಂಧನ ಕೊರತೆಯಾಗದಂತೆ ಸೂಕ್ತ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.

Namma Sindhanuru Click For Breaking & Local News

ಹಕ್ಕೊತ್ತಾಯಗಳು:
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಗ್ಯಾಸ್ ಹಾಗೂ ದಿನಬಳಕೆ ಅಗತ್ಯ ವಸ್ತುಗಳ ಬೆಲೆಗಳನ್ನು ತಕ್ಷಣವೇ ಇಳಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್, ಪೆಟ್ರೋಲ್ ಮೇಲೆ ವಿಧಿಸುವ ಸುಂಕ ಮತ್ತು ತೆರಿಗೆಗಳನ್ನು ಕಡಿತಗೊಳಿಸಬೇಕು, ರಸಗೊಬ್ಬರ ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗಿರುವುದರಿಂದ ರೈತರ ಅಗತ್ಯಕ್ಕೆ ತಕ್ಕಂತೆ ಪೂರೈಸಬೇಕು ಹಾಗೂ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗದಂತೆ ಕ್ರಮವಹಿಸಬೇಕು, ಸಾಗಣೆ ಮತ್ತು ಸಾರಿಗೆ ವೆಚ್ಚವನ್ನು ತಗ್ಗಿಸಲು ಟೋಲ್‌ಗೇಟ್‌ಗಳಲ್ಲಿ ವಾಹನಗಳಿಗೆ ವಿಧಿಸುವ ಶುಲ್ಕವನ್ನು ಕಡಿತಗೊಳಿಸಬೇಕು, ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಗ್ಯಾಸ್ ದೇಶೀಯ ಉತ್ಪಾದನೆ, ಆಮದು ಮತ್ತು ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸದೇ ಸರ್ಕಾರವೇ ನಿಯಂತ್ರಿಸಬೇಕು, ಅಮೆರಿಕಾ ದೇಶದ ನಿರ್ಬಂಧಗಳಿಗೆ ಭಾರತವು ತಲೆಬಾಗದೇ ಕಡಿಮೆ ಬೆಲೆ ಮತ್ತು ಯಾವುದೇ ಷರತ್ತುಗಳಿಲ್ಲದೇ ತೈಲ ಪೂರೈಸುವ ದೇಶಗಳಿಂದ ಅಗತ್ಯಕ್ಕೆ ತಕ್ಕಷ್ಟು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ರಸಗೊಬ್ಬರವನ್ನು ಆಮದು ಮಾಡಿಕೊಂಡು ಸಮರ್ಪಕವಾಗಿ ಪೂರೈಕೆ ಮಾಡಬೇಕು, ತೈಲ ಪೂರೈಕೆ ಬಿಕ್ಕಟ್ಟಿಗೆ ಕಾರಣವಾಗಿರುವ ಇರಾನ್ ಮೇಲೆ ಇಸ್ರೇಲ್-ಅಮೆರಿಕಾದ ಆಕ್ರಮಣವನ್ನು ಖಂಡಿಸಬೇಕು ಮತ್ತು ಶಾಂತಿ ಒಪ್ಪಂದಕ್ಕಾಗಿ ಭಾರತ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂಬ ಹಕ್ಕೊತ್ತಾಯಗಳ ಮನವಿಯನ್ನು ಶಿರಸ್ತೆದಾರ್ ಅಂಬಾದಾಸ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಚ್.ಪೂಜಾರ್, ಭಾಷುಮಿಯಾ, ಚಂದ್ರಶೇಖರ ಕ್ಯಾತ್ನಟ್ಟಿ, ಡಿ.ಎಚ್.ಕಂಬಳಿ, ರಮೇಶ ಪಾಟೀಲ್ ಬೇರಿಗಿ, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಹುಸೇನ್‌ಸಾಬ್, ದೇವೇಂದ್ರಗೌಡ ಸಮುದಾಯ, ಬಸವರಾಜ ಎಕ್ಕಿ, ಖಾಸಿಂಸಾಬ್ ಕಾರ್ಪೆಂಟರ್, ಕೃಷ್ಣಮೂರ್ತಿ ದುಮತಿ, ಹಾಜಿಸಾಬ್, ಬಸವರಾಜ ಬಾದರ್ಲಿ, ವೀರೇಶ, ಶಂಕರ ಗುರಿಕಾರ, ಮಂಜುನಾಥ ಗಾಂಧಿನಗರ, ಎಂ.ಗೋಪಾಲಕೃಷ್ಣ, ಕೆ.ಮರಿಯಪ್ಪ, ಹನುಮಂತ, ಪಾಂಡುರಂಗ, ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ಗಂಗಪ್ಪ ಹೊಸಳ್ಳಿ, ಬಾಷಾಸಾಬ್, ಮೂರ್ತೆಪ್ಪ, ಶರಣಪ್ಪ ಮೂರ್‌ಮೈಲ್‌ಕ್ಯಾಂಪ್, ಸುಭಾನ್‌ಸಾಬ್, ಭೀಮನಗೌಡ, ಆದೇಶ ಇನ್ನಿತರರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *