ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಗಸ್ಟ್ 05, 2026
ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 59 ಟಿಎಂಸಿ ನೀರು ಸಂಗ್ರಹವಾಗಿದೆ. 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇನ್ನೂ ಐದಾರು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ವಿಶ್ವಾಸವಿದ್ದು, ಕೂಡಲೇ ಸರ್ಕಾರ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ಆಗಸ್ಟ್ 6, 2026ರಿಂದಲೇ ಎಡದಂಡೆ ನಾಲೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚೂನಪ್ಪ ಪೂಜೇರಿ ಬಣ) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ ಸುಲ್ತಾನಪುರ ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಬಾರಿ ಡ್ಯಾಂನಲ್ಲಿ ನೀರಿದ್ದರೂ ಗೇಟ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಮುಂಗಾರು ಬೆಳೆಗೆ ಮಾತ್ರ ನೀರು ಹರಿಸಲಾಯಿತು. ಪ್ರಸ್ತುತ ಜಲಾಶಯದಲ್ಲಿ ನೀರಿದ್ದರೂ ಸಹ ಈ ಬಾರಿಯೂ ವಿಳಂಬ ಮಾಡಲಾಗುತ್ತಿದೆ. ಈಗಾಗಲೇ ರೈತರು ಕಳೆದ ಎರಡು ತಿಂಗಳ ಹಿಂದೆಯೇ ಸಸಿಮಡಿ ಹಾಕಿದ್ದು, ವಿಳಂಬವಾಗಿ ಕಾಲುವೆಗೆ ನೀರು ಹರಿಸಿದರೆ ನಷ್ಟ ಅನುಭವಿಸಲಿದ್ದಾರೆ. ಅಲ್ಲದೇ ಟೇಲೆಂಡ್ ಭಾಗದ ರೈತರ ಜಮೀನುಗಳಿಗೆ ನೀರು ತಲುಪುವುದು ಕಷ್ಟವಾಗುತ್ತದೆ. ಹಾಗಾಗಿ ಜಲಸಂಪನ್ಮೂಲ ಇಲಾಖೆ ಹಾಗೂ ಸರ್ಕಾರ ಈ ಕೂಡಲೇ ರೈತರ ನೆರವಿಗೆ ಬರಬೇಕು” ಎಂದು ಒತ್ತಾಯಿಸಿದರು.
‘ಕೃಷಿ ಕೂಲಿಕಾರರಿಗೆ ಕೆಲ್ಸ ಇಲ್ಲ’
“ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೃಷಿಕೂಲಿಕಾರರು, ರೈತರು ಕಳೆದ 10 ತಿಂಗಳಿನಿಂದ ಕೆಲಸವಿಲ್ಲದೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೂ ಕೆಲವರು ಬೆಂಗಳೂರಿಗೆ ಕೆಲಸ ಅರಸಿ ಗುಳೆ ಹೋಗಿದ್ದು, ಅಲ್ಲಿಯೂ ವಲಸೆ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಇನ್ನೂ ವಿಬಿ-ರಾಮ್‌ಜಿ (ಹಳೆ ನರೇಗಾ) ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ದೊರೆಯದೇ ಇರುವುದರಿಂದ ಕೃಷಿ ಕೂಲಿಕಾರರು ಜೀವನ ನಿರ್ವಹಣೆ ಸಮಸ್ಯೆಗೆ ಅನುಭವಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
