ಸಿಂಧನೂರು: ಬಿಜೆಪಿ ಮುಖಂಡ ಕೆ.ಕರಿಯಪ್ಪರ 60ನೇ ಜನ್ಮ ದಿನೋತ್ಸವ: ಶಕ್ತಿ ಪ್ರದರ್ಶನಕ್ಕೆ ಅಭಿಮಾನಿಗಳು ಸಜ್ಜು !

Spread the love

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 16, 2026

ಬಿಜೆಪಿಯ ಹಿರಿಯ ಮುಖಂಡ ಕೆ.ಕರಿಯಪ್ಪ ಅವರ 60ನೇ ಜನ್ಮ ದಿನೋತ್ಸವದ ಪ್ರಯುಕ್ತ ದಿ: 18-07-2026ರಂದು ನಗರದ ಸತ್ಯಾ ಗಾರ್ಡನ್‌ನಲ್ಲಿ ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಹಿತೈಷಿಗಳು ಬೃಹತ್ ಸಮಾರಂಭ ಆಯೋಜಿಸಿದ್ದು, ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಜನ್ಮ ದಿನೋತ್ಸವದ ಜೊತೆಗೆ ಯಾಗ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುವುದರಿಂದ, ಈ ಸಮಾರಂಭದಲ್ಲಿ ಕೆ.ಕರಿಯಪ್ಪ ಅವರ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಬೃಹತ್ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ್ಮ ದಿನೋತ್ಸವ ಸಮಾರಂಭದ ಕುರಿತಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣ ಹಾಗೂ ಬ್ಯಾನರ್‌ಗಳ ಮೂಲಕ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ.
ಮಾಜಿ ಸಂಸದರು ಸಾಥ್
“ಇತ್ತೀಚಿಗೆ ತಾಲ್ಲೂಕಿನ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಕೆ.ಕರಿಯಪ್ಪ ಅವರು ನಿರಂತರವಾಗಿ ಕಾರ್ಯಕರ್ತರು ಹಾಗೂ ಪಕ್ಷದ ಮುಂದಾಳುಗಳ ಸಭೆ ನಡೆಸಿದ್ದಾರೆ. ಈ ವೇಳೆಯೇ ಜನ್ಮ ದಿನೋತ್ಸವ ಆಚರಿಸುತ್ತಿರುವುದರಿಂದ ಸಾವಿರಾರು ಕಾರ್ಯಕರ್ತರು ಸೇರುವೆ ನಿರೀಕ್ಷೆ ಇದೆ. ಮಾಜಿ ಸಂಸದರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಕೆ.ವಿರೂಪಾಕ್ಷಪ್ಪ ಅವರು ಈ ಬೃಹತ್ ಸಮಾರಂಭಕ್ಕೆ ಸಾಥ್ ನೀಡಿದ್ದು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ” ಎಂದು ಕಾರ್ಯಕರ್ತರೊಬ್ಬರು ಹೇಳುತ್ತಾರೆ.
ಬಿಜೆಪಿ ಪಕ್ಷದ ಪ್ರಮುಖರು ಭಾಗಿ
ಈ ಸಮಾರಂಭದಲ್ಲಿ ಬಿಜೆಪಿ ಪಕ್ಷದ ರಾಜ್ಯಮಟ್ಟದ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಬಿಜೆಪಿಯ ಪ್ರಮುಖ ಮುಖಂಡರ ಭಾವಚಿತ್ರವುಳ್ಳ ಬ್ಯಾನರ್‌ಗಳು ರಾಯಚೂರು, ಗಂಗಾವತಿ ಹಾಗೂ ಕುಷ್ಟಗಿ ಮಾರ್ಗದ ರಸ್ತೆ ಬದಿಯಲ್ಲಿ ರಾರಾಜಿಸುತ್ತಿವೆ.
ಎಮ್ಮೆಲ್ಲೆ ಎಲೆಕ್ಷನ್‌ನಲ್ಲಿ 2 ಬಾರಿ ತೀವ್ರ ಪೈಪೋಟಿ
ಕೆ.ಕರಿಯಪ್ಪ ಅವರು ಈ ಹಿಂದೆ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಎರಡು ಬಾರಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಮೊಟ್ಟದ ಮೊದಲ ಬಾರಿಗೆ ಬಿಎಸ್‌ಆರ್‌ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಅವರು 36,197 (ಶೇ.34.24) ಮತಗಳನ್ನು ಪಡೆದುಕೊಂಡಿದ್ದರು. ವಿಜೇತ ಅಭ್ಯರ್ಥಿ ಬಾದರ್ಲಿ ಹಂಪನಗೌಡ ಅವರಿಗೆ 49,213 ಮತಗಳು ಬಂದಿದ್ದವು. ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಅವರು 30,895 ಮತಗಳನ್ನು ಪಡೆದಿದ್ದರು.
ಎರಡನೇ ಬಾರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿದ್ದ ಕೆ.ಕರಿಯಪ್ಪ ಅವರು 51,703 ಮತಗಳನ್ನು ಗಳಿಸಿದ್ದರು. ವಿಜೇತ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಅವರಿಗೆ 73,645 ವೋಟುಗಳು ದೊರಕಿದ್ದವು. ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಅವರು 43,461 ಮತಗಳನ್ನು ಪಡೆದುಕೊಂಡಿದ್ದರು. 2 ಬಾರಿ ಸ್ಪರ್ಧಿಸಿದಾಗ್ಯೂ ಪ್ರತಿ ಸಲ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
‘ಅನುಕಂಪದ ಬಲ’ದ ನಿರೀಕ್ಷೆ ?
“ಎರಡು ಬಾರಿ ಸ್ಪರ್ಧಿಸಿ ರನ್ನರ್ ಅಪ್ ಆಗಿರುವ ಕೆ.ಕರಿಯಪ್ಪ ಅವರು, ಪುನಃ ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಾರಿ ಅನುಕಂಪದ ಬಲವನ್ನು ಅವರು ನೆಚ್ಚಿಕೊಂಡಿದ್ದಾರೆ. ಎರಡು ಬಾರಿ ಪರಾಭವಗೊಂಡಿದ್ದರಿAದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಅನುಕಂಪದ ಅಲೆ ಕೆಲಸ ಮಾಡಲಿದೆ, ಇನ್ನೂ ಚುನಾವಣೆಯ ಸಂದರ್ಭದಲ್ಲಿ ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಮತದಾರರನ್ನು ಸೆಳೆದರೆ ವರ್ಕೌಟ್ ಆಗಲಿದೆ” ಎಂದು ಅವರ ಬೆಂಬಲಿಗರೊಬ್ಬರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.


Spread the love

Leave a Reply

Your email address will not be published. Required fields are marked *