ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಜುಲೈ 12, 2026
ನಗರದ ಕುಷ್ಟಗಿ ಮಾರ್ಗದ ರಸ್ತೆ ಬದಿಯಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಎನ್ನುವ ಮಾತುಗಳು ವಿದ್ಯಾರ್ಥಿ ಪಾಲಕರಿಂದ ಕೇಳಿಬಂದಿವೆ.
ಸದ್ಯದ ಹಳೆಯ ಕಟ್ಟಡದ ಹಲವು ತರಗತಿ ಕೊಠಡಿಗಳು ಶಿಥಿಲಗೊಂಡಿದ್ದು, ಜೋರು ಮಳೆ ಬಂದರೆ ಸೋರುತ್ತಿವೆ. ಇನ್ನೂ ಕೆಲ ಕೊಠಡಿಗಳು ತರಗತಿ ನಡೆಸಲು ಯೋಗ್ಯವಾಗಿಲ್ಲ. ಹೀಗಾಗಿ ಇಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಕೊಠಡಿ ಕೊರತೆಯನ್ನು ಎದುರಿಸುತ್ತಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ.
2000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು
ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ನಿಷ್ಕಾಳಜಿ ವಹಿಸಿದೆ ಎಂಬ ಆರೋಪಗಳಿವೆ. ಹಳೆಕಟ್ಟಡದಲ್ಲಿ ಅಭ್ಯಾಸಕ್ಕೆ ಅಡೆತಡೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು ಹೊಸ ಕಟ್ಟಡ ಪೂರ್ಣಗೊಳ್ಳುವುದನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳುವ ಮುನ್ಸೂಚನೆ ಕಂಡುಬರುತ್ತಿಲ್ಲ ಎಂದು ವಿದ್ಯಾರ್ಥಿ ಸಂಘಟನೆಯ ಮುಖಂಡರೊಬ್ಬರು ಹೇಳುತ್ತಾರೆ.

ಸುವರ್ಣ ಮಹೋತ್ಸವ ಆಚರಿಸಿದ ಕಾಲೇಜು
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅದರಲ್ಲೂ ತಾಲೂಕು ಕೇಂದ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಗೊಂಡ ಪ್ರಪ್ರಥಮ ಕಾಲೇಜಾಗಿದೆ. ಕಳೆದ ಮೂರು ವರ್ಷಗಳ ಹಿಂದೆಯೇ ಈ ಕಾಲೇಜು 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸಿದೆ.
ಪದವಿ ಕಾಲೇಜಿನ ಕಟ್ಟಡಗಳು ಹಳೆಯದಾಗಿರುವುದರಿಂದ ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತ ವಾಗಿ ಹೊಸ ಕಟ್ಟಡ ನಿರ್ಮಿಸಲು ಶಾಸಕ ಹಂಪನಗೌಡ ಬಾದರ್ಲಿ ಅವರು ಸರ್ಕಾರದ ಗಮನ ಸೆಳೆದಿದ್ದರು. ಕಳೆದ ದಸರಾ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನಗರಕ್ಕೆ ಆಗಮಿಸಿದ ವೇಳೆ ಹೊಸ ಕಾಲೇಜು ಕಟ್ಟಡಕ್ಕೆ ಅನುದಾನ ಒದಗಿಸಿ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆದಿದೆ ಎಂಬ ದೂರುಗಳಿವೆ.

ಶಾಸಕರಿಂದ ಪರಿಶೀಲನೆ
ಉದ್ದೇಶಿತ ಪದವಿ ಮಹಾವಿದ್ಯಾಲಯದ ನೀಲನಕ್ಷೆ, ಜಾಗ ಹಾಗೂ ಕ್ರೀಡಾಂಗಣ ಪ್ರದೇಶವನ್ನು ದಿನಾಂಕ: 15-07-2025ರಂದು ಶಾಸಕ ಹಂಪನಗೌಡ ಬಾದರ್ಲಿಯವರು ವೀಕ್ಷಿಸಿ ಎಂಜಿನಿಯರ್ ಸೇರಿದಂತೆ ಕಾಲೇಜಿನ ಸಿಬ್ಬಂದಿಯೊಂದಿಗೆ ಕೆಲಕಾಲ ಚರ್ಚಿಸಿದ್ದರು. ಪದವಿ ಮಹಾವಿದ್ಯಾಲಯದ ಆವರಣ ದೊಡ್ಡದಾಗಿದ್ದು, ಈ ಜಾಗವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸುಸಜ್ಜಿತ ಮತ್ತು ಆಧುನಿಕ ಶೈಲಿಯಲ್ಲಿ ವಿವಿ ಮಾದರಿಯಲ್ಲಿ ಮಹಾವಿದ್ಯಾಲಯ ಕಟ್ಟಡ ನಿರ್ಮಿಸಬೇಕು. ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ನಿರ್ಮಿಸುವುದು ಹಾಗೂ ಎಲ್ಲ ರೀತಿಯ ಅಗತ್ಯ ಸೌಕರ್ಯ ಕಲ್ಪಿಸುವುದು ಕುರಿತಂತೆ ಚರ್ಚಿಸಲಾಗಿತ್ತು.
ಹೊಸ ಕಟ್ಟಡದ ವಿಶೇಷತೆ
ಕ್ಯಾಂಪಸ್ ಆವರಣದಲ್ಲಿ ಉದ್ಯಾನವನ, ಸುಸಜ್ಜಿತ ಕ್ರೀಡಾಂಗಣ, ಕಾರ್ಪಾರ್ಕಿಂಗ್, ಬೈಕ್ ಪಾರ್ಕಿಂಗ್, ಈಜುಕೊಳ, ಜಿಮ್, ಟೆನಿಸ್ ಕೋರ್ಟ್ ಸೇರಿದಂತೆ ಇನ್ನಿತರೆ ಸೌಕರ್ಯಗಳು, ಸೆಲ್ರೂಮ್, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾ ಕೊಠಡಿ, ಸೆಮಿನಾರ್ ಹಾಲ್, ಪ್ರಿನ್ಸಿಪಲ್ ರೂಮ್, ಎಚ್ಒಡಿ ರೂಮ್, ಆಫೀಸ್-ಅಕೌಂಟ್ಸ್, ರೆಕಾರ್ಡ್ ರೂಮ್, ಎಲೆಕ್ಟಾçನಿಕ್ಸ್ ಮತ್ತು ಸರ್ವರ್ ರೂಮ್, ಕ್ಲಾಸ್ರೂಮ್, 500 ಜನರು ಕುಳಿತುಕೊಳ್ಳುವ ಸಭಾಂಗಣ, ಫಿಸಿಕ್ಸ್, ಕೆಮಿಸ್ತ್ರಿ, ಜೂಲಾಜಿ, ಬಾಟನಿ, ಗಣಿತ, ಕಂಪ್ಯೂಟರ್ ಸೇರಿದಂತೆ ವಿವಿಧ ವಿಷಯಗಳ ಲ್ಯಾಬ್ಗಳು ಹೀಗೆ ಹಲವು ಕೊಠಡಿಗಳನ್ನು ಮಹಾವಿದ್ಯಾಲಯದ ಉದ್ದೇಶಿತ ನೂತನ ಕಟ್ಟಡ ಹೊಂದಿರಲಿದೆ.

