ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 22, 2026
ತುರ್ವಿಹಾಳ ಠಾಣೆ ಪಿಎಸ್ಐ ಅವರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ವಕೀಲ ಹರಳಯ್ಯ ಅವರು ಆರೋಪಿಸಿದ್ದು, ಈ ಕುರಿತು ಪಿಎಸ್ಐ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಕೀಲರೊಂದಿಗೆ ಡಿವೈಎಸ್ಪಿ ಚಂದ್ರಶೇಖರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
“ದಿನಾಂಕ 22-6-2026 ರಂದು ಬೆಳಿಗ್ಗೆ 8-45ರ ಸುಮಾರಿಗೆ ನನ್ನ ಸಹೋದರನಾದ ಸೋಮನಾಥರ ಸಹಿಯನ್ನು ಪೊಲೀಸರು ಖಾಲಿ ಪೇಪರಿನ ಮೇಲೆ ಪಡೆದುಕೊಂಡು ಹೋಗಿರುತ್ತಾರೆ. ಆ ಬಗ್ಗೆ ಸಹೋದರನು ನನಗೆ ತಿಳಿಸಿರುತ್ತಾನೆ. ನಾನು ಬೆಳಿಗ್ಗೆ 9 ಗಂಟೆ ಸುಮಾರಿಗೆ ಠಾಣೆಗೆ ಹೋಗಿ ಪಿ.ಎಸ್.ಐ. ಮತ್ತು ಇತರ ಮೂವರು ಪೊಲೀಸರನ್ನು ವಿಚಾರಿಸಿ, ನಾನು ವಕೀಲನಿರುತ್ತೇನೆ ಎಂದು ತಿಳಿಸಿ, ನನ್ನ ಸಹೋದರನ ಸಹಿಯನ್ನು ಖಾಲಿ ಪೇಪರ್ ಮೇಲೆ ಯಾಕೆ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿರುತ್ತೇನೆ. ಆದರೆ ಪಿ.ಎಸ್.ಐ. ಅವರು ಈ ವೇಳೆ ನನ್ನನ್ನು ತಡೆದು, ಹೊಡೆದು, ನಿಂದಿಸಿರುತ್ತಾರೆ. ಅಲ್ಲದೇ ನಾನು ವಕೀಲ ಎಂದು ಹೇಳಿದರೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುತ್ತಾರೆ” ಎಂದು ದೂರಿನಲ್ಲಿ ವಿವರಿಸಿರುತ್ತಾರೆ.
“ಅಧಿಕಾರ ದುರುಪಯೋಗಪಡಿಸಿಕೊಂಡು ದರ್ಪದಿಂದ ವರ್ತಿಸಿರುವ ಪಿಎಸ್ಐ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಗೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಇದ್ದರು.

