ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 19, 2026
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಚಲುವಾದಿ ಸಮುದಾಯದ ಮುಖಂಡ ನರಸಪ್ಪ ಕಟ್ಟಿಮನಿ ಒತ್ತಾಯಿಸಿದರು.
ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಮಾಜಿ ಮುಖ್ಯಮಂತ್ರಿಗಳು ಹಾಲಿ ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಭಾವವಿರುವ ಕ್ಷೇತ್ರದಲ್ಲಿ ಪ್ರಸಾದ್ ಅಬ್ಬಯ್ಯ ಅವರು ಸತತ ಮೂರನೇ ಬಾರಿ ವಿಜಯಶಾಲಿಯಾಗಿದ್ದಾರೆ. ಚಲುವಾದಿ ಸಮುದಾಯದ ಬಗ್ಗೆ ವಿಶೇಷ ಕಳಕಳಿ, ಕಾಳಜಿ ಹೊಂದಿದ್ದು, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿರುವ ಅವರಿಗೆ ಸಚಿವ ಸ್ಥಾನ ನೀಡಬೇಕು” ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಆಗ್ರಹಿಸಿದರು.
ಹನುಮಂತಪ್ಪ ವಕೀಲರು ಮಾತನಾಡಿ, “ಪ್ರಸಾದ್ ಅಬ್ಬಯ್ಯ ಅವರಿಗೂ ಸಿಂಧನೂರಿಗೂ ನಂಟಿದೆ. ಅಬ್ಬಯ್ಯ ಅವರು ಸಿಂಧನೂರಿನ ಆರ್ಜಿಎಂ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಸಮುದಾಯದ ಏಳಿಗೆ ಮತ್ತು ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ಹಾಗಾಗಿ ಇವರಿಗೆ ಸಚಿವ ಸ್ಥಾನ ನೀಡಿದರೆ, ಸಮಾಜದ ಜನರಿಗೆ ಒಳಿತಾಗಲಿದೆ. ಹಾಗಾಗಿ ಹೈಕಮಾಂಡ್ ಅಬ್ಬಯ್ಯ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
ನಿರುಪಾದಿ ಸಾಸಲಮರಿ ಮಾತನಾಡಿ “ಪ್ರಸಾದ್ ಅಬ್ಬಯ್ಯ ಅವರು ಕಿತ್ತೂರು ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಭಾವವುಳ್ಳ ಬಲ ಸಮುದಾಯದ ನಾಯಕರಾಗಿದ್ದಾರೆ. ಯಾವುದೇ ಕೆಲಸ ಕಾರ್ಯಗಳೀಗೆ ಸಮುದಾಯದ ನಾಯಕರು ಬೆಂಗಳೂರು ಅಥವಾ ಅವರು ನಿರ್ವಹಿಸುತ್ತಿರುವ ನಿಗಮ ಮಂಡಳಿ ಕಾರ್ಯಾಲಯಕ್ಕೆ ತೆರಳಿದರೆ ಅಹವಾಲುಗಳನ್ನು ಆಲಿಸಿ ಪರಿಹರಿಸಿ ಕಳುಹಿಸುತ್ತಾರೆ. ಇಂತವರು ಸಚಿವರಾದರೆ ಸಮಾಜದ ಏಳಿಗೆಗೆ ಅನುಕೂಲವಾಗಲಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಹನುಮಂತಪ್ಪ ಗೋಮರ್ಸಿ, ಅಯ್ಯಪ್ಪ ಗೋಮರ್ಸಿ, ಭೀಮಣ್ಣ, ಮಲ್ಲಿಕಾರ್ಜುನ, ಚನ್ನಬಸವ, ವೀರೇಶ, ಆದೇಶ ಇನ್ನಿತರರಿದ್ದರು.
