ಸಿಂಧನೂರು : ಜೋಳದ ಹಣ ರೈತರ ಖಾತೆಗೆ ಜಮಾ ಮಾಡಬೇಕು, ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ ವಾಪಸ್ ಪಡೆಯಲು ಆಗ್ರಹಿಸಿ ಡಿಸಿ ಕಚೇರಿ ಮುಂದೆ ಜೂನ್ 16ಕ್ಕೆ ಹೋರಾಟ: ಬಸವರಂತರಾಯಗೌಡ ಕಲ್ಲೂರು

Spread the love

ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 15, 2026

ಖರೀದಿ ಕೇಂದ್ರಗಳಲ್ಲಿ ಜೋಳ ಮಾರಾಟ ಮಾಡಿದ ರೈತರ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು, ರೈತರು ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿರುವುದನ್ನು ವಾಪಸ್ ಪಡೆಯಬೇಕು ಎಂಬ ಪ್ರಮುಖ ಬೇಡಿಕೆಗಳು ಸೇರಿದಂತೆ ಇನ್ನಿತರೆ ಹಕ್ಕೊತ್ತಾಯ ಈಡೇರಿಸಲು ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಗಳಿಗೆ ದಿನಾಂಕ:16-06-2026ರಂದು ಮನವಿ ಸಲ್ಲಿಸಲಾಗುವುದು ಎಂದು ಕೆಪಿಆರ್‌ಎಸ್ ಮುಖಂಡ ಬಸವಂತರಾಯಗೌಡ ಕಲ್ಲೂರು ತಿಳಿಸಿದರು.
“ಜೋಳ ಮಾರಾಟ ಮಾಡಿದ ರೈತರ ಖಾತೆಗೆ ಹಣ ಜಮಾ ಮಾಡಿ”
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೋಳ ಖರೀದಿ ಮಾಡಿ ಮೂರ‍್ನಾಲ್ಕು ತಿಂಗಳಾಗಿದ್ದರೂ ಇಲ್ಲಿಯವರೆಗೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಇದರಿಂದ ರೈತರು ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಸರ್ಕಾರದ ಗಮನ ಸೆಳೆದರೂ ಶೇ.2 ರಿಂದ 3% ಪ್ರತಿಶತ ಮಾತ್ರ ಹಣ ಬಿಡುಗಡೆಯಾಗಿದ್ದು, ಉಳಿದಂತೆ ಶೇ.95ರಷ್ಟು ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಇನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ರಸಗೊಬ್ಬರ ಖರೀದಿ ಮಾಡಲು ಎಫ್‌ಐಡಿ ಕಡ್ಡಾಯಗೊಳಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಇದರಿಂದ ಗುತ್ತಿಗೆಯಡಿ ಜಮೀನು ಉಳುಮೆ ಮಾಡುವ ರೈತರು, ಪೌತಿ ಖಾತೆ ಹೊಂದಿದವರು, ಸರ್ವೆ ವಿಳಂಬದಿAದ ಸಮಸ್ಯೆಗೀಡಾದವರು ಸೇರಿದಂತೆ ಇನ್ನಿತರೆ ಬಹಳಷ್ಟು ರೈತರು ತೊಂದರೆಗೀಡಾಗಲಿದ್ದಾರೆ. ಹಾಗಾಗಿ ಈ ನಿಯಮವನ್ನು ಕೂಡಲೇ ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳು:
“ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ 1ಎಕರೆ 1 ಗುಂಟೆ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ 32 ಕುಟುಂಬಗಳು ವಾಸ ಮಾಡುತ್ತಿದ್ದು ಇಲ್ಲಿಯವರೆಗೂ ಹಕ್ಕುಪತ್ರ ಕೊಟ್ಟಿರುವುದಿಲ್ಲ, ಉದ್ಯೋಗ ಖಾತ್ರಿ ಯೋಜನೆಯಡಿ 370 ರೂಪಾಯಿ ಕೂಲಿ ನಿಗದಿಪಡಿಸಲಾಗಿದೆ, ಆದರೆ ಮಲ್ಲಾಪುರ ಪಂಚಾಯಿತಿಯಲ್ಲಿ 1000ಕ್ಕೂ ಹೆಚ್ಚು ಕೂಲಿಕಾರರಿಗೆ ಕೇವಲ 150 ರೂ. ಕೂಲಿ ಪಾವತಿಸಲಾಗಿದೆ, ಕೆಂಗಲ್ ಗ್ರಾಮದಲ್ಲಿ ಸ್ಮಶಾನ ಸಮಸ್ಯೆಯಿದ್ದು, ಸ್ಮಶಾನಕ್ಕೆ ಹೋಗಲು ದಾರಿಯಿಲ್ಲ, ಈ ಕುರಿತು ತಹಸೀಲ್ದಾರ್ ಅವರಿಗೆ ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಆಗಿಲ್ಲ, ಬಹುತೇಕ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಸಿಬ್ಬಂದಿ ಕೊರತೆ ಎದುರಾಗಿದೆ, ಇದರಿಂದ ಕೂಲಿಕಾರರಿಗೆ ಸಮಸ್ಯೆಯಾಗುತ್ತಿದೆ. ಈ ಎಲ್ಲ ಬೇಡಿಕೆಗಳು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಬೇಡಿಕೆಗಳನ್ನೆಲ್ಲಾ ಒಟ್ಟು ಸೇರಿಸಿ ಪರಿಹರಿಸಲು ಒತ್ತಾಯಿಸಿ ಹೋರಾಟದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಹೋರಾಟದಲ್ಲಿ ಸಿಂಧನೂರು, ಮಾನ್ವಿ, ಲಿಂಗಸುಗೂರು, ದೇವದುರ್ಗ, ರಾಯಚೂರು, ಮಸ್ಕಿ ಹಾಗೂ ಸಿರವಾರ ತಾಲ್ಲೂಕಿನ ಸಂಘಟನೆಯ ಪದಾಧಿಕಾರಿಗಳು, ಕೃಷಿಕೂಲಿಕಾರರು ಸೇರಿದಂತೆ 500ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ” ಎಂದು ವಿವರಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಕೆ.ವೆಂಕಟೇಶ್ ಕೆಂಗಲ್, ಎಚ್.ವಿರೂಪಾಕ್ಷಗೌಡ, ಚನ್ನಬಸವ ಅಲಬನೂರು, ಹನುಮೇಶ ಕೆಂಗಲ್ ಇದ್ದರು.


Spread the love

Leave a Reply

Your email address will not be published. Required fields are marked *