ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಜೂನ್ 12, 2026
ಐದು ಬಾರಿ ಶಾಸಕರಾಗಿ ಅಪಾರ ರಾಜಕೀಯ ಅನುಭವ ಹೊಂದಿರುವ ಹಂಪನಗೌಡ ಬಾದರ್ಲಿ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿ ಎಂದು ಹರಸಿ ಅವರ ಬೆಂಬಲಿಗರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಶುಕ್ರವಾರ ನಗರದ ಗಣೇಶ ಗುಡಿಯಿಂದ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿದರು.

ಬೆಳಿಗ್ಗೆ ಎಪಿಎಂಸಿಯ ಗಣೇಶ ಗುಡಿಯಿಂದ ಆರಂಭವಾದ ಪಾದಯಾತ್ರೆ ವಾದ್ಯ ಮೇಳದೊಂದಿಗೆ ಗಾಂಧಿ ಸರ್ಕಲ್ ತಲುಪಿತು. ಗಾಂಧಿ ಸರ್ಕಲ್‌ನಲ್ಲಿ ಗಾಂಧಿ ಪ್ರತಿಮೆಗೆ ಕಾಂಗ್ರೆಸ್ ಮುಖಂಡರು ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ತದನಂತರ ಪಾದಯಾತ್ರೆ ಹೊಸಳ್ಳಿ ಕ್ರಾಸ್, ಶ್ರೀಪುರಂಜಂಕ್ಷನ್, ಗೊರೇಬಾಳಕ್ಯಾಂಪ್, ಗೊರೇಬಾಳ, ಬಂಗಾರಿಕ್ಯಾಂಪ್, ಲಕ್ಷ್ಮಿಕ್ಯಾಂಪ್, ರೌಡಕುಂದಾ ಮೂಲಕ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನ ತಲುಪಿತು. ಪಾದಯಾತ್ರೆಯಲ್ಲಿ ಕಾರ್ಯಕರ್ತರು ಹಂಪನಗೌಡ ಬಾದರ್ಲಿ ಅವರ ಭಾವಚಿತ್ರ ಪ್ರದರ್ಶಿಸಿ ಸಚಿವ ಸ್ಥಾನಕ್ಕಾಗಿ ಘೋಷಣೆಗಳನ್ನು ಹಾಕಿದರು.
ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ಮುಖಂಡರಾದ ಪಂಪನಗೌಡ ಬಾದರ್ಲಿ, ಲಿಂಗಪ್ಪ ದಡೇಸುಗೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಸವರಾಜ ಹಿರೇಗೌಡರ್, ಶಿವನಗೌಡ ಎಲೆಕೂಡ್ಲಿಗಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಎನ್.ಅಮರೇಶ, ಶಿವಕುಮಾರ ಗುಂಜಳ್ಳಿ, ತಿಮ್ಮಣ್ಣ ಸಾಹುಕಾರ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು, ಬೆಂಗಲಿಗರು ಇದ್ದರು.


