ಸಿಂಧನೂರು: ಕೆಲಸಕ್ಕೆ ಮರು ನೇಮಿಸಿಕೊಳ್ಳಲು ಸಹಕಾರ ಇಲಾಖೆ ಅಧಿಕಾರಿಗಳಿಗೆ ಗೊರೇಬಾಳ ಪತ್ತಿನ ಸಹಕಾರಿ ಸಂಘದ ಮಾಜಿ ನಗದು ಗುಮಾಸ್ತ ಚನ್ನಬಸನಗೌಡ ಒತ್ತಾಯ

Spread the love

ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 10, 2026

“ಹಣಕಾಸು ಅವ್ಯವಹಾರದ ಆರೋಪದಡಿ ಏಕಾಏಕಿ ಕೆಲಸದಿಂದ ವಜಾಗೊಳಿಸಿ ನನಗೆ ಅನ್ಯಾಯ ಮಾಡಲಾಗಿದೆ. ಮರು ಕೆಲಸಕ್ಕೆ ನೇಮಿಸಿಕೊಳ್ಳಲು ಸಿಂಧನೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರವರ ನ್ಯಾಯಾಲಯದ ಆದೇಶ ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ನಿರ್ದೇಶನವಿದ್ದರೂ ನಿರ್ಲಕ್ಷಿಸಿ ಕಾಲಹರಣ ಮಾಡಲಾಗುತ್ತಿದೆ” ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಮಾಜಿ ನಗದು ಗುಮಾಸ್ತ ಚನ್ನಬಸನಗೌಡ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಗೊರೇಬಾಳ ಸಹಕಾರಿ ಸಂಘದಲ್ಲಿ ಇಪ್ಪತ್ತು ವರ್ಷಗಳ ಕಾಲ ನಾನು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಮೇಲೆ 7 ಲಕ್ಷ ರೂ.ಹೆಚ್ಚುವರಿ ವೇತನ ಪಡೆದುಕೊಂಡಿರುವುದು ಮತ್ತು ಇತರೆ ಸೇರಿ 10.50 ಲಕ್ಷ ರೂ ಅವ್ಯಹಾರ ಆರೋಪ ಹೊರಿಸಲಾಗಿತ್ತು. ಮೇಲಧಿಕಾರಿಗಳ ನಿರ್ದೇಶನ ಮತ್ತು ಆದೇಶದಂತೆ ನಾನು ಆ ಹಣವನ್ನು ಮರುಪಾವತಿಸಿ ಆರೋಪ ಮುಕ್ತನಾಗಿರುತ್ತೇನೆ. ಆದರೆ ಆಡಳಿತ ಮಂಡಳಿಯ ಕೆಲವರು ವೈಯಕ್ತಿಕ ದ್ವೇಷದಿಂದ ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದು, ಇದರಿಂದ ನಮ್ಮ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಕೂಡಲೇ ನನ್ನನ್ನು ಕೆಲಸಕ್ಕೆ ಮರು ನೇಮಿಸಿಕೊಳ್ಳುವಂತೆ” ಅವರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
‘ಮರು ನೇಮಕ ಮಾಡಿಕೊಂಡು ಎರಡು ವಾರಗಳಲ್ಲೇ ಪುನಃ ವಜಾ’
“ನಿರಂತರ ಹೋರಾಟ ಹಾಗೂ ಸಿಂಧನೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರವರ ನ್ಯಾಯಾಲಯದ ಆದೇಶ ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ನಿರ್ದೇಶನದ ಹಿನ್ನೆಲೆಯಲ್ಲಿ ದಿನಾಂಕ: 30-01-2026ರಂದು ಕೆಲಸಕ್ಕೆ ಮರು ನೇಮಿಸಿಕೊಂಡAತೆ ಮಾಡಿ, ಪುನಃ ಸಂಘದ ಹಾಗೂ ಆಡಳಿತ ಮಂಡಳಿಯ ಕೆಲ ಸದಸ್ಯರು ಸಭೆ ನಡೆಸಿ, ವೈಯಕ್ತಿಕ ದ್ವೇಷದಿಂದ ಸಭೆಯಲ್ಲಿ ನನ್ನ ವಿರುದ್ಧ ನಿರ್ಣಯ ಮಾಡಿ ಪುನಃ 13-02-2026ರಂದು ಕೆಲಸದಿಂದ ವಜಾಗೊಳಿಸಿರುತ್ತಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.
“ನಮ್ಮ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ”
ಚನ್ನಬಸವನಗೌಡ ಅವರ ಪತ್ನಿ ನೇತ್ರಾವತಿ ಅವರು ಮಾತನಾಡಿ, “ನನ್ನ ಪತಿಯನ್ನು ಸಹಕಾರಿ ಸಂಘದ ಕೆಲ ಸದಸ್ಯರು ಹಾಗೂ ಆಡಳಿತ ಮಂಡಳಿಯವರು ದುರುದ್ದೇಶದಿಂದ ಕೆಲಸದಿಂದ ವಜಾಗೊಳಿಸಿದ್ದಾರೆ. ನಮಗೆ ಯಾವುದೇ ರೀತಿಯ ಭೂಮಿ, ಆಸ್ತಿ ಇರುವುದಿಲ್ಲ. ಪತಿಯ ನಗದ ಗುಮಾಸ್ತ ಕೆಲಸವೇ ನಮ್ಮ ಕುಟುಂಬಕ್ಕೆ ಆಧಾರವಾಗಿತ್ತು. ಏಕಾಏಕಿ ಅವರನ್ನು ಕೆಲಸದಿಂದ ತೆಗೆದುಹಾಕಿರುವುದರಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಾಗೂ ಕುಟುಂಬ ನಡೆಸಲು ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ನನ್ನ ಪತಿ ಅವರು ಇಲಾಖೆಯ ನ್ಯಾಯಾಲಯದಿಂದ ಮತ್ತು ಅಧಿಕಾರಿಗಳ ವಿಚಾರಣೆಯಲ್ಲಿ ಆರೋಪ ಮುಕ್ತರಾದರೂ ವಿನಾಃಕಾರಣ ಮರು ಕೆಲಸಕ್ಕೆ ನೇಮಿಸಿಕೊಳ್ಳದೇ ಹಗೆತನ ಸಾಧಿಸಲಾಗುತ್ತಿದೆ. ಮೇಲಧಿಕಾರಿಗಳು ನನ್ನ ಪತಿ ಅವರನ್ನು ಕೂಡಲೇ ಕೆಲಸಕ್ಕೆ ನೇಮಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸದಸ್ಯರು ಹಾಗೂ ಆಡಳಿತ ಮಂಡಳಿಯವರು ವಿನಾಃಕಾರಣ ಕಿರುಕುಳ ನೀಡುವುದನ್ನು ಕೈಬಿಡಬೇಕು. ಇಲ್ಲದೇ ಹೋದರೆ ಹೋರಾಟ ಮುಂದುವರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.


Spread the love

Leave a Reply

Your email address will not be published. Required fields are marked *