ನಮ್ಮ ಸಿಂಧನೂರು, ಏಪ್ರಿಲ್ 29, 2026
ಬಸನಗೌಡ ಫೌಂಡೇಶನ್ ವತಿಯಿಂದ ಮೇ 3 ಭಾನುವಾರ, 2026ರಂದು ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಅಂದು ನಗರಕ್ಕೆ ಸಚಿವರ ದಂಡೇ ಆಗಮಿಸಲಿದೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮಧ್ಯಾಹ್ನ 12 ಗಂಟೆಗೆ ಆಗಮಿಸಲಿದ್ದು, ಮಧ್ಯಾಹ್ನ 3 ಗಂಟೆಯವರೆಗೂ ಇರಲಿದ್ದಾರೆ. ಅಲ್ಲದೇ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ, ಎನ್.ಎಸ್.ಭೋಸರಾಜು, ಡಾ.ಶರಣಪ್ರಕಾಶ ಪಾಟೀಲ್, ಶಿವರಾಜ.ಎಸ್.ತಂಗಡಗಿ ಸೇರಿದಂತೆ ಹಲವು ಸಚಿವರು, ಸಂಸದರು, ಶಾಸಕರು ಸೇರಿದಂತೆ ಇನ್ನಿತರೆ ಗಣ್ಯರು ಆಗಮಿಸಲಿದ್ದಾರೆಂದು ತಿಳಿದುಬಂದಿದೆ. ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಪರಿಷತ್ ಶಾಸಕರಾಗಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
