ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರೀಲ್ 28, 2026
ನಗರದ ಗಂಗಾವತಿ ಮಾರ್ಗದ ರಸ್ತೆಯ ತೋಟಗಾರಿಕೆ ಇಲಾಖೆಯ ಕಾಂಪೌಂಡ್‌ಗೆ ಹೊಂದಿಕೊಂಡು ಇಟ್ಟಿರುವ ಡಬ್ಬಾ ಅಂಗಡಿಗಳನ್ನು ಪೊಲೀಸ್ ಬಂದೋಬಸ್ತ್‌ನೊಂದಿಗೆ ಮಂಗಳವಾರ ಬೆಳಿಗ್ಗೆ ತೆರವುಗೊಳಿಸಲು ಮುಂದಾದ ವೇಳೆ ಬೀದಿ ಬದಿ ವ್ಯಾಪಾರಿಗಳು, ಮುಖಂಡರು ಹಾಗೂ ಇಲಾಖೆ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು.
ಬೀದಿ ಬದಿ ವ್ಯಾಪಾರಿಗಳನ್ನು ಈ ಹಿಂದೆ ಏಕಾಏಕಿ ಒಕ್ಕಲೆಬ್ಬಿಸಿದ್ದರಿಂದ ನಿರುದ್ಯೋಗಿಗಳಾಗಿದ್ದು, ಜೀವನ ನಿರ್ವಹಣೆಗೆ ಪಡಿಪಾಟಲು ಅನುಭವಿಸುತ್ತಿದ್ದಾರೆ. ಕಾನೂನಿನ ನೆಪದಲ್ಲಿ ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡು ಹೊಟ್ಟೆ ಹೊರೆಯಲು ಬಿಡದೇ ಬದುಕುವ ಹಕ್ಕುನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ ? ತೋಟಗಾರಿಕೆ ಇಲಾಖೆಯ ಜಮೀನನ್ನು ಅತಿಕ್ರಮಿಸಿರುವ ಬಲಾಢ್ಯರ ಮೇಲೆ ಕಾನೂನು ನಿಯಮ ಪ್ರಯೋಗಿಸದೇ ಬಡಪಾಯಿ ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಸಣ್ಣ ಪುಟ್ಟ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ನಡುವೆ ಮಾತಿನಚಕಮಕಿ ನಡೆಯಿತು.

“ಬೀದಿ ಬದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು ಕೈಬಿಡಿ” : ಡಿ.ಎಚ್.ಪೂಜಾರ್
ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿಯ ಸಂಚಾಲಕರು ಹಾಗೂ ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಮಾತನಾಡಿ, ಈಗಾಗಲೇ ತೋಟಗಾರಿಕೆ ಇಲಾಖೆಗೆ ಹತ್ತಾರು ಬಾರಿ ಮನವಿಪತ್ರ, ಅರ್ಜಿಗಳನ್ನು ನೀಡಿ ಇಲಾಖೆ ವ್ಯಾಪ್ತಿಯಲ್ಲಿರುವ ಜಮೀನಿನ ಹದ್ದುಬಸ್ತ್ ಗುರುತಿಸುವಂತೆ ಒತ್ತಾಯಿಸಲಾಗಿದೆ. ಆದರೂ ಇಲ್ಲಿಯವರೆಗೂ ಹದ್ದುಬಸ್ತ್ ಗುರುತಿಸಿಲ್ಲ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬಲಾಢ್ಯರು ಜಮೀನನ್ನು ಅತಿಕ್ರಮಿಸಿದರೂ ತೋಟಗಾರಿಕೆ ಇಲಾಖೆ ಸೇರಿದಂತೆ ಜಿಲ್ಲಾಡಳಿತ ಸುಮ್ಮನೆ ಕುಳಿತಿದೆ. ಆದರೆ ಬಡ ವ್ಯಾಪಾರಗಳ ಮೇಲೆ ಬಲಪ್ರಯೋಗಿಸುವ ಕೆಲಸ ನಡೆಯುತ್ತಿದೆ. ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಈಗಾಗಲೇ ಮನವಿ ಮಾಡಿಕೊಂಡಿದ್ದರೂ, ಡಬ್ಬಾ ಅಂಗಡಿಗಳನ್ನು ದೌರ್ಜನ್ಯ ದಬ್ಬಾಳಿಕೆಯಿಂದ ತೆರವುಗೊಳಿಸಲು ಮುಂದಾಗುವುದು ಸರಿಯಲ್ಲ. ಕೂಡಲೇ ಇದನ್ನು ಕೈಬಿಡಬೇಕು. ಒಂದು ವೇಳೆ ದೌರ್ಜನ್ಯಕ್ಕೆ ಮುಂದಾದರೆ, ಹೋರಾಟ ತೀವ್ರಗೊಳಿಸಬೇಕಾಗುತ್ತದೆ. ನಮ್ಮ ಪ್ರಾಣದ ಮೇಲೆ ನೀವು ತೆರವು ಕಾರ್ಯ ನಡೆಸಿ” ಎಂದು ಡಿ.ಎಚ್.ಪೂಜಾರ್ ಆಕ್ರೋಶ ವ್ಯಕ್ತಪಡಿಸಿದರು.
“ಕಾನೂನು ಇರುವುದು ಜನರಿಗಾಗಿಯೇ, ಕಾನೂನಿಗಾಗಿ ಜನರಲ್ಲ” : ಚಿಟ್ಟಿಬಾಬು ಬೂದಿಹಾಳಕ್ಯಾಂಪ್
ಮುಖಂಡರ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಮಾತನಾಡಿ, “ ಜಾಗೆ ಅತಿಕ್ರಮಿಸಿದ ಶ್ರೀಮಂತರ ಮೇಲೆ ಕ್ರಮ ಜರುಗಿಸದೇ, ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಜೀವನ ನಡೆಸುವ ಬೀದಿ ಬದಿ ವ್ಯಾಪಾರಿಗಳ ಮೇಲೆ ದರ್ಪ ತೋರುವುದು ತರವಲ್ಲ. ಕಾನೂನು ಕಾಯ್ದೆಗಳಿರುವುದು ಜನರ ಸಲುವಾಗಿಯೇ ಹೊರತು, ಕಾನೂನು ಕಾಯ್ದೆಗಳಿಗಾಗಿ ಜನರಲ್ಲ. ಹಾಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು, ಬಡ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು. ಸಿಪಿಐ ವೀರಾರೆಡ್ಡಿ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮೌನೇಶ ರಾಠೋಡ್ ಬಂದೋಬಸ್ತ್ ಒದಗಿಸಿದ್ದರು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.

