ವಿಶೇಷ ವರದಿ: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರಿಲ್ 1
ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ಕುಡಿಯುವ ನೀರಿನ ಕೆರೆಗಳು ದಿನದಿಂದ ದಿನಕ್ಕೆ ತಳ ಕಾಣುತ್ತಿವೆ. ಆದರೆ ಎಡದಂಡೆ ಮುಖ್ಯ ನಾಲೆಗೆ ಇದುವರೆಗೂ ನೀರು ಹರಿಸದೇ ಇರುವುದರಿಂದ ಜನ-ಜಾನುವಾರುಗಳು ಪರಿತಪಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ತಾಲೂಕಿನಲ್ಲಿ ಅತಿಹೆಚ್ಚು 155 ಹಾಗೂ ಮಸ್ಕಿ ತಾಲೂಕಿನಲ್ಲಿ 24 ಕುಡಿಯುವ ನೀರಿನ ಸಂಗ್ರಹ ಕೆರೆಗಳಿವೆ. ಈ ಹಿಂದೆ ನಿಗದಿಪಡಿಸಿದ ದಿನಾಂಕದ ಅನ್ವಯ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ನೀರು ಹರಿಸದೇ ಇರುವುದರಿಂದ ಕೆರೆಗಳ ನೀರಿನ ಪ್ರಮಾಣ ಕುಸಿದಿದೆ.
ರಣ ಬಿಸಿಲು, ಕುಡಿವ ನೀರಿಗೆ ಪಡಿಪಾಟಲು
ಜಿಲ್ಲೆ ಹಾಗೂ ತಾಲೂಕಿನಲ್ಲಿ ಬಿಸಿಲು ಹಣ್ಣೆತ್ತಿಯಿಂದ ಅಂಗಾಲು ಸುಡುತ್ತಿದೆ. ಉಷ್ಣಾಂಶ 40 ಡಿಗ್ರಿಗೂ ಹೆಚ್ಚು ದಾಖಲಾಗಿದ್ದು, ಜನ-ಜಾನುವಾರುಗಳನ್ನು ಬಾಯಾರಿಕೆ ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಕುಡಿಯುವ ನೀರು ಒದಗಿಸಬೇಕಾದ ಜಿಲ್ಲಾಡಳಿತಗಳು ಹಾಗೂ ಚುನಾಯಿತಿ ಜನಪ್ರತಿನಧಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆನ್ನುವ ಆರೋಪಗಳು ಕೇಳಿಬಂದಿವೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ಮಾರ್ಚ್ 16ರಿಂದ 27ರವರೆಗೆ ಎಡದಂಡೆ ನಾಲೆಗೆ ನೀರು ಹರಿಬಿಡಲು ನಿರ್ಧರಿಸಿದ ಕುರಿತು, ದಿನಾಂಕ: 11-03-2026ರಂದು ಅಧೀಕ್ಷಕ ಅಭಿಯಂತರರು. ಕನೀನಿನಿ, ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್ ಇವರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು. ಆದರೆ ದಿನಾಂಕ: 18-03-2026ರಂದು ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ನಾಲೆ 104ನೇ ಮೈಲ್ನಲ್ಲಿ ಒಡೆದು ಹೋಗಿದ್ದರಿಂದ ದಿಢೀರ್ ಆಗಿ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಆದರೆ 16 ದಿನ ಕಳೆದರೂ ದುರಸ್ತಿ ಕೆಲಸ ಪೂರ್ಣಗೊಂಡು ಕಾಲುವೆಗೆ ನೀರು ಹರಿಯದಿರುವುದು ಸಿಂಧನೂರು/ ಮಸ್ಕಿ ತಾಲೂಕಿನ ಜನರ ಸಂಕಷ್ಟಕ್ಕೆ ಕಾರಣವಾಗಿದೆ.
ಕಾಲುವೆಗೆ ನೀರು, ಸ್ಪಷ್ಟವಾಗದ ದಿನಾಂಕ
ಸಿAಧನೂರು ಶಾಸಕರು ಏಪ್ರಿಲ್ 2 ಇಲ್ಲವೇ 3 ತಾರೀಖಿಗೆ ಎಡದಂಡೆ ನಾಲೆಗೆ ನೀರು ಹರಿಸಬಹುದಾಗಿದೆ ಎಂದು ಹೇಳಿದ್ದು, ಇನ್ನೂ ಜಿಲ್ಲಾಧಿಕಾರಿಗಳು ಇತ್ತೀಚಿಗೆ ನಡೆಸಿದ ಸಭೆಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಕುಡಿಯುವ ನೀರನ್ನು ಕೆರೆಗಳಿಗೆ ತುಂಬಿಸುವAತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಎಡದಂಡೆ ನಾಲೆಗೆ ಯಾವ ದಿನಾಂಕದAದು ನೀರು ಹರಿಸಲಾಗುವುದು ಎಂಬ ಬಗ್ಗೆ ಸ್ಪಷ್ಟ ದಿನಾಂಕವನ್ನು ಪ್ರಕಟಿಸಿಲ್ಲ. ಇದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ. ಒಡೆದ ಕಾಲುವೆಯನ್ನು ತಾತ್ಕಾಲಿಕವಾಗಿ ನಿರ್ಮಿಸದೇ, ಶಾಶ್ವತ ದುರಸ್ತಿ ಕಾಮಗಾರಿ ಕೈಗೊಳ್ಳುವುದಾಗಿ ಸಂಬAಧಿಸಿದ ಇಲಾಖೆ ಅಧಿಕಾರಿಗಳ ಭರವಸೆ ಮೇಲೆ ದಿನದೂಡುತ್ತ ಬರಲಾಗಿದ್ದು, ಆದರೆ 17 ದಿನಗಳಾದರೂ ಕಾಲುವೆ ದುರಸ್ತಿ ಯಾವ ಹಂತಕ್ಕೆ ಬಂದಿದೆ, ನೀರು ಹರಿಸುವುದು ಯಾವಾಗ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಾಲುವೆ ಒಡೆದ ನೆಪದಲ್ಲಿ ಇಷ್ಟು ದಿನವೇನೋ ದುರಸ್ತಿಗೆ ಕಾಲಹರಣ ಮಾಡಿದ್ದಾಯ್ತು, ಆದರೆ ಪುನಃ ಬೇರೊಂದು ಕಡೆ ಕಾಲುವೆ ಒಡೆದರೆ ಹೇಗೆ ? ಬರೀ ದುರಸ್ತಿಯಲ್ಲೇ ಸಮಯ ಕಳೆಯುತ್ತಾ ಕುಳಿತರೆ ಕೆರೆ-ಕಟ್ಟೆಗಳನ್ನು ತುಂಬಿಸುವುದು ಹೇಗೆ ಎಂದು ನಾಗರಿಕರು ಪ್ರಶ್ನಿಸುತ್ತಾರೆ.

“ಹೊಣೆಗಾರಿಕೆ ಮರೆತ ಚುನಾಯಿತ ಪ್ರತಿನಿಧಿಗಳು, ಪ್ರತಿಪಕ್ಷಗಳಿಗೆ ಸಮಾರಂಭದ ಚಿಂತೆ”
“ಬಿಸಿಲಿನ ತಾಪ ದಿನವೂ ಜನರನ್ನು ಬಾಧಿಸುತ್ತಿದೆ. ಕೆರೆ-ಕಟ್ಟೆಗಳ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಗ್ರಾಮೀಣ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಿಂಧನೂರು, ಮಸ್ಕಿ ತಾಲೂಕಿನ ಶಾಸಕರು ತಮ್ಮ ಹೊಣೆಗಾರಿಕೆ ಮರೆತಂತೆ ವರ್ತಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಬೇಕಾದ ಪ್ರತಿಪಕ್ಷಗಳು ಯಾವುದೋ ಸಮಾರಂಭಕ್ಕಾಗಿ ಪುರುಸೊತ್ತು ಇಲ್ಲದೇ ಓಡಾಡುತ್ತಿದ್ದಾರೆ. ನೀರಿನ ಕೊರತೆ ಇರುವ ಕಡೆ ಕನಿಷ್ಠ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಬೇಕಾದ ಜಿಲ್ಲಾಡಳಿತ ದಿವ್ಯ ನಿರ್ಲಕ್ಷö್ಯ ವಹಿಸಿದೆ” ಎಂದು ಎಐಸಿಸಿಟಿಯುನ ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಆರೋಪಿಸುತ್ತಾರೆ.

