ಸಿಂಧನೂರಿಗೆ ಜಿಟಿಟಿಸಿ ಕಾಲೇಜು ಮಂಜೂರು, ಜಾಲತಾಣದಲ್ಲಿ ಪ್ರಚಾರ ಜೋರು !!

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 21

ಸಿಂಧನೂರು ನಗರಕ್ಕೆ ಹೊಸದಾಗಿ ಜಿಟಿಟಿಸಿ ತರಬೇತಿ ಕೇಂದ್ರ ಮಂಜೂರಾಗಿದೆ. ಈ ವಿಷಯ ಕಾಂಗ್ರೆಸ್‌ನ ಎರಡು ಬಣಗಳಲ್ಲಿ ಪ್ರಚಾರದ ಕಾವಿಗೆ ಕಾರಣವಾಗಿದೆ. ತಮ್ಮ ಮುಖಂಡರ ಪ್ರಯತ್ನದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಒಂದು ಬಣದವರು ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದರೆ, ಇನ್ನೊಂದು ಬಣದವರು ನಮ್ಮ ಮುಖಂಡರ ಒತ್ತಡದಿಂದಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.
ಸಚಿವ ಸಂಪುಟ ಅಸ್ತು
ಬೆಳಗಾವಿಯ ಸುವರ್ಣಸೌಧದ ಅಧಿವೇಶನದ ಸಂದರ್ಭದಲ್ಲಿ ದಿನಾಂಕ:11-12-2025ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸಿಂಧನೂರು ನಗರಕ್ಕೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಮಂಜೂರಾಗಿದ್ದು, ಕೆಕೆಆರ್‌ಡಿಬಿ ಮ್ಯಾಕ್ರೋ ಅನುದಾನದಿಂದ ರೂ.73.75 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಜಾಲತಾಣದಲ್ಲಿ ಪೋಸ್ಟ್ ಹಂಚಿಕೆ
ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಅವರು, ಶಾಸಕ ಹಂಪನಗೌಡ ಬಾದರ್ಲಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸಿಂಧನೂರಿಗೆ ಜಿಟಿಟಿಸಿ ತರಬೇತಿ ಕೇಂದ್ರ ಮಂಜೂರಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಬೆಂಬಲಿಗರು “ಸಿಎಂ, ಡಿಸಿಎಂ, ಸಂಬಂಧಿಸಿದ ಇಲಾಖೆ ಸಚಿವರಲ್ಲಿ ಎಮ್ಮೆಲ್ಸಿ ಬಸನಗೌಡ ಬಾದರ್ಲಿಯವರು ಮನವಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರ” ಮಂಜೂರಾಗಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಎರಡು ಕಡೆಯವರ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿವೆ. ಹೇಗಾದರಾಗಲೀ ಅಂತೂ ಇಂತು ಸಿಂಧನೂರಿಗೆ ತರಬೇತಿ ಕೇಂದ್ರ ಬಂತಲ್ಲ, ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಆಶಾದಾಯಕ ಬೆಳವಣಿಗೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *