ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 18
ನಗರ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಶಂಕೆ ಹಾಗೂ ಮಾದಕ ವ್ಯಸನ ಮತ್ತಿತರೆ ಕೆಲವೊಂದು ಅಪರಾಧಿಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದಿಂದ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲು ಹಾಗೂ ಈ ಕುರಿತು ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ವಿವಿಧ ಜನಪರ ಸಂಘಟನೆಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಬುಧವಾರ ನಗರದ ಮಸ್ಜಿದ್ ಎ ಹುದಾದಲ್ಲಿ ಸಭೆ ಸೇರಿ ಚರ್ಚಿಸಿದರು.
ಮೋಟರ್ ಸೈಕಲ್ ಕಿಡಿಗೇಡಿಗಳ ಹಾವಳಿಯ ಕುರಿತ ಪ್ರಸ್ತಾಪ
ನಗರದ ಕೆಲವೊಂದು ವಾರ್ಡ್ಗಳಲ್ಲಿ ಹಾಗೂ ಓಣಿಗಳಲ್ಲಿ ಕೆಲ ಕಿಡಿಗೇಡಿಗಳು ಮನಬಂದಂತೆ ಅತಿವೇಗ ಮತ್ತು ಅಜಾಗರೂಕತನದಿಂದ ವಾಹನ ಚಲಾಯಿಸುವುದು, ಇಲ್ಲವೇ ಸೈಕಲ್ ಮೋಟರ್ ಸೈಲೆನ್ಸ್ರ್ ಬಿಚ್ಚಿ ವಾಹನ ಓಡಿಸುವುದು ಮಾಡುತ್ತಿದ್ದು, ಈ ಕುರಿತು ಪ್ರಶ್ನಿಸಿದವರ ಮೇಲೆ ಹೊಡೆ-ಬಡೆ ಮಾಡುವುದು, ಮಾಡುತ್ತಿದ್ದು, ಈ ಇಂತವರನ್ನು ಪತ್ತೆಹಚ್ಚಿ ಪೊಲೀಸ್ ಇಲಾಖೆಯವರು ಕಠಿಣ ಕ್ರಮಕ್ಕೆ ಮುಂದಾಗದೇ ಇರುವ ಬಗ್ಗೆ ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಅಪಘಾತಗಳ ಹೆಚ್ಚಳ, ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ಆರೋಪ
ಸೈಕಲ್ ಮೋಟರ್ ಸೇರಿದಂತೆ ಇನ್ನಿತರೆ ವಾಹನಗಳ ಅಪಘಾತಗಳು ಹೆಚ್ಚುತ್ತಿದ್ದರೂ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ದಿನವೂ ರಸ್ತೆ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಕುರಿತಂತೆ ಸಂಬAಧಿಸಿದ ಅಧಿಕಾರಿಗಳಿಗೆ ಗಮನ ಸೆಳೆದರೆ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸಾರ್ವಜನಿಕರ ಒತ್ತಾಯದೇ ಮೇರೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರೆ ಕೆಲವರು ಪ್ರಭಾವಿಗಳಿಂದ ದೂರವಾಣಿ ಕರೆ ಮಾಡಿಸಿ, ಒತ್ತಡ ಹಾಕಿಸುತ್ತಾರೆ. ಹೀಗಾಗಿ ಅಧಿಕಾರಿಗಳು ಕ್ರಮಕ್ಕೆ ಮುಂದಾದರೂ ಉಪಯೋಗವಿಲ್ಲದಂತಾಗಿದೆ. ಹೀಗಾದರೆ ಸಾರ್ವಜನಿಕರು ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು ಮತ್ತು ಪರಿಹಾರ ಕಂಡುಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ ಎಂದು ವಾಸ್ತವ ವಿಷಯಗಳ ಕುರಿತು ಮುಖಂಡರು ಪರಸ್ಪರ ಚರ್ಚಿಸಿದರು.
‘ಕೇವಲ ಜಾಗೃತಿಯಲ್ಲೇ ಕಾಲಹರಣವಾಗುತ್ತಿದೆ, ಕ್ರಮವಾಗುತ್ತಿಲ್ಲ ?’
ಅಪರಾಧಿಕ ಚಟುವಟಿಕೆಗಳಲ್ಲಿ ಭಾಗವಹಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕೆಲಸವಾಗುತ್ತಿಲ್ಲ. ಕೇವಲ ಶಾಲಾ-ಕಾಲೇಜುಗಳಲ್ಲಿ ಜಾಗೃತಿಯ ನೆಪದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಸಿಂಧನೂರು ತಾಲೂಕು ಕೇಂದ್ರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿಗೆ ದಿನವೂ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಂದುಹೋಗುತ್ತಾರೆ. ಆದರೆ, ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ” ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಹೆಚ್ಚಿದ ಇಸ್ಪೀಟ್, ಜೂಜಾಟ’
ಗ್ರಾಮೀಣ ಪ್ರದೇಶ ಸೇರಿ ಕೆಲ ಆಯ್ದ ಅಡ್ಡಾಗಳಲ್ಲಿ ಇಸ್ಪೀಟ್, ಜೂಜಾಟ ಹೆಚ್ಚಿದೆ. ಕಡಿವಾಣ ಇಲ್ಲದಂತಾಗಿದ್ದು, ಕೆಲವರು ದುಡಿದ ಹಣವನ್ನು ಇಸ್ಪೀಟ್, ಜೂಜಾಟ ಹಾಗೂ ಮಟ್ಕಾದಲ್ಲಿ ಕಳೆದುಕೊಂಡು ಆರ್ಥಿಕವಾಗಿ ದಿವಾಳಿಯಾಗಿ, ಬೆಂಗಳೂರು ಸೇರಿದಂತೆ ಇನ್ನಿತರೆ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಗಮನಹರಿಸಿ ಕಡಿವಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಚರ್ಚೆಯ ವೇಳೆ ಹಲವರು ಪ್ರಸ್ತಾಪಿಸಿದರು.
‘ಖಾಸಗಿ ಲೇಔಟ್, ತಾಲೂಕು ಕ್ರೀಡಾಂಗಣ ಪ್ರದೇಶ, ಸರ್ಕಾರಿ ಜಾಗೆ ಮದ್ಯ ವ್ಯಸನಿಗಳ ತಾಣ’
ನಗರದ ಕೆಲ ಖಾಸಗಿ ಲೇಔಟ್ಗಳ ಖಾಲಿ ಜಾಗ, ತಾಲೂಕು ಕ್ರೀಡಾಂಗಣ ಪ್ರದೇಶ, ಅಲ್ಲಿ ಇರುವ ಸರ್ಕಾರಿ ಜಾಗೆ ಮದ್ಯ ವ್ಯಸನಿಗಳ ತಾಣಗಳಾಗಿವೆ. ಅಲ್ಲಿ ಎಲ್ಲಿ ನೋಡಿದರಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್, ಸಿಗರೇಟ್ ತುಣುಕುಗಳು ಸೇರಿದಂತೆ ಇನ್ನಿತರೆ ವಸ್ತುಗಳು ಕಂಡುಬರುತ್ತವೆ. ಕೆಲವರು ಸಂಜೆಯಾಗುತ್ತಿದ್ದಂತೆ ಸಾರ್ವಜನಿಕ ಸ್ಥಳಗಳಲ್ಲಿಯೇ ಮದ್ಯಪಾನ ಮಾಡುವುದು ಕಂಡುಬರುತ್ತದೆ. ಹೀಗಾದರೆ ಜನಸಾಮಾನ್ಯರು ಗತಿಯೇನು ಎಂದು ಸಂಘಟನೆಯ ಮುಖಂಡರೊಬ್ಬರು ಕಳವಳ ವ್ಯಕ್ತಪಡಿಸಿದರು.
‘ಮಾದಕ ವ್ಯಸನ ಹಬ್ಬುತ್ತಿರುವ ಆತಂಕ’
ನಗರದಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ಮಾದಕ ವ್ಯಸನದ ಹಾವಳಿ ಹೆಚ್ಚುತ್ತಿದೆ. ಈ ಬಗ್ಗೆ ಹಲವು ದಿನಗಳಿಂದ ನಿರಂತರವಾಗಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದರೂ ಪರಿಣಾಮಕಾರಿ ಕ್ರಮಗಳಾಗಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಭಾಗವಹಿಸಿದರು ಅಸಮಾಧಾನ ಹೊರಹಾಕಿದರು. ಸಾರ್ವಜನಿಕರು ನೀಡಿದ ಮಾಹಿತಿಯೂ ಸೋರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ, ಈ ಕುರಿತಂತೆ ಪೊಲೀಸ್ ಇಲಾಖೆ ನುರಿತ ಸಿಬ್ಬಂದಿಯನ್ನು ನಿಯೋಜಿಸಿ ಇಂತಹ ವ್ಯಸನಕ್ಕೆ ವಿದ್ಯಾರ್ಥಿ, ಯುವಕರು ಬಲಿಯಾಗದಂತೆ ಕಠಿಣ ಕ್ರಮ ಜರುಗಿಸಬೇಕು. ಆ ಮೂಲಕ ನಗರ ಹಾಗೂ ತಾಲೂಕಿನಲ್ಲಿ ಶಾಂತಿ-ಸುವ್ಯವಸ್ಥೆ ಕಾಯ್ದುಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
‘ರಾತ್ರಿ ಹೊತ್ತು ಮಹಿಳೆಯರು ಸಂಚರಿಸಲು ಭಯ’
ಕಳೆದ ಎರಡ್ಮೂರು ವಾರಗಳಿಂದ ಮೇಲಿಂದ ಮೇಲೆ ಕೆಲವೊಂದು ಘಟನಾವಳಿಗಳು ಘಟಿಸಿದ್ದು, ಇದರಿಂದಾಗಿ ಮಹಿಳೆಯರು ರಾತ್ರಿ ಏಳೆಂಟು ಗಂಟೆ ಸುಮಾರು ಮುಕ್ತವಾಗಿ ಸಂಚರಿಸಲು ಭಯಪಡುತ್ತಿದ್ದಾರೆ. ಹೀಗಾದರೆ ಜನಸಾಮಾನ್ಯರಿಗೆ ರಕ್ಷಣೆ ಹೇಗೆ ? ಈ ಕುರಿತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಬೇಕು ಎಂದು ಹಲವರು ಅಭಿಪ್ರಾಯಪಟ್ಟರು.
ಶಾಸಕರೊಂದಿಗೆ ಸಭೆ ಸೇರಿ ಚರ್ಚಿಸಲು ಹಲವರ ಅಭಿಪ್ರಾಯ
ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರು ಅಲಭ್ಯರಾಗಿದ್ದು, ಅಧಿವೇಶನ ಮುಗಿದ ತಕ್ಷಣ ಈ ಕುರಿತು ಒಕ್ಕೂಟ, ವಿವಿಧ ಜನಪರ ಸಂಘಟನೆಗಳು, ಸಂಘ-ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡಂತೆ ನಿಯೋಗ ತೆರಳಿ ವಿಸ್ತೃತವಾಗಿ ಚರ್ಚಿಸಿ, ಈ ಕುರಿತು ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಬೇಕು ಎಂಬ ಅಭಿಪ್ರಾಯವನ್ನು ಹಲವು ಮುಖಂಡರು ವ್ಯಕ್ತಪಡಿಸಿದರು.
ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರ ಗಮನ ಸೆಳೆಯಲೂ ತೀರ್ಮಾನ
ಮೇಲಿಂದ ಮೇಲೆ ಕೆಲವೊಂದು ಅಪರಾಧಿಕ ಚಟುವಟಿಕೆಗಳು ಘಟಿಸಿದ್ದರೂ ನಿರ್ಲಕ್ಷö್ಯ ತಾಳಲಾಗಿದೆ ಎಂಬ ಬಗ್ಗೆ ಸಭೆಯಲ್ಲಿ ವ್ಯಕ್ತವಾಗಿದ್ದರಿಂದ ಈ ಕುರಿತಂತೆ ಗೃಹ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬಳ್ಳಾರಿ ವಲಯದ ಐಜಿಪಿಯವರ ಗಮನ ಸೆಳೆಯುವುದು, ಇಲ್ಲವೇ ನಿಯೋಗ ತೆರಳಿ ಮನವಿ ಸಲ್ಲಿಸುವ ಕುರಿತಂತೆ ಚರ್ಚಿಸಲಾಯಿತು.
