ಸಿಂಧನೂರು: ಬಹುತ್ವದ ಚಿಂತನೆ ಪಸರಿಸುವಲ್ಲಿ ಕನ್ನಡ ಓದು ಬಳಗ, ನುಡಿ ಕೂಟ ಶ್ರಮಿಸಲಿ: ಪ್ರೊ.ದೇವೇಂದ್ರಪ್ಪ ಜಾಜಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 06

ನಾಡಿನ ಕವಿಗಳು, ಚಿಂತಕರು, ಸಾಹಿತಿಗಳು ಕನ್ನಡಪರ ವೇದಿಕೆಯ ಮೂಲಕ ಹೊರ ಜಗತ್ತಿಗೆ ಗುರುತಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಹಿರಿಮೆಯನ್ನು ತಂದುಕೊಟ್ಟಿದ್ದಾರೆ. ಅಂದು ಹಲಸಂಗಿ ಗೆಳೆಯರ ಬಳಗ ವೇದಿಕೆಯನ್ನು ಕಟ್ಟಿಕೊಂಡು ಈ ನೆಲದ ಮೂಲ ಜಾನಪದ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಗುರುತಿಸಿಕೊಟ್ಟಿದೆ. ಈ ಹಾದಿಯಲ್ಲಿ ಕನ್ನಡ ಓದು ಬಳಗ ಹಾಗೂ ಕನ್ನಡ ನುಡಿ ಕೂಟ ಬಹುತ್ವದ ಚಿಂತನೆ ಪಸರಿಸುವಲ್ಲಿ ಶ್ರಮಿಸಲಿ ಎಂದು ನಗರದ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ.ಜಾಜಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಎಲ್‌ಬಿಕೆ ಪದವಿಪೂರ್ವ ಕಾಲೇಜ್ ಮತ್ತು ನೋಬಲ್ ಪದವಿ ಕಾಲೇಜಿನಲ್ಲಿ ಶನಿವಾರ ಕನ್ನಡ ಓದು ಬಳಗ ಮತ್ತು ಕನ್ನಡ ನುಡಿ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. “ಮೂಲತಹ ರಾಯಚೂರು ತತ್ವಪದಕಾರರು, ಶರಣರು, ಸ್ವರ ವಚನಕಾರರು ಕೀರ್ತನಕಾರರು ಹಾಗೂ ದಾಸ ಸಾಹಿತ್ಯದ ತವರೂರೆನಿಸಿದೆ. ಇಂತಹ ನೆಲದ ಸಾಂಸ್ಕೃತಿಕ ತಲ್ಲಣಗಳನ್ನು ಬಹುತ್ವದ ನೆಲೆಯಲ್ಲಿ ಕಾವ್ಯ ,ಕಥೆ, ಕಾದಂಬರಿ, ಸಾಂಸ್ಕೃತಿಕ ಚಿಂತನೆ ಮೂಲಕ ಕಟ್ಟಿಕೊಡುವ ಕೆಲಸ ಆಗಬೇಕಾಗಿದೆ. ಅಲ್ಲದೇ ಅಳಿವಿನ ಅಂಚಿನಲ್ಲಿರುವ ಜಾನಪದ ಸಂಸ್ಕೃತಿಯನ್ನು ಮರು ಕಟ್ಟುವ ಸೃಜನಶೀಲತೆ ಯುವ ಪೀಳಿಗೆಯದಾಗಲಿ” ಎಂದರು.

Namma Sindhanuru Click For Breaking & Local News

ಕಥೆಗಾರ ಅಮರೇಶ ಗಿಣಿವಾರ ಮಾತನಾಡಿ, “ಕಥೆಯೆಂದರೆ ಭೂತಕಾಲದಲ್ಲಿ ನಡೆದು ಹೋದುದನ್ನ ವರ್ತಮಾನದಲ್ಲಿ ಹೇಳಿ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವುದೇ ಕಥೆ.ಇಂತಹ ಕಥೆ ಕಟ್ಟಲು ಕಥೆಗಾರನಿಗೆ ಆಯಾ ಪ್ರಾದೇಶಿಕ ಭಾಷೆ ,ನಿರೂಪಣಾ ಶೈಲಿ, ಅನುಭವ ,ತಂತ್ರಗಾರಿಕೆ ,ಕಥಾವಸ್ತು, ಕಲ್ಪನೆ ,ವಾಸ್ತವ ಕಾಲಘಟ್ಟದ ಅರಿವು ಇರಬೇಕಾಗುತ್ತದೆ” ಎಂದರು.
ಮುಖ್ಯ ಅತಿಥಿ ಕಥೆಗಾರ ನಾಗರಾಜ್ ಕೋರಿ ಮಾತನಾಡಿ, “ಒಬ್ಬ ಕಥೆಗಾರ ಆಗುವುದಕ್ಕಿಂತ ಮುಂಚೆ ಒಬ್ಬ ಒಳ್ಳೆಯ ಓದುಗರಾಗಬೇಕು. ಅಂದಾಗ ಮಾತ್ರ ಒಳ್ಳೆಯ ಕಥೆಗಾರನಾಗಲು ಸಾಧ್ಯ” ಎಂದರು.
ಸಂಸ್ಥೆಯ ಅಧ್ಯಕ್ಷ ಪರಶುರಾಮ್ ಮಲ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಅರುಣಕುಮಾರ್ ಬೇರಿಗೆ ಪ್ರಾಸ್ತಾವಿಕ ಮಾತನಾಡಿದರು. ಎಲ್‌ಬಿಕೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವುಕುಮಾರ್ ಬಿಂಗಿ, ನೊಬಲ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಐಶ್ವರ್ಯ ದಳವಾಯಿ, ಮಾರ್ಗದರ್ಶಕರಾದ ಜ್ಯೋತಿ, ವಸಂತ್ ಕುಮಾರ್, ಕನ್ನಡ ಓದು ಬಳಗದ ಅಧ್ಯಕ್ಷೆ ವಿದ್ಯಾರ್ಥಿನಿ ಬಸಮ್ಮ ಕನ್ನಡ, ನುಡಿ ಕೂಟ ಅಧ್ಯಕ್ಷ ಕ. ಜಾನ್ ಉಪಸ್ಥಿತರಿದ್ದರು. ಅನುಷಾ ಸಂಗಡಿಗರು ಪ್ರಾರ್ಥಿಸಿದರು. ಗೀತಾ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಶ್ವ, ಪದವಿ ವಿದ್ಯಾರ್ಥಿನಿ ಪಾರ್ವತಿ ನಿರ್ವಹಿಸಿದರು. ಬಸವರಾಜ್ ವಂದಿಸಿದರು


Spread the love

Leave a Reply

Your email address will not be published. Required fields are marked *