ಸಿಂಧನೂರು: ಮೇ 15ರಿಂದ ಅತಿಥಿ ಉಪನ್ಯಾಸಕರ ಬಿಡುಗಡೆಗೆ ಆದೇಶ, ಸಂಘದಿಂದ ಹೋರಾಟದ ಎಚ್ಚರಿಕೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 14, 2026

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮೇ 15, 2026 ರಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಿರ್ಧಾರ ಕೈಗೊಂಡಿರುವುದನ್ನು ಅತಿಥಿ ಉಪನ್ಯಾಸಕರ ಸಂಘ ವಿರೋಧಿಸಿದ್ದು, ಕೂಡಲೇ ಇದನ್ನು ವಾಪಸ್ ಪಡೆಯಬೇಕು, ಇಲ್ಲದೇ ಹೋದರೆ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಗಾಯದ ಮೇಲೆ ಬರೆ ಎಳೆದ ಆದೇಶ : ಆಕ್ರೋಶ
“2025-26ನೇ ಸಾಲಿನ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಡಿಸೆಂಬರ್ 9 ರಿಂದ ಕರ್ತವ್ಯ ದಲ್ಲಿರುವ ಉಪನ್ಯಾಸಕರನ್ನು, ದಿನಾಂಕ: 15-05-2026ರಿಂದ ಏಕಾಏಕಿ ಬಿಡುಗಡೆಗೊಳಿಸುತ್ತಿರುವುದು ಅಮಾನವೀಯ ಮತ್ತು ಅವೈಜ್ಞಾನಿಕ ಕ್ರಮವಾಗಿದೆ. ಪ್ರತಿವರ್ಷ 10 ತಿಂಗಳ ಕಾಲ ಸೇವೆಗೆ ಅವಕಾಶವಿರುತ್ತಿತ್ತು. ಆದರೆ ಈ ಬಾರಿ ಅವಧಿಗೂ ಮುನ್ನವೇ ಬಿಡುಗಡೆಗೊಳಿಸುತ್ತಿರುವುದರಿಂದ ಉಪನ್ಯಾಸಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೀಡಾಗಲಿವೆ. ಅನುಭವಿ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಬಿಡುಗಡೆ ಮಾಡುವುದರಿಂದ ವಿದ್ಯಾರ್ಥಿನಿಯರ ವ್ಯಾಸಂಗ ಹಾಗೂ ಮುಂಬರುವ ಪರೀಕ್ಷಾ ಸಿದ್ಧತೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಉಪನ್ಯಾಸಕರಿಗೆ ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣದ ಹೊಣೆ ಹೊರೆಯಾಗಲಿದ್ದು, ಸರ್ಕಾರ ಮತ್ತು ಇಲಾಖೆಯ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಉಪನ್ಯಾಸಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Namma Sindhanuru Click For Breaking & Local News

ಪರೀಕ್ಷಾ ಕಾರ್ಯದಿಂದ ದೂರು ಉಳಿದು ಹೋರಾಟ
“ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಈ ಕೂಡಲೇ ಅತಿಥಿ ಉಪನ್ಯಾಸಕರಿಗೆ ಮಾರಕವಾಗಿರುವ ನಿರ್ಧಾರವನ್ನು ಬದಲಿಸದಿದ್ದರೆ, ಅನಿವಾರ್ಯವಾಗಿ ಮೇ 25, 2026 ರಿಂದ ನಡೆಯಲಿರುವ ಕಾಲೇಜು ಪರೀಕ್ಷೆಗಳ ಎಲ್ಲಾ ಕಾರ್ಯಗಳಿಂದ ದೂರ ಉಳಿದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಾಚಾರ್ಯರ ಮೂಲಕ ಸರ್ಕಾರ, ಇಲಾಖೆಗೆ ಮನವಿ ರವಾನೆ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಮಹಾಂತಪ್ಪ ಕೊಡಗಲಿ ಅವರ ಮೂಲಕ ಗುರುವಾರ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿಪತ್ರವನ್ನು ರವಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಡಾ.ಮುದುಕಪ್ಪ , ಅಧ್ಯಕ್ಷ ಡಾ.ಮದಗಪ್ಪ, ಕಾರ್ಯಧ್ಯಕ್ಷ ಶಂಕರ ವಾಲೇಕಾರ, ಕಾರ್ಯದರ್ಶಿ ಡಾ.ಬಸವರಾಜ ಬಳೆಗಾರ, ವೀರೇಶ ಕನ್ನಾರಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಇದ್ದರು.


Spread the love

Leave a Reply

Your email address will not be published. Required fields are marked *