* ಸಿ.ಜೆ.ಐ ಬಿ.ಆರ್.ಗವಾಯಿ ಅವರ ಮೇಲೆ ಮನುವಾದಿಯ ದಾಳಿ ಹೇಯಕೃತ್ಯ, ತಪ್ಪಿತಸ್ಥನಿಗೆ ಶಿಕ್ಷೆಯಾಗಲೇಬೇಕು
*ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ಸನಾತನಿಗಳ ದುರಾಕ್ರಮಣ ತಡೆಯೊಡ್ಡದಿದ್ದರೆ ದೇಶದ ಜನರಿಗೆ ಅಪಾಯ
* ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ
* ಅಕ್ಟೋಬರ್ 14 ಮಂಗಳವಾರದಂದು ಬೆಳಿಗ್ಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ
—————————————————-
ಲೋಕಲ್‌ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 08
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಮನುವಾದಿಯೊಬ್ಬ ಶೂ ಎಸೆದು ದಾಳಿ ನಡೆಸಲು ಮುಂದಾಗಿರುವ ಹೇಯಕೃತ್ಯವನ್ನು ಖಂಡಿಸಿ, ಅಕ್ಟೋಬರ್ 14ರಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ.
ಬುಧವಾರ ಮಿಲಾಪ್ ಶಾದಿಮಹಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಮುಖಂಡರು ಹಾಗೂ ಹೋರಾಟಗಾರರು, “ಈ ದುಷ್ಕೃತ್ಯವು ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ಮನುವಾದಿಗಳು-ಸನಾತನವಾದಿಗಳು ವ್ಯವಸ್ಥಿತ ದಾಳಿಯಾಗಿದೆ. ಇದು ನ್ಯಾಯ ನಿರ್ಣಯದ ಮೇಲೆ ವ್ಯಾಪಕ ಪರಿಣಾಮ ಬೀರಲಿದ್ದು, ಸಿಜೆಐ ಅವರಿಗೆ ಇಂತಹ ಪರಿಸ್ಥಿತಿ ಬಂದೊದಗಿದರೆ, ಈ ದೇಶದ ಸಾಮಾನ್ಯ ದಲಿತರ ರಕ್ಷಣೆಗೆ ಹೇಗೆ ?” ಎಂದು ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರ ಜಾತಿವಾದ, ಮನುವಾದಿ ಮತ್ತು ಕೋಮುವಾದಿ ಹೇಳಿಕೆಗಳು, ಸಂಘ ಪರಿವಾರದ ಅಸಹಿಷ್ಣುತೆ ಮತ್ತು ಹಿಂದುತ್ವ ಶಕ್ತಿಗಳು ದೇಶದಾದ್ಯಂತ ಹರಡಿದ ಕೋಮುವಾದ ಮತ್ತು ಜಾತಿವಾದದ ವಿಷವು ದಲಿತ ಸಮುದಾಯದಿಂದ ಬಂದ ನ್ಯಾಯಾಧೀಶರಾದ ಸಿಜೆಐ ಅವರನ್ನು ಸಹ ಬಹಿರಂಗವಾಗಿ ಗುರಿಯಾಗಿಸಿದೆ. ಇದು ಇಡೀ ದೇಶದ ಸಾರ್ವಜನಿಕರಿಗೆ ಎಚ್ಚರಿಕೆ ಗಂಟೆಯಾಗಿದೆ” ಎಂದು ಸಮಿತಿ ವಿಶ್ಲೇಷಿಸಿತು. ಅಲ್ಲದೇ ಅಂದು ನಡೆಯುವ ಪ್ರತಿಭಟನಾ ಮೆರವಣಿಗೆ ಪೂರ್ವ ತಯಾರಿ ಕುರಿತಂತೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಸಂಚಾಲಕರು, ವಿವಿಧ ಸಂಘಟನೆಗಳ ಮುಖಂಡರು ಇನ್ನಿತರರು ಇದ್ದರು.
