ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಮೇ 15, 2026
ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಸೈನ್ಸ್ ವಿಭಾಗದಲ್ಲಿ ಅಡ್ಮಿಷನ್ ಸೆಂಚುರಿ ದಾಟಿದ್ದು, ಇನ್ನೂ ಬಹಳಷ್ಟು ವಿದ್ಯಾರ್ಥಿಗಳು ಪ್ರವೇಶ ಮಾಡಿಸುತ್ತಿದ್ದಾರೆ. ಈ ಕಾಲೇಜಿನಲ್ಲಿ ವಿಜ್ಞಾನ ವಾಣಿಜ್ಯ ವಿಭಾಗ ಇದ್ದು, ಗುಣಮಟ್ಟದ ಶಿಕ್ಷಣದ ಮೂಲಕ ಈ ಕಾಲೇಜು ವಿದ್ಯಾರ್ಥಿ ಪಾಲಕರ ಗಮನ ಸೆಳೆದಿದೆ.
2026-27ನೇ ಸಾಲಿನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದ 134 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದು, ಉಳಿದಂತೆ ಹಲವು ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇ.90ರಷ್ಟಾಗಿದ್ದು, ಗಮನಾರ್ಹ ಸಾಧನೆ ಮಾಡಿದೆ.
ಭೌತಶಾಶಾಸ್ತ್ರ, ರಸಾಯನಶಾಸ್ತ್ರ , ಗಣಿತ, ಜೀವ ಶಾಸ್ತ್ರ (ಪಿಸಿಎಂಬಿ), ಭೌತಶಾಸ್ತ್ರ , ರಸಾಯನಶಾಸ್ತ್ರ , ಗಣಿತ, ಕಂಪ್ಯೂಟರ್ ವಿಜ್ಞಾನ (ಪಿಸಿಎಂಸಿಎಸ್) ಈ ಎರಡು ಸಂಯೋಜನೆಗಳನ್ನು ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದಾಗಿದ್ದು, ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯಲು ಅತ್ಯಂತ ಕಡಿಮೆ ಶುಲ್ಕ ಇದ್ದು, ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.2700, ವಿದ್ಯಾರ್ಥಿನಿಯರಿಗೆ ರೂ.1000, ಪ.ಜಾ & ಪ.ಪಂ. ವಿದ್ಯಾರ್ಥಿಗಳಿಗೆ ರೂ.1000 ಹಾಗೂ ಸಿ1, 2ಎ, 2ಬಿ, 3ಎ, 3ಬಿ ಮತ್ತು ಐ.ಸಿ. ವಿದ್ಯಾರ್ಥಿಗಳಿಗೆ ರೂ.1770 ಶುಲ್ಕ ನಿಗದಿಪಡಿಸಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ.
‘ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆ’ : ಪ್ರಾಚಾರ್ಯ ಶೇಖರಯ್ಯ ಸ್ವಾಮಿ
“ವಿಜ್ಞಾನ ವಿಭಾಗದಲ್ಲಿ ಉತ್ಸಾಹಿ ಉಪನ್ಯಾಸಕ ಬಳಗ ಇದ್ದು, ಪ್ರಯೋಗಾಲಯ ಸೇರಿದಂತೆ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಗ್ರಾಮೀಣ ಸೇರಿದಂತೆ ನಗರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ದೃಷ್ಟಿಯಿಂದ ವಿಶೇಷ ತರಗತಿ ಹಾಗೂ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ಪ್ರತಿವರ್ಷವೂ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗುತ್ತಿದ್ದಾರೆ” ಎಂದು ಪ್ರಾಚಾರ್ಯ ಶೇಖರಯ್ಯಸ್ವಾಮಿ ಅವರು ಹೇಳುತ್ತಾರೆ.
‘ವಿಜ್ಞಾನ ವಿಭಾಗ ಕಬ್ಬಿಣದ ಕಡಲೆ ಅಲ್ಲ’: ಉಪನ್ಯಾಸಕ ಸಿದ್ದನಗೌಡ
“ಕೆಲವರಿಗೆ ವಿಜ್ಞಾನ ವಿಭಾಗ ಎಂದರೆ ಕಠಿಣ ಎನ್ನುವ ಮನಸ್ಥಿತಿ ಇದೆ. ಆದರೆ ಸಮಯ ನಿಗದಿಪಡಿಸಿಕೊಂಡು, ನಿಯಮಿತವಾಗಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯುವ ಜೊತೆಗೆ ಹಲವು ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ. ಇತ್ತೀಚಿಗೆ ವಿಜ್ಞಾನ ವಿಭಾಗದ ಬಗ್ಗೆ ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿದ್ದು, ಬಹಳಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಈ ವರ್ಷ ಈಗಾಗಲೇ 100 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ” ಎಂದು ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸಿದ್ದನಗೌಡ ಅವರು ಹೇಳುತ್ತಾರೆ.
