ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 20, 2026
ಹೊಸದಿಲ್ಲಿಯ ಜಂತರ್-ಮಂತರ್ನಲ್ಲಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳು, ಪ್ರತಿಭಟನಾಕಾರರ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ, ದೆಹಲಿ ಪೊಲೀಸರನ್ನು ಛೂಬಿಟ್ಟು ಲಾಠಿ ಚಾರ್ಜ್ ನಡೆಸಿರುವುದು ಹೇಯಕೃತ್ಯವಾಗಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ, ದಾಳಿ ನಡೆಸುವ ಮೂಲಕ ಪ್ರಜಾತಂತ್ರವನ್ನು ಗಾಳಿಗೆ ತೂರಿದ ಕೇಂದ್ರ ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ಹೇಳಿದ್ದಾರೆ.
ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಅವರು, “ನೀಟ್ ಪರೀಕ್ಷೆಯಲ್ಲಿ ನಡೆದಿರುವ ವ್ಯಾಪಕ ಅಕ್ರಮ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಖಂಡಿಸಿ ಹಾಗೂ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮಗೆ ಆಗ್ರಹಿಸಿದ ಪ್ರತಿಭಟನಾಕಾರರ ಮೇಲೆ ಟಿಯರ್ ಗ್ಯಾಸ್ ಮೂಲಕ ದಾಳಿ ಮಾಡಿದ್ದಲ್ಲದೇ, ಲಾಠಿ ಚಾರ್ಜ್ ನಡೆಸಿರುವುದು ಅಮಾನವೀಯಕೃತ್ಯವಾಗಿದೆ. ಸಂಪೂರ್ಣ ಆಡಳಿತ ವೈಫಲ್ಯದಿಂದ ಕಂಗೆಟ್ಟಿರುವ ಬಿಜೆಪಿ ಸಂಪೂರ್ಣ ಹತಾಸೆಗೊಂಡಿದ್ದು, ಪೊಲೀಸರನ್ನು ಮುಂದೆಬಿಟ್ಟು ದಾಳಿಗೆ ಇಳಿದಿದೆ” ಎಂದು ಆಪಾದಿಸಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪವಾಸ ನಿರತ ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರೊಂದಿಗೆ ಮಾತುಕತೆಗೆ ಮುಂದಾಗದೇ ಒತ್ತಾಯಪೂರ್ವಕವಾಗಿ ಸತ್ಯಾಗ್ರಹ ಸ್ಥಳದಿಂದ ಅಪಹರಿಸಿರುವುದು ಇಡೀ ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಬಿಜೆಪಿ ತನ್ನ ಅಕ್ರಮಗಳನ್ನು ಪ್ರಶ್ನಿಸುವವರ ಧ್ವನಿಗಳನ್ನು ಅಡಗಿಸಲು ಪೊಲೀಸ್, ಮಿಲಟರಿ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳ ದುರುಪಯೋಗಪಡಿಸಿ ಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನು ದೇಶದ ಜನರು ಗಮನಿಸುತ್ತಿದ್ದು, ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.
