ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 9, 2026
“ಜೋಡೆತ್ತು ಹದಿನೈದು ಲಕ್ಷ ಬಿದ್ದಾವ್ ನೋಡ್ರಿ. ಇವ್ನ್ ಮೇಯ್ಸಬಕಂದ್ರ ಸುಮ್ನೆ ಅಲ್ಲ, ಹೊರಿ ಹೊರಿ ಸೊಪ್ಪಿ, ಹುಲ್ಲು ಹಾಕ್ಬಕು. ಹೋದ್ ಬ್ಯಾರಿ ತಂದೀವಿ. ಸಿನ್ನೂರಾಗ ಕಾರ ಹುಣ್ಣಿಮಿ ಸ್ಪರ್ಧೆ ಇದ್ದದಕ ಇಲ್ಲಿಗೆ ಹೊಡ್ಕಂಡು ಬಂದೀವಿ” ಹೀಗೆಂದು ನಾರಾಯಣಪುರ ಸಮೀಪದ ಜೋಗೊಂಡನಬಾವಿ ರೈತರು ಹೇಳಿದರು.
ಸಿಂಧನೂರು ತಾಲ್ಲೂಕು ರೈತರ ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದಲ್ಲಿ ಜುಲೈ 9 ಹಾಗೂ 10 ರಂದು ಎರಡು ದಿನಗಳ ಕಾಲ ‘ಸಿಂಧನೂರು ಮುಂಗಾರು ಕಾರ ಹುಣ್ಣಿಮೆ ಸಂಭ್ರಮ-2026’ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಗುರುವಾರ ಬೆಳಿಗ್ಗೆಯೇ ವಿವಿಧ ಕಡೆಯಿಂದ ರೈತರು ಆಗಮಿಸಿದರು.

ಜೋಡೆತ್ತು ನೋಡಲು ಮುಗಿಬಿದ್ದ ರೈತರು
ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ ರೈತರು ತಮ್ಮ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿದ್ದು ಕಂಡುಬಂತು. ಜೋಗೊಂಡನಬಾವಿಯ ಜರ್ಸಿ ತಳಿಯ ಇನ್ನೊಂದು ಜೊತೆ ಎತ್ತುಗಳು ರೈತರನ್ನು ಆಕರ್ಷಿಸಿದವು. ತಲಾ ಒಂದೊಂದು ಎತ್ತನ್ನು 6 ಲಕ್ಷ ರೂಪಾಯಿಯಂತೆ ಕೊಂಡುಕೊAಡಿರುವುದಾಗಿ ಮಾಲೀಕರು ತಿಳಿಸಿದರು.
“ಬಸವಣ್ಣ ಮನ್ಯಾಗ ಇರಬೇಕ್ರಿ”
“ಗಳೇವು-ಗಿಳೇವುಕ ಜಾಸ್ತಿ ಈ ಎತ್ತುಗಳನ್ನ ಬಳಸಂಗಿಲ್ರಿ, ಎತ್ತಿನ ಸ್ಫರ್ಧೆ, ರಾಸುಗಳ ಪ್ರದರ್ಶನ ಇಲ್ಲಂದ್ರ ಹಬ್ಬದಾಗ ಮೆರವಣಿಗೆ ಮಾಡ್ತೀವಿ. ಬಸವಣ್ಣ ಮನ್ಯಾಗ ಇರಬೇಕ್ರಿ. ಬಸವಣ್ಣ ಇದ್ರ ಅದ್ರ ಕಳೇನೆ ಬೇರೆ” ಎಂದು ಎತ್ತುಗಳ ಮಾಲೀಕರು ಹೇಳಿದರು.

