ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 8, 2026
ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳ ಮೇಲೆ ಸಂಘ ಪರಿವಾರದಿಂದ ನಡೆಯುತ್ತಿರುವ ದಾಳಿಗಳು, ದ್ವೇಷದ ರಾಜಕೀಯ ಮತ್ತು ಭೀತಿಯ ವಾತಾವರಣವನ್ನು ನಿರ್ಮಿಸುವ ಪ್ರಯತ್ನಗಳಾಗಿದ್ದು, ಅತ್ಯಂತ ಆತಂಕಕಾರಿ ಬೆಳವಣಿಗೆಗಳಾಗಿವೆ. ಇವು ಕೇವಲ ಪ್ರತ್ಯೇಕ ಘಟನೆಗಳಲ್ಲ; ದೇಶದ ಸಂವಿಧಾನಬದ್ಧ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ಸಂಘಟಿತ ದಾಳಿಗಳ ಭಾಗವಾಗಿವೆ. ಕೂಡಲೇ ಈ ದಾಳಿಗಳಿಗೆ ಕಡಿವಾಣ ಹಾಕಬೇಕು ಎಂದು ಸಿಪಿಐ(ಎಂಎಲ್) ರೆಡ್‌ಸ್ಟಾರ್ ರಾಜ್ಯ ಕಾರ್ಯದರ್ಶಿ ಎಂ.ಗಂಗಾಧರ ಆಗ್ರಹಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಜಾತಿ ಮತ್ತು ಸಮುದಾಯಗಳ ನಡುವೆ ದ್ವೇಷ ಬಿತ್ತಿ ರಾಜಕೀಯ ಲಾಭ ಪಡೆಯುವ ಆರ್‌ಎಸ್‌ಎಸ್–ಬಿಜೆಪಿಯ ಹಿಂದೂತ್ವ ರಾಜಕೀಯವು ದೇಶದ ಏಕತೆ ಮತ್ತು ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯವಾಗಿದೆ.
ಇದಕ್ಕೂ ಮೊದಲು ಬಂಗಾಳದಲ್ಲಿ ಕ್ರಾಂತಿಕಾರಿ ನಾಯಕ ಲೆನಿನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. ಇಂದು ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ದಾಳಿಗಳು, ಭಿನ್ನಾಭಿಪ್ರಾಯಗಳನ್ನು ಮತ್ತು ಪ್ರಜಾಸತ್ತಾತ್ಮಕ ಧ್ವನಿಗಳನ್ನು ಹತ್ತಿಕ್ಕುವ ಫ್ಯಾಸಿಸ್ಟ್ ರಾಜಕೀಯದ ಲಕ್ಷಣಗಳಾಗಿವೆ” ಎಂದು ಹೇಳಿದ್ದಾರೆ.
ಐಕ್ಯ ಹೋರಾಟಕ್ಕೆ ಮುಂದಾಗಲು ಕರೆ
“ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಎಲ್ಲಾ ಪ್ರಜಾಸತ್ತಾತ್ಮಕ, ಜಾತ್ಯಾತೀತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನ, ಮಹಿಳಾ ಹಾಗೂ ಜನಪರ ಸಂಘಟನೆಗಳು, ಅಪಾಯಕಾರಿ ಪ್ರವೃತ್ತಿಯ ವಿರುದ್ಧ ಐಕ್ಯ ಹೋರಾಟ ಕಟ್ಟಬೇಕಾಗಿದೆ. ಮೌನವು ಫ್ಯಾಸಿಸಂಗೆ ಬಲ ನೀಡುತ್ತದೆ; ಪ್ರತಿರೋಧ ಮಾತ್ರ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತದೆ. ಕೇಂದ್ರ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳು ಬಂಗಾಳದಲ್ಲಿ ನಡೆದಿರುವ ಹಿಂಸಾಚಾರ ಹಾಗೂ ಆರಾಧನಾ ಸ್ಥಳಗಳ ಮೇಲಿನ ದಾಳಿಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದ್ವೇಷ ಪ್ರಚೋದನೆ ಮತ್ತು ಸಾಮುದಾಯಿಕ ಹಿಂಸೆಯನ್ನು ಪ್ರೋತ್ಸಾಹಿಸುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಜನರ ಹಕ್ಕುಗಳನ್ನು ರಕ್ಷಿಸಲು ಎಲ್ಲ ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸಬೇಕೆಂದು” ಅವರು ಕರೆ ನೀಡಿದ್ದಾರೆ.
