ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 20, 2026
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿ, ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ 1500 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ತಾಲೂಕು ಏಮ್ಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ತಹಸಿಲ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿಪತ್ರ ರವಾನಿಸಲಾಯಿತು.
ಬೆಳಿಗ್ಗೆ 11 ಗಂಟೆ ಸುಮಾರು ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಯಚೂರು-ಗಂಗಾವತಿ ಹೆದ್ದಾರಿ ಮೂಲಕ ಗಾಂಧಿಸರ್ಕಲ್‌ಗೆ ಸಾಗಿ ಅಲ್ಲಿಂದ ತಹಸಿಲ್ ಕಾರ್ಯಾಲಯ ತಲುಪಿತು. “ಬೇಕೆ ಬೇಕು ರಾಯಚೂರು ಜಿಲ್ಲೆಗೆ ಏಮ್ಸ್ ಬೇಕು”, “ಏಮ್ಸ್ ಮಂಜೂರು ಮಾಡದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ”, “ಏಮ್ಸ್ ಸ್ಥಾಪನೆಯಾಗುವವರೆಗೂ ಹೋರಾಟ ನಿಲ್ಲದು..ನಿಲ್ಲದು” ಎನ್ನುವ ಘೋಷಣೆಗಳು ಮೊಳಗಿದವು.

1500 ದಿನಗಳ ಹೋರಾಟಕ್ಕೂ ಕೇಂದ್ರ ಮನ್ನಣೆ ನೀಡಿಲ್ಲ: ಡಿ.ಎಚ್.ಕಂಬಳಿ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೋರಾಟ ಸಮಿತಿಯ ಸಂಚಾಲಕ ಡಿ.ಎಚ್.ಕಂಬಳಿ ಮಾತನಾಡಿ, “ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕಳೆದ 1500 ದಿನಗಳಿಂದ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಹಲವು ಬಾರಿ ಈ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಿದರೂ ನಿರ್ಲಕ್ಷಿಸಲಾಗಿದೆ. ಏಮ್ಸ್ ಸ್ಥಾಪನೆಯಿಂದ ಈ ಭಾಗದ ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ, ಆರೋಗ್ಯ ಸೌಲಭ್ಯಗಳು ದೊರಕಲಿವೆ, ಅಲ್ಲದೇ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಹಾಗಾಗಿ ಹಿಂದುಳಿದ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
ರಾಯಚೂರು ಜಿಲ್ಲೆಗೆ ಏಮ್ಸ್ ಬೇಕೆ ಬೇಕು : ಎಂ.ಗಂಗಾಧರ
ಸಿಪಿಐ(ಎಂಎಲ್) ರೆಡ್‌ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಮಾತನಾಡಿ, “ಹಿಂದುಳಿದ, ಬಡ, ದಲಿತ, ದಮನಿತ, ರೈತ ಹಾಗೂ ಕಾರ್ಮಿಕರ ಜೀವಕ್ಕೆ ಆಸರೆಯಾಗಲು ಜಿಲ್ಲೆಗೆ ಏಮ್ಸ್ ಬೇಕೇ ಬೇಕು. ಯಾವುದೇ ಒಬ್ಬ ವ್ಯಕ್ತಿ ಅನಾರೋಗ್ಯಕ್ಕೊಳಗಾದಾಗ ಚಿಕಿತ್ಸೆ ಅತ್ಯವಶ್ಯಕವಾಗಿದೆ. ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೊಂಡರೆ ಗುಣಮಟ್ಟದ ಚಿಕಿತ್ಸೆ ದೊರೆತು ಅನಾರೋಗ್ಯಪೀಡಿತರಿಗೆ ಬಹಳಷ್ಟು ಅನುಕೂಲವಾಗಲಿದೆ” ಎಂದು ಹೇಳಿದರು.
ರಾಯಚೂರು ಜಿಲ್ಲೆ ಅತ್ಯಂತ ಹಿಂದುಳಿದೆ. ಅಭಿವೃದ್ಧಿ ಎಂದರೆ ಬೆಂಗಳೂರು ಕೇಂದ್ರಿತ ಎನ್ನುವಂತಾಗಿದೆ. ಹಾಗಾಗಿ ಉತ್ತರ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದು ಮಹಿಳಾ ಮುಖಂಡರಾದ ಸರಸ್ವತಿ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಗೊರಬಾಳ, ಹುಸೇನ್‌ಸಾಬ್, ಬಿ.ಲಿಂಗಪ್ಪ, ವೆಂಕನಗೌಡ ಗದ್ರಟಗಿ, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ದೇವೇಂದ್ರಗೌಡ, ಡಾ.ಹಾಲಪ್ಪ, ಸುರೇಶ ಗೊಬ್ಬರಕಲ್, ನಾಗರಾಜ್ ಪೂಜಾರ್, ಅಪ್ಪಣ್ಣ ಕಾಂಬ್ಳೆ, ಗಂಗಣ್ಣ ಡಿಶ್, ರಾಮಕೃಷ್ಣ ಭಜಂತ್ರಿ, ದಾವಲ್‌ಸಾಬ್ ದೊಡ್ಡಮನಿ ಹಾಗೂ ಶ್ರೀರೇಣುಕಾ ನರ್ಸಿಂಗ್ ಕಾಲೇಜು, ಸನ್‌ರೈಸ್ ಪ್ಯಾರಾ ಮೆಡಿಕಲ್ ಹಾಗೂ ಶ್ರೀ ಬಸವ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕಾಲೇಜಿನ ಉಪನ್ಯಾಸಕರು ಇದ್ದರು.

