ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 15, 2026
ರೈತರ ಖಾತೆಗೆ ಜೋಳದ ಹಣ ಜಮಾ ಮಾಡಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರು ಪೋತ್ನಾಳ್‌ನ ಬಳಗಾನೂರು ಕ್ರಾಸ್‌ನಲ್ಲಿ ರಸ್ತಾರೋಖ ಚಳವಳಿ ನಡೆಸಿದ್ದಲ್ಲದೇ 8 ದಿನದೊಳಗಾಗಿ ಹಣ ಜಮಾ ಮಾಡದಿದ್ದರೆ ‘ಸಿಂಧನೂರು ಬಂದ್’ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ ಮಾತನಾಡಿ, “ಮುಂಗಾರು ಹಂಗಾಮಿನಲ್ಲಿ ಜೋಳ ಮಾರಾಟ ಮಾಡಿ ಮೂರು ತಿಂಗಳಾದರೂ ಇಲ್ಲಿಯವರೆಗೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಪ್ರಸ್ತುತ ಬಿತ್ತನೆ ಕಾರ್ಯ ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ರೈತ ಮುಖಂಡ ಬಸವರಾಜ ಹಂಚಿನಾಳ ಮಾತನಾಡಿ, “ರೈತರು ಅತ್ಯಂತ ಸಂಕಷ್ಟದಲ್ಲಿ ಬೇಸಾಯ ಮಾಡುತ್ತಿದ್ದಾರೆ. ಕಳೆದ ಬಾರಿಯೂ ಖರೀದಿ ಕೇಂದ್ರದ ಮೂಲಕ ಜೋಳ ಖರೀದಿಗೆ ಹಲವು ನಿಬಂಧನೆಗಳನ್ನು ಹೇರಲಾಗಿತ್ತು. ಮಾರಾಟ ಮಾಡಿದ ನಂತರ ವಿಳಂಬವಾಗಿ ಹಣ ಜಮಾ ಮಾಡಲಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಇಲ್ಲದೇ ಹೋದರೆ ಹಣ ಪಾವತಿ ಮಾಡುವವರೆಗೂ ಸಂಘಟನೆಯ ವತಿಯಿಂದ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ರೈತರು ರಸಗೊಬ್ಬರ ಖರೀದಿಗೆ ಎಫ್‌ಐಡಿಯನ್ನು ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಬಹಳಷ್ಟು ತೊಂದರೆ ಎದುರಿಸುತ್ತಿದ್ದಾರೆ. ಹಾಗಾಗಿ ಈ ನಿಬಂಧನೆಯನ್ನು ಕೈಬಿಟ್ಟು ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣ್.ಎಚ್.ದೇಸಾಯಿ ಅವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು. ಮನವಿಪತ್ರವನ್ನು ಸ್ವೀಕರಿಸಿದ ತಹಸೀಲ್ದಾರ್ ಅವರು ಈ ಕುರಿತು ಮೇಲಧಿಕಾರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಅಲ್ಲದೇ ಈ ವೇಳೆ ರೈತ ಮುಖಂಡರು ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಚನ್ನನಗೌಡ, ಯೂಸೂಫ್, ತಿಮ್ಮಣ್ಣ ರಾಮತ್ನಾಳ, ರಾಗಲಪರ್ವಿ ಚನ್ನಬಸಪ್ಪ, ಪುಲದಿನ್ನಿ ಬಸಣ್ಣ, ಧುಮತಿ ಅಯ್ಯಪ್ಪ, ಹೆಡಗಿನಾಳ ಮಲ್ಲಿಕಾರ್ಜುನ ಸೇರಿದಂತೆ 400ಕ್ಕೂ ಹೆಚ್ಚು ರೈತರಿದ್ದರು.

