ಸಿಂಧನೂರು: “ರೈತರನ್ನು ದಾರಿ ತಪ್ಪಿಸುವುದು ಬಿಟ್ಟು, ಜೋಳದ ಹಣ ಬಿಡುಗಡೆಗೆ ನಾಡಗೌಡರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ”: ಶಾಸಕ ಹಂಪನಗೌಡ ಬಾದರ್ಲಿ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 15, 2026

ಜೋಳದ ಹಣ ಬಿಡುಗಡೆ ವಿಳಂಬವಾಗಿರುವುದಕ್ಕೆ ಕೇಂದ್ರ ಸರ್ಕಾರ ಕಾರಣವಾಗಿದ್ದು, ಮಾಜಿ ಶಾಸಕ ವೆಂಕಟರಾವ್ ನಾಡಗೌಡರು, ರೈತರನ್ನು ರಾಜಕೀಯವಾಗಿ ದಾರಿತಪ್ಪಿಸುವುದನ್ನು ಕೈಬಿಟ್ಟು, ಹಣ ಬಿಡುಗಡೆಗೆ ತಮ್ಮದೇ ಪಕ್ಷದ ಪಾಲುದಾರ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, “ನಾಡಗೌಡರು ಸುಳ್ಳನ್ನು ಸತ್ಯವೆಂದು ಬಿಂಬಿಸಲು ಹೊರಟಿದ್ದಾರೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅಡಿ ಜೋಳ ಖರೀದಿಸಿದೆ. ಆದರೆ ಹಣ ಪಾವತಿ ಮಾಡದೇ ಬೇಜವಾಬ್ದಾರಿವಹಿಸಿದೆ. ಜೆಡಿಎಸ್ ಪಕ್ಷ ಬಿಜೆಪಿ ಸರ್ಕಾರದ ಪಾಲುದಾರ ಪಕ್ಷವಾಗಿದ್ದು, ಕೇಂದ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮಂತ್ರಿಯಾಗಿದ್ದಾರೆ. ಅವರದೇ ಸರ್ಕಾರವಿದ್ದರೂ ರಾಜ್ಯ ಸರ್ಕಾರದ ಮೇಲೆ ವಿನಾಃಕಾರಣ ಆಪಾದನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
468 ಕೋಟಿ ರೂಪಾಯಿಯಲ್ಲಿ, ಬಿಡುಗಡೆಯಾಗಿದ್ದು 34 ಲಕ್ಷ ರೂ ?
“ಜಿಲ್ಲೆಯಲ್ಲಿ 18.3.2026 ರಿಂದ 15.5.2026 ರವರೆಗೆ ಮುಂಗಾರು-ಹಿAಗಾರು ಹಂಗಾಮಿನಲ್ಲಿ 22,462 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಂದ ಒಟ್ಟು 12,23,112 ಕ್ವಿಂಟಲ್ ಜೋಳ (ಶೇ.82.85) ಖರೀದಿಸಲಾಗಿದ್ದು, 468 ಕೋಟಿ ರೂಪಾಯಿ ಜಿಲ್ಲೆಯ ರೈತರಿಗೆ ಹಣ ಪಾವತಿಬೇಕಿದೆ. ಆದರೆ ಇಲ್ಲಿಯವರೆಗೆ ಕೇವಲ 34 ಲಕ್ಷ ರೂಪಾಯಿ ಮಾತ್ರ ಬಿಡುಗಡೆಯಾಗಿದೆ” ಎಂದು ವಿವರಿಸಿದರು.
“ಕೇಂದ್ರ ಸರ್ಕಾರ ರಾಜ್ಯದ ಬೆಳೆಗಾರರ ಹಣ ಬಿಡುಗಡೆ ಮಾಡುತ್ತಿಲ್ಲ”
“ರಾಜ್ಯದ ಜೋಳ ಬೆಳೆಗಾರರಿಗೆ 801 ಕೋಟಿ ರೂಪಾಯಿ ಹಾಗೂ ಉಳಿದಂತೆ ಭತ್ತ ಸೇರಿ ಇನ್ನಿತರೆ ಬೆಳೆಗಳಿಗೆ 2800 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಆದರೆ ಕೇಂದ್ರ ಸರ್ಕಾರ ಕಳೆದ 2 ವರ್ಷಗಳಿಂದ ಹಣ ಬಿಡುಗಡೆ ಮಾಡುತ್ತಿಲ್ಲ. ಜೋಳದ ಹಣ ಬಿಡುಗಡೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರ ಆವರ್ತನಿಧಿಯಡಿ ಈಗಾಗಲೇ ತೊಗರಿ, ರಾಗಿ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಹಣ ಪಾವತಿಸಿ ರೈತರಿಗೆ ಸ್ಪಂದಿಸಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಜವಾಬ್ದಾರಿಯಿಂದ ನುಣುಚಿಕೊಂಡಿದೆ” ಎಂದು ದೂರಿದರು.
“ನಾಡಗೌಡರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ದಿಲ್ಲಿಗೆ ತೆರಳಲಿ”
“ರೈತರ ಬಗ್ಗೆ ಕಾಳಜಿ ಇದ್ದರೆ ವೆಂಕಟರಾವ್ ನಾಡಗೌಡ ಅವರು ದಿಲ್ಲಿಗೆ ತೆರಳಿ ತಮ್ಮ ಸಚಿವರು, ಸಂಸದರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ. ಅದನ್ನು ಬಿಟ್ಟು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ರೈತರು ತೊಂದರೆ ಅನುಭವಿಸುತ್ತಿದ್ದರೆ, ಜೆಡಿಎಸ್‌ನ ಎಂಪಿಗಳು, ಕೇಂದ್ರದ ಮಂತ್ರಿಗಳು ಏನು ಮಾಡುತ್ತಿದ್ದಾರೆ ?” ಎಂದು ಹಂಪನಗೌಡ ಬಾದರ್ಲಿ ಪ್ರಶ್ನಿಸಿದರು.
“ನೀರಿನ ಹೋರಾಟ ಟುಸ್ಸಾಗಿದೆ, ಈ ಹೋರಾಟವೂ ಟುಸ್ಸಾಗಲಿದೆ”
“ನಾವು ಮಂತ್ರಿಗಿರಿಗಾಗಿಯೂ ಕೆಲಸ ಮಾಡುತ್ತೀವಿ, ರೈತರ ಬಗೆಗೆ ಕಾಳಜಿಯ ಕೆಲಸವನ್ನು ಮಾಡುತ್ತೀವಿ
ಆದರೆ ನಿಮ್ಮಂತೆ ಸುಳ್ಳು ಹೇಳಿ ರೈತರನ್ನು ದಾರಿ ತಪ್ಪಿಸುವುದಿಲ್ಲ. ಈ ಹಿಂದೆ ನಾಡಗೌಡರ ನೀರಿನ ಹೋರಾಟ ಟುಸ್ಸಾಗಿದೆ, ಈಗ ಈ ಹೋರಾಟವೂ ಟುಸ್ಸಾಗಲಿದೆ” ಎಂದು ಬಾದರ್ಲಿ ವ್ಯಂಗ್ಯವಾಡಿದರು.
“ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ”
ಆಹಾರ ಭದ್ರತಾ ಕಾಯ್ದೆಯಡಿ ಜೋಳ ಖರೀದಿ ಮಾಡುವುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ಸರಿಯಾದ ರೀತಿಯ ಹಣ ಬಿಡುಗಡೆ ಮಾಡದೇ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಭಾರ ಹೊರಿಸುತ್ತಿದೆ. ಮಲತಾಯಿ ಧೋರಣೆ ಮಾಡುತ್ತಿದೆ. ಹಾಗಾಗಿ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಸವರಾಜ ಹಿರೇಗೌಡರ್, ಖಾಜಿಮಲಿಕ್, ಅನಿಲ್‌ಕುಮಾರ್, ಅಶೋಕ ಉಮಲೂಟಿ, ಪ್ರಭುರಾಜ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *