ಸಿಂಧನೂರು: ಕಾರ್ಮಿಕ ಸಂಹಿತೆಗಳಡಿ ಹೊರಡಿಸಿದ ಅಧಿಸೂಚನೆ ತಡೆಹಿಡಿಯಲು ಆಗ್ರಹಿಸಿ ಎಐಸಿಸಿಟಿಯುನಿಂದ ಅಧಿಸೂಚನೆಪ್ರತಿ ದಹಿಸಿ ಪ್ರತಿಭಟನೆ

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 14, 2026

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸಿದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಅಡಿ, ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಕೂಡಲೇ ತಡೆಹಿಡಿಯಬೇಕು ಹಾಗೂ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ವತಿಯಿಂದ ನಗರದ ಗಾಂಧಿಸರ್ಕಲ್‌ನಲ್ಲಿ ಅಧಿಸೂಚನೆಯ ಪ್ರತಿ ದಹಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ರಾಜ್ಯ ಸಹ ಕಾರ್ಯದಶಿ ನಾಗರಾಜ್ ಪೂಜಾರ್ ಮಾತನಾಡಿ, “ಕೇಂದ್ರ ಸರ್ಕಾರ 21 ನವೆಂಬರ್ 2025ರಂದು ಯಾವುದೇ ಪೂರ್ವ ಸೂಚನೆ, ಸಾರ್ವಜನಿಕ ಚರ್ಚೆ ಅಥವಾ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದೇ, 4 ಕಾರ್ಮಿಕ ಸಂಹಿತೆಗಳಾದ “ವೇತನ ಸಂಹಿತೆ 2019, ಸಾಮಾಜಿಕ ಭದ್ರತಾ ಸಂಹಿತೆ 2020, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020” ಅನ್ನು ಏಕಾಏಕಿ ಜಾರಿಗೊಳಿಸಿದ್ದು, ಮೇ 8, 2026ರಂದು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನಾಲ್ಕು ಕಾರ್ಮಿಕ ಸಂಹಿತೆಗಳಡಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಕಾರ್ಮಿಕರ ಮೇಲೆ ಗದಾಪ್ರಹಾರ ನಡೆಸಿದೆ” ಎಂದು ಆಪಾದಿಸಿದರು.

Namma Sindhanuru Click For Breaking & Local News

“ಕಾರ್ಮಿಕ ಸಂಹಿತೆಗಳು ಹಾಗೂ ಅದರ ಅಡಿ ಹೊರಡಿಸಿರುವ ಅಧಿಸೂಚನೆಯಿಂದ ಕೋಟ್ಯಂತರ ಕಾರ್ಮಿಕರು ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ. ಇದರ ಪರಿಣಾಮವಾಗಿ ದೇಶದ ಅಂದಾಜು ಶೇ.47% ರಷ್ಟು ನೋಂದಾಯಿತ ಕಾರ್ಖಾನೆಗಳು ಸುರಕ್ಷತೆ ಮತ್ತು ಆರೋಗ್ಯ ಕಾನೂನುಗಳ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ 14 ದಿನಗಳ ಮುಂಚಿತ ಮುಷ್ಕರ ನೋಟಿಸ್ ಕಡ್ಡಾಯ ಮಾಡುವ ಮೂಲಕ ಹೋರಾಟದ ಹಕ್ಕಿನ ಮೇಲೆ ನೇರ ದಾಳಿ ಮಾಡಲಾಗಿದೆ. ಕಾರ್ಮಿಕ ಸಂಹಿತೆಯಿಂದಾಗಿ ಕಾರ್ಮಿಕರ ಕನಿಷ್ಠ ವೇತನಗಳು ಗಣನೀಯವಾಗಿ ಕಡಿಮೆಯಾಗುವುದಲ್ಲದೇ, ಕಾರ್ಮಿಕರ ಮಾಸಿಕ ಕನಿಷ್ಠ ವೇತನ ರೂ. 27,613 ರಿಂದ ರೂ. 19,154ಕ್ಕೆ ಕುಸಿತವಾಗಲಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಉದ್ಯೋಗ ಸ್ಥಳಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆ ಹಕ್ಕುಗಳು ಸಂಹಿತೆಗಳ ಜಾರಿಯಿಂದ ದುರ್ಬಲಗೊಳ್ಳಲಿದ್ದು, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಒತ್ತಡ ಇಲ್ಲವೇ ಬಲವಂತವಾಗುವ ಸಾಧ್ಯತೆ ಇದೆ. ಮಹಿಳಾ ಕೆಲಸಗಾರರಿಗೂ ಸಮನಾದ ವೇತನದ ತತ್ವವನ್ನು ಕಡೆಗಣಿಸಲಾಗಿದ್ದು, ಗುತ್ತಿಗೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಬದಲು, ಕೆಲಸದ ವ್ಯಾಖ್ಯಾನವನ್ನೇ ಬದಲಿಸಿ ಹೆಚ್ಚಿನ ಮುಖ್ಯ ಕೆಲಸಗಳನ್ನು ಸಹಾಯಕ ಹುದ್ದೆಗಳೆಂದು ಪರಿಗಣಿಸಿ ಗುತ್ತಿಗೆ ಪದ್ಧತಿಗೆ ತಳ್ಳಲಾಗಿದೆ. ಇದು ವಿಶೇಷವಾಗಿ ಮಹಿಳೆ, ದಲಿತ, ಆದಿವಾಸಿ ಕಾರ್ಮಿಕರನ್ನು ಅಸ್ಥಿರ ಮತ್ತು ಶೋಷಣೆಯನ್ನು ಅನುಭವಿಸಬೇಕಾದಂತಹ ಕೆಲಸಗಳಿಗೆ ಸಿಲುಕಿಸುತ್ತದೆ. ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ಹಕ್ಕುಗಳ ನಿರ್ಮೂಲನೆಗೆ, ವೇತನ ಇಳಿಕೆಗೆ, ಸಾಮಾಜಿಕ ಭದ್ರತೆಯ ನಷ್ಟಕ್ಕೆ, ಸಂಘಟನೆ ಸ್ವಾತಂತ್ರ‍್ಯದ ನಾಶಕ್ಕೆ ಹಾಗೂ ನಿರುದ್ಯೋಗಕ್ಕೆ ಕಾರಣವಾಗಲಿವೆ. ಈ ಕಾರ್ಮಿಕ ಸಂಹಿತೆಗಳು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗಾಗಿ ರೂಪಿಸಲಾದ ಯೋಜನೆಯಾಗಿದ್ದು, ಇದು ಕಾರ್ಮಿಕರನ್ನು “ಆಧುನಿಕ ಗುಲಾಮಗಿರಿ” ಸ್ಥಿತಿಗೆ ತಳ್ಳಲಿದೆ. ಹಾಗಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು ಹಾಗೂ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಕೇಂದ್ರ ಸರ್ಕಾರವು ಕಾರ್ಮಿಕ ಸಂಹಿತೆಗಳ ಅಡಿ ರೂಪಿಸಿ ಅಧಿಕೃತವಾಗಿ ಮೇ 8ರಂದು ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ವಾಪಸ್ ಪಡೆಯಬೇಕು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಜಾರಿಗೊಳಿಸದಂತೆ ತಡೆಹಿಡಿಯಲು ಕೂಡಲೇ ಕ್ರಮ ಕೈಗೊಳ್ಳಬೇಕು, ಕಾರ್ಮಿಕ ಸಂಹಿತೆಗಳು ಹಾಗೂ ಅಧಿಸೂಚನೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಸಂಘಟನೆಗಳ ಸಭೆ ಕರೆದು ಚರ್ಚಿಸಬೇಕು ಎಂಬ ಬೇಡಿಕೆಗಳ ಮನವಿಪತ್ರವನ್ನು ತಾಲ್ಲೂಕು ಕಾರ್ಮಿಕ ಇಲಾಖೆ ಅಧಿಕಾರಿಗಳ ಮೂಲಕ ಕಾರ್ಮಿಕ ಸಚಿವರ ಸಂತೋಷ್ ಲಾಡ್ ಅವರಿಗೆ ರವಾನಿಸಲಾಯಿತು.
ಈ ಸಂದರ್ಭದಲ್ಲಿ ನಾಗರಾಜ ಪೂಜಾರ್ ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ, ನಿಂಗಪ್ಪ ತುರುವಿಹಾಳ, ವಿರೇಶ ಜವಗೇರಾ, ಮೌನೇಶ್ ಕವಿತಾಳ, ವೆಂಕಟೇಶ್ , ಹನುಮಂತ, ವಿರೇಶ , ಹುಸೇನಪ್ಪ, ಅಲ್ಲಾ ಸಾಬ್ ಇತರರು ಇದ್ದರು


Spread the love

Leave a Reply

Your email address will not be published. Required fields are marked *