ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 20
ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಹುದ್ದೆ ಖಾಲಿಯಾಗಿದ್ದು, ಹೊಸಬರ ನೇಮಕದ ವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯವರೇ (ಡಿಎಚ್‌ಒ) ಇದರ ಜವಾಬ್ದಾರಿ ಹೊತ್ತಿದ್ದಾರೆ.
ಆಡಳಿತಾಧಿಕಾರಿ ಹುದ್ದೆ ಹೊಣೆಗಾರಿಕೆ ಹೊತ್ತಿದ್ದ ಡಾ.ನಾಗರಾಜ್ ಕಾಟ್ವಾ ಅವರು ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇತ್ತೀಚಿಗೆ ವರ್ಗಾವಣೆಯಾದ ನಂತರ ಹುದ್ದೆ ಖಾಲಿ ಇದ್ದು, ನುರಿತ ಮತ್ತು ತಜ್ಞರನ್ನು ನೇಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿದುಬಂದಿದೆ.
ಹುದ್ದೆ ನಿರ್ವಹಣೆಗೆ ಹಿಂದೇಟು
ಸಿಂಧನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಿಂಧನೂರು ತಾಲೂಕು ಸೇರಿದಂತೆ, ಲಿಂಗಸುಗೂರು, ಮಾನ್ವಿ, ಮಸ್ಕಿ, ಕಾರಟಗಿ ತಾಲೂಕು ಸೇರಿ ತಾವರಗೇರಾ, ತುರ್ವಿಹಾಳ, ಬಳಗಾನೂರು ಇನ್ನಿತರೆ ಕಡೆಯಿಂದ ಹೆರಿಗಾಗಿ ಹೆಚ್ಚಿನ ಗರ್ಭಿಣಿಯರು ದಾಖಲಾಗುತ್ತಿದ್ದು, ಆದರೆ ಅಗತ್ಯ ವೈದ್ಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇರುವ ವೈದ್ಯರು ಒತ್ತಡದ ನಡುವೆಯೂ ಪರಿಣಾಮಕಾರಿ ಚಿಕಿತ್ಸೆ ಒದಗಿಸುತ್ತಿದ್ದಾರೆ. ಆಡಳಿತ ನಿರ್ವಹಣೆ ಜವಾಬ್ದಾರಿ ಮತ್ತು ಚಿಕಿತ್ಸೆ ಎರಡೂ ನಿರ್ವಹಿಸುವುದು ಕಷ್ಟದಾಯಕ ಮತ್ತು ಒತ್ತಡವಾಗಿದ್ದರಿಂದ ಇರುವ ಸಿಬ್ಬಂದಿಯಲ್ಲಿ ಜವಾಬ್ದಾರಿ ನಿರ್ವಹಿಸಲು ಯಾರೂ ಮುಂದೆ ಬರುತ್ತಿಲ್ಲ, ಕಳೆದ ಕೆಲ ದಿನಗಳಿಂದ ಡಿಎಚ್‌ಒ ಅವರೇ ನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
“ತಾಯಿ ಮಕ್ಳು ಆಸ್ಪತ್ರೆ ಆದದಕ ಬೇಸ ಆಗೇತ್ರಿ”
“ತಾಯಿ-ಮಕ್ಳು ದವಖಾನಿ ಆದದಕ ಬೇಸ್ ಆಗೇತ್ರಿ ಯಪ್ಪಾ. ಇಲ್ಲಂದ್ರ ತಡಬಡಸಬಕಾತಿತ್ತು. ದವಾಖಾನಿ ಚ್ವಚ್ಚ ಐತಿ, ಡಾಕ್ಟುç ಚಲೋ ನೋಡ್ತಾರ. ಬಡವ್ರಿಗೆ ಸರ್ಕಾರಿ ಆಸ್ಪತ್ರೀನೆ ಗತಿ ನೋಡ್ರಿ. ಹಳೆ ಆಸ್ಪತ್ರೆದಾಗ ಹೆಣ್ಮಕ್ಳು ಪಡುಬಾರದ ಪಡುಬಟ್ಲಪಡುತಿದ್ರು ನೋಡ್ರಿ” ಎಂದು ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ತಾಯಿ-ಮಕ್ಕಳ ಆಸ್ಪತ್ರೆಯಿಂದ ದೊರೆಯುತ್ತಿರುವ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಆಸ್ಪತ್ರೆಗೆ ಕೊರತೆಯಿರುವ ವೈದ್ಯೋಪಕರಣಗಳು, ಬಜೆಟ್ ಇನ್ನಿತರೆ ಅನುಕೂಲ ಒದಗಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

