ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 14
ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಟ್ರಾಮಾಕೇರ್ ಸೆಂಟರ್ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ ಅಪಘಾತ, ಅವಘಡಗಳಲ್ಲಿ ಗಾಯಗೊಂಡವರಿಗೆ ಗುಣಮಟ್ಟದ ತುರ್ತುಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರ ಆರೋಪಗಳಿವೆ.
ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಸಿಂಧನೂರು ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಗಳ ಜಿಲ್ಲಾಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ರೂ.28.75 ಕೋಟಿ ವೆಚ್ಚದ ಕಾಮಗಾರಿ ಇದೀಗ ಆರಂಭವಾಗಿದೆ. ಈ ಆಸ್ಪತ್ರೆ ಸಾರ್ವಜನಿಕರಿಗೆ ಸೇವೆ ಒದಗಿಸಲು ಒಂದೆರಡು ವರ್ಷಗಳೇ ಬೇಕಿದ್ದು, ಟ್ರಾಮಾಕೇರ್ ಸೆಂಟರ್ ಸದ್ಯ ಅತ್ಯಂತ ಜರೂರಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.
ಹೆಚ್ಚುತ್ತಿರುವ ಅಪಘಾತ, ಸಕಾಲಕ್ಕೆ ದೊರೆಯದ ಚಿಕಿತ್ಸೆ
ಸಿಂಧನೂರು ನಗರದ ಮೂಲಕ ಮೂರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದುಹೋಗುತ್ತವೆ. ಹಾಗಾಗಿ ಈ ಭಾಗದಲ್ಲಿ ಅತಿ ಹೆಚ್ಚು ವಾಹನ ಅಪಘಾತಗಳು ದಾಖಲಾಗಿವೆ. ಅಲ್ಲದೇ ವಿವಿಧ ಅವಘಡಗಳಲ್ಲಿ ನಾಗರಿಕರು ತೊಂದರೆಗೀಡಾಗಿಡುವುದು ಸಾಮಾನ್ಯವಾಗಿದೆ. ಹಾಗಾಗಿ ಅಪಘಾತ ಮತ್ತು ಅವಘಡಗಳಲ್ಲಿ ಗಾಯಗೊಂಡವರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಅವಶ್ಯವಿದ್ದು, ಟ್ರಾಮಾ ಕೇರ್ ಸೆಂಟರ್ ಆರಂಭವಾದರೆ ಬಹಳಷ್ಟು ಅನುಕೂಲವಾಗಲಿದೆ ಎಂಬುದು ವಾಹನ ಚಾಲಕರೊಬ್ಬರ ಒತ್ತಾಯವಾಗಿದೆ.
ಇನ್ನೂ ಮಸ್ಕಿ ತಾಲೂಕು ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿಯವರೆಗೂ ಮೇಲ್ದರ್ಜೆಗೇರದೇ ಇರುವುದರಿಂದ ಅಲ್ಲಿನ ತುರ್ತು ಪ್ರಕರಣಗಳು ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಾಗುವುದರಿಂದ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ.

“ಪದೇ ಪದೆ ವೈದ್ಯರ ಮೇಲೆ ಒತ್ತಡ ಹೇರುವುದೂ ಸರಿಯಲ್ಲ”
“ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಗೆ ತಕ್ಕಂತೆ ವೈದ್ಯೋಪಕರಣಗಳು, ಯಂತ್ರೋಪಕರಣಗಳು, ಅಗತ್ಯ ಸಲಕರಣೆಗಳು ಸೇರಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿರುವುದು ಚುನಾಯಿತ ಪ್ರತಿನಿಧಿಗಳ ಕೆಲಸವಾಗಿದೆ. ಆದರೆ, ಯಾವುದೇ ರೀತಿಯ ಅವಘಡಗಳಾದಾಗ ವೋಟ್ ಬ್ಯಾಂಕ್ ಸಲುವಾಗಿ ಆಸ್ಪತ್ರೆಗೆ ಮುಖ ತೋರಿಸುವ ಜನಪ್ರತಿನಿಧಿಗಳು, ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ಕೊಡುವುದಿಲ್ಲ, ಅಂತಹ ಸಂದರ್ಭದಲ್ಲಿ ವಿನಾಃಕಾರಣ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ದಬಾಯಿಸಲು ಮುಂದಾಗುತ್ತಾರೆ. ಇದು ಎಷ್ಟು ಸರಿ ? ಸರ್ಕಾರದ ಮೇಲೆ ಒತ್ತಡ ಹೇರಿ, ಸರ್ಕಾರಿ ಆಸ್ಪತ್ರೆಯ ಕೊರತೆಗಳನ್ನು ನೀಗಿಸಲು ಇವರೇಕೆ ಕಾಳಜಿ ವಹಿಸುವುದಿಲ್ಲ” ಎಂದು ಕಾರ್ಮಿಕ ಸಂಘಟನೆಯ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ.

