ಸಿಂಧನೂರು: ‘ಸಿಂಧನೂರು ಜಿಲ್ಲೆ’ ರಚನೆ ಹೋರಾಟ, ಎಮ್ಮೆಲ್ಸಿಯವರ ಕಚೇರಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಭೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 13

ಸಿಂಧನೂರು ಜಿಲ್ಲೆ ರಚನೆ ಕುರಿತ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಅವರು ವಿವಿಧ ಕನ್ನಡ ಪರ ಸಂಘಟನೆಗಳ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರೊಂದಿಗೆ ಸೋಮವಾರ ವಿಸ್ತೃತವಾಗಿ ಚರ್ಚೆ ನಡೆಸಿದರು.
ರಾಜಕೀಯ ಇಚ್ಛಾಸಕ್ತಿ ಕೊರತೆ
“ಜಿಲ್ಲೆ ರಚನೆಗೆ ರಾಜಕೀಯ ಇಚ್ಛಾಸಕ್ತಿ ಬೇಕು. ಸಿಂಧನೂರು ಏಷ್ಯಾದಲ್ಲಿಯೇ ಟ್ರಾö್ಯಕ್ಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸರ್ಕಾರಿ ಐಟಿಐ, ಡಿಪ್ಲೊಮಾ ಸೇರಿದಂತೆ ತಾಂತ್ರಿಕ ಶಿಕ್ಷಣದ ಕಾಲೇಜುಗಳಿಲ್ಲ. ಸಿರುಗುಪ್ಪ, ಕಾರಟಗಿ, ಮಸ್ಕಿಯಲ್ಲಿ ಡಿಪ್ಲೊಮಾ ಕಾಲೇಜುಗಳಿದ್ದು, ಸಿಂಧನೂರಿಗೆ ಇನ್ನೂ ಮಂಜೂರಾಗಿಲ್ಲ. ಹಾಗಾಗಿ ಶೈಕ್ಷಣಿಕವಾಗಿಯೂ ಸಿಂಧನೂರನ್ನು ಮುನ್ನೆಲೆಗೆ ತರಬೇಕಿದೆ. ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳ ನಡುವಿನ ಅಂತರ ಕಡಿಮೆ ಇದ್ದರೂ ಅಲ್ಲಿನ ರಾಜಕಾರಣಿಗಳ ಇಚ್ಛಾಸಕ್ತಿಯ ಕಾರಣ ಜಿಲ್ಲೆಗಳಾಗಿವೆ. ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಕೆಲಸಗಳಾಗಬೇಕು ಎಂದು ಚರ್ಚಿಸಿದರು” ಎಂದು ಗೊತ್ತಾಗಿದೆ.

Namma Sindhanuru Click For Breaking & Local News

ಶೀಘ್ರದಲ್ಲೇ ಸಭೆ
“ಈಗಾಗಲೇ ಸಿಂಧನೂರು ನವ ಸಂಕಲ್ಪ ಯಾತ್ರೆಯಲ್ಲಿ ಸಿಂಧನೂರು ಜಿಲ್ಲೆ ರಚನೆ ಕುರಿತಂತೆ ಹಲವು ವರ್ಷಗಳ ಹಿಂದೆಯೇ ತಾವು ಪ್ರಸ್ತಾಪಿಸಿದ್ದು, ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೇನೆ. ಅಲ್ಲದೇ ಈ ಕುರಿತಂತೆ ಇನ್ನಷ್ಟು ಜಾಗೃತಿ ಮೂಡಿಸಲು ರೈತ, ಪ್ರಗತಿಪರ, ವರ್ತಕರು, ವಕೀಲರು, ವೈದ್ಯರು ಸೇರಿದಂತೆ ಸಮಾಜದ ವಿವಿಧ ವಿಭಾಗಗಳ ಮುಖಂಡರ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ವಿವರಿಸಿದರು. ಜಿಲ್ಲಾ ರಚನೆಗೆ ಕುರಿತ ಹೋರಾಟಕ್ಕೆ ತಾವು ತನು-ಮನ-ಧನದಿಂದ ಸಹಕರಿಸುವುದಾಗಿ ಭರವಸೆ ನೀಡಿದರು” ಎಂದು ಕನ್ನಡ ಪರ ಸಂಘಟನೆಯ ಮುಖಂಡರೊಬ್ಬರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ಗಂಗಣ್ಣ ಡಿಶ್, ಮೌನೇಶ ನಾಯಕ ದೊರೆ, ಉಮೇಶಗೌಡ ಅರಳಹಳ್ಳಿ, ಮಂಜುನಾಥ ಗಾಣಗೇರ, ರಾಮಕೃಷ್ಣ ಭಜಂತ್ರಿ, ಮಂಜುನಾಥ ಬಾದರ್ಲಿ, ರಮೇಶ ಗೊಬ್ಬರಕಲ್ ಸೇರಿದಂತೆ ಇನ್ನಿತರರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *