ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9
ನಗರದ ರಾಯಚೂರು-ಗಂಗಾವತಿ ಮಾರ್ಗದ ರಸ್ತೆಯ ಹಳೆ ಚಿಕನ್ ಮಾರ್ಕೆಟ್ ಬಳಿ ಬೆಂಕಿ ಅವಘಡ ಸಂಭವಿಸಿ, ನಾಲ್ಕಾರು ಶೆಡ್ಡಿನ ಅಂಗಡಿಗಳು ಸುಟ್ಟು ಕರಕಲಾದ ಘಟನೆ ದಿನಾಂಕ: 08-01-2026 ಗುರುವಾರ ತಡರಾತ್ರಿ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಬೆಂಕಿ ಅವಘಡದಲ್ಲಿ ಕಾಳಪ್ಪ ಎಂಬುವವರ ಹಗ್ಗದ ಅಂಗಡಿಯ 30ರಿಂದ 40 ಲಕ್ಷ ರೂ ಮೊತ್ತದ ಸಾಮಗ್ರಿಗಳು, ಮಹ್ಮದ್ ಸುಲೇಮಾನ್ ಅವರ ಬಟ್ಟೆಯ ಅಂಗಡಿಯ 10 ರಿಂದ 16 ಲಕ್ಷ ರೂ, ಅನುರಾಗ್ ಎಂಬುವವರ ದೆಹಲಿ ಬಜಾರ್‌ನ 10 ಲಕ್ಷ ರೂ, ಫಯಾಜ್ ಅವರ ಬಟ್ಟೆಯ ಅಂಗಡಿಯ 10 ಲಕ್ಷ ರೂ, ಸೈಯ್ಯದ್ ರಬ್ಬಾನಿ ಅವರ 4 ಲಕ್ಷ ರೂ. ಹಾಗೂ ಸಿತಾರ ಚಿಕನ್ ಅಂಗಡಿ 1 ಲಕ್ಷ ರೂ.ಅಂದಾಜು ಮೊತ್ತದ ಸಾಮಗ್ರಿಗಳು ಸುಟ್ಟು ಹೋಗಿವೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಧಗ ಧಗ ಉರಿದ ಅಂಗಡಿಗಳು
“ರಾತ್ರಿ ಏಕಾಏಕಿ ಅಂಗಡಿಗಳು ಧಗ ಧಗ ಉರಿಯುತ್ತಿರುವುದು ಕಂಡುಬಂತು. ಈ ಕುರಿತು ಅಗ್ನಿಶಾಮಕ ಠಾಣೆಯವರಿಗೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದವರು ಬಂದು ಹಬ್ಬುತ್ತಿದ್ದ ಬೆಂಕಿಯನ್ನು ಆರಿಸಿದರು” ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯಾವ ರೀತಿ ಬೆಂಕಿ ಹೊತ್ತಿಕೊಂಡಿತು ಎನ್ನುವುದು ತಿಳಿದುಬಂದಿದೆ.

ಆರ್ಥಿಕ ಹೊರೆ, ಸಂತ್ರಸ್ತರ ಅಳಲು
ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಸಂತ್ರಸ್ತ ಅಂಗಡಿಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. “ಸಾಲ-ಸೋಲ ಮಾಡಿ ವ್ಯಾಪಾರ ಮಾಡುತ್ತಿದ್ದೆವು. ಹೇಗೋ ಏನೋ ಬದುಕು ನಡೆಯುತ್ತಿತ್ತು. ಆದರೆ ಬೆಂಕಿ ಆಕಸ್ಮಿಕದಲ್ಲಿ ಅಂಗಡಿಯ ಎಲ್ಲಾ ಸಾಮಾನುಗಳು ಸುಟ್ಟುಹೋಗಿದ್ದು, ಮಾಡಿದ ಸಾಲ, ಕುಟುಂಬ ನಿರ್ವಹಣೆ ಹೇಗೆ ಮಾಡಬೇಕೆನ್ನುವುದು ಚಿಂತೆಯಾಗಿದೆ” ಎಂದು ಅಂಗಡಿಯ ಮಾಲೀಕರೊಬ್ಬರು ಅಳಲು ತೋಡಿಕೊಂಡರು.
