ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 2
ಶಾಸಕ ಹಂಪನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಶುಕ್ರವಾರ ನಗರಸಭೆ ಸಭಾಭವನದಲ್ಲಿ ಕರೆದಿದ್ದ ವಿವಿಧ ಸಂಘಟನೆಗಳ ಸಭೆಯಲ್ಲಿ ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ರಚಿಸುವ ಕುರಿತಂತೆ ಚರ್ಚಿಸಲಾಯಿತು. ಶಾಸಕರು ಮಾತನಾಡಿ, ಸಿಂಧನೂರು, ಲಿಂಗಸುಗೂರು, ಮಸ್ಕಿ ಹಾಗೂ ಸಿರವಾರವನ್ನೊಳಗೊಂಡು ಜನಸಂಖ್ಯಾಧಾರಿತವಾಗಿ ನೂತನ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಪ್ರಯತ್ನಿಸಬಹುದು. ಈ ನಿಟ್ಟಿನಲ್ಲಿ ಸಂಘಟನೆಗಳು ತೊಡಗಿಸಿಕೊಳ್ಳುವುದು ಮುಖ್ಯ ಎಂದರು.
ಜಿಲ್ಲಾ ಹೋರಾಟ ಸಮಿತಿ ರಚಿಸಲು ನಿರ್ಧಾರ
ಈ ವೇಳೆ ಮುಖಂಡರಾದ ದೇವೇಂದ್ರಗೌಡ, ಡಿ.ಎಚ್.ಪೂಜಾರ್, ವೈ.ನರೇಂದ್ರನಾಥ, ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಹಾಗೂ ಡಾ.ಬಿ.ಎನ್.ಪಾಟೀಲ್ ಅವರು ಮಾತನಾಡಿದರು. ಆಯಾ ಸಂಘಟನೆಗಳ ಮುಖಂಡರು ಒಗ್ಗೂಡಿ ಸಿಂಧನೂರು ಜಿಲ್ಲಾ ಕೇಂದ್ರವಾದರೆ ಏನೆಲ್ಲಾ ಅನೂಕೂಲವಾಗಲಿದೆ ಎಂಬುದನ್ನು ಉಳಿದ ತಾಲೂಕುಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಆ ನಿಟ್ಟಿನಲ್ಲಿ ಸಮಿತಿ ರಚಿಸಿದರೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಕ್ಷಾತೀತ ಸಮಿತಿ ರಚನೆಯಾಗಲಿ
ಸ್ಸ್ತ್ರಿಶಕ್ತಿ ಸಂಘದ ಶ್ರೀದೇವಿ ಶ್ರೀನಿವಾಸ ಅವರು ಮಾತನಾಡಿ, ಪಕ್ಷಾತೀತವಾಗಿ ಸಮಿತಿ ರಚನೆ ಮಾಡುವ ಮೂಲಕ ಜಿಲ್ಲಾ ಹೋರಾಟವನ್ನು ಮುನ್ನೆಲೆಗೆ ತರಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ, ಪ್ರತಿಯೊಂದು ಸಂಘಟನೆಯವರೂ ಕಾಳಜಿ ವಹಿಸಿ ಹೋರಾಟದಲ್ಲಿ ತೊಡಗಿಸಿಕೊಂಡಾಗ ಸರ್ಕಾರದ ಮಟ್ಟದಲ್ಲಿ ನಮ್ಮ ಪರವಾದ ತೀರ್ಮಾನಗಳು ಬರಲು ಸಾಧ್ಯ ಎಂದು ಹೇಳಿದರು.
ಸಿಂಧನೂರಲ್ಲಿ ಜಿಲ್ಲಾಮಟ್ಟದ ಕಾರ್ಯಾಲಯಗಳು
ಈಗಾಗಲೇ ಜಿಲ್ಲಾ ಕೋರ್ಟ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಆಸ್ಪತ್ರೆಗೆ ಮಂಜೂರಾಗಿದೆ. ಸುಡಾ, ಕೆಇಬಿ ಕಾರ್ಯಾಲಯ, ಆರ್ಟಿಒ ಕಚೇರಿ ಆರಂಭವಾಗಿದ್ದು, ಡಿಡಿಪಿಐ ಕಚೇರಿ, ಹೆಚ್ಚುವರಿ ಎಸ್ಪಿ ಕಚೇರಿ ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಗತಿ ನಡೆದಿದೆ ಎಂದು ಶಾಸಕ ಹಂಪನಗೌಡ ಅವರು ತಿಳಿಸಿದರು. ಸಿಂಧನೂರು ಜಿಲ್ಲೆಯಾಗಬೇಕೆಂಬುದು ಎಲ್ಲರ ಮಹದಾಸೆ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಘಟನೆಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ್, ಕೃಷಿ ಬೆಲೆ ಆಗೋಗದ ಮಾರ್ಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು.

