ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 01
ನಗರದ ಸಹನಾ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞ ಡಾ.ಶಿವರಾಜ ಪಾಟೀಲ್ ಅವರು ಕಸ ಆಯುವ ಸಮುದಾಯದ ಮಕ್ಕಳಿಗೆ ಗುರುವಾರ ಹೊಸಬಟ್ಟೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಹೊಸ ವರ್ಷ ಆಚರಿಸಿದರು.
“ಕಸ ಆಯುವ ಸಮುದಾಯದ ಮಕ್ಕಳ ಪಾಲಿಗೆ ಹೊಸ ವರ್ಷವೆಂದರೆ ಉಳಿದ ದಿನಗಳಂತೆಯೇ ಸಾಮಾನ್ಯ. ಮೈ ನಡುಗಿಸುವ ಚಳಿಯಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಆಯುವುದು ಅವರ ಬದುಕು. ಅವರಿಗೆ “ಹೊಸ ವರ್ಷ” ಎಂದರೆ ಎಂದಿಗೂ ಹೊಸ ಬಟ್ಟೆ ಅಥವಾ ಉಡುಗೊರೆಗಳಲ್ಲ; ಅದು ಬರಿ ಬದುಕಿನ ಹೋರಾಟವಷ್ಟೇ. ಈ ಹೊಸ ವರ್ಷ, ಸಂಭ್ರಮವು ಕರುಣೆಯ ರೂಪದಲ್ಲಿರಲಿ. ಸಂತೋಷವೆನ್ನುವುದು ಕೇವಲ ನಾವು ಅನುಭವಿಸುವ ವಸ್ತುವಾಗದೆ, ಇತರರಿಗೆ ಹಂಚುವ ಗುಣವಾಗಲಿ” ಎಂದು ವೈದ್ಯ ಡಾ.ಶಿವರಾಜ ಪಾಟೀಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 100 ಬಡ ಮಕ್ಕಳಿಗೆ ಉಚಿತವಾಗಿ ಬಟ್ಟೆಬರೆ ಹಂಚುವ ಮೂಲಕ ಮಾನವೀಯತೆ ತೋರಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಇನ್ನಿತರರು ಇದ್ದರು.

