ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 31
ಕಳೆದ ವರ್ಷ ಡಿ.24, 2024ರಂದು ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಕಾರ್ಯಾಚರಣೆ ಮೂಲಕ ಒಕ್ಕಲೆಬ್ಬಿಸಿದ್ದರಿಂದ ಅವಲಂಬಿತ ಸಾವಿರಾರು ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಸಂತ್ರಸ್ತ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕಾಗಿ ಜಾಗ ನೀಡುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ 02-01-2026ರಿಂದ ತಹಸೀಲ್ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿ ಸಂಚಾಲಕರಾದ ಡಿ.ಎಚ್.ಪೂಜಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಅವರು ಮಾತನಾಡಿದರು. “ಕಳೆದ ಒಂದು ವರ್ಷದಿಂದ ಬೀದಿ ವ್ಯಾಪಾರಿಗಳ ಗೋಳು ಕೇಳುವವರೇ ಇಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಶಾಸಕರು, ಅಧಿಕಾರಿಗಳು, ಮಾತು ಉಳಿಸಿಕೊಳ್ಳಲಿಲ್ಲ. ಆಳುವ ಪಕ್ಷಗಳ ಯಾವ ನಾಯಕರು ಈ ಬಡವರ ನೆರವಿಗೆ ಬಂದಿಲ್ಲ. ರಿಯಾಜ್ ತಂ/ವಲಿಸಾಬ್ (22), ಬಸವರಾಜ ತಂದೆ ನಾಗಪ್ಪ (59) ಹಾಗೂ ಶೌಕತ್ ಅಲಿ (30) ಮೂವರು ಬೀದಿ ವ್ಯಾಪಾರಿಗಳ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಮೂವರ ಸಾವುಗಳು, ತಾಲೂಕ, ಜಿಲ್ಲಾಡಳಿತದ ನಿರ್ಲಕ್ಷö್ಯದಿಂದ ಘಟಿಸಿವೆ. ಇನ್ನೂ ನೂರಾರು ವ್ಯಾಪಾರಿಗಳು ನಗರ ಬಿಟ್ಟು ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಇನ್ನೂ ಕೆಲವರು. ಸಾಲಗಾರರ ಕಿರುಕುಳಕ್ಕೆ ಹೆದರಿ ಮಧ್ಯೆ ರಾತ್ರಿ ಮನೆಗೆ ಬಂದು ಹೋಗುತ್ತಿದ್ದಾರೆ. ನಗರ ಸಭೆಯ ಅಧಿಕಾರಿಗಳ ಸರ್ವೆ ಪ್ರಕಾರ 620 ಶೆಡ್, ಡಬ್ಬಾ ಅಂಗಡಿಗಳು ಹಾಗೂ ತಳ್ಳು ಬಂಡಿಗಳ ಲೆಕ್ಕವಿಲ್ಲ. ಒಟ್ಟು 1000 ಸಣ್ಣಪುಟ್ಟ ಬೀದಿ ವ್ಯಾಪಾರಿಗಳು ಮತ್ತು ಅವರನ್ನು ಅವಲಂಬಿಸಿದ 5000ಕ್ಕೂ ಹೆಚ್ಚು ಕುಟುಂಬ ಸದಸ್ಯರ ಬದುಕು ತೆರವು ಕಾರ್ಯಾಚರಣೆಯಿಂದ ಬರ್ಬಾದ್ ಆಗಿದೆ” ಎಂದು ಪೂಜಾರ್ ಆಪಾದಿಸಿದರು.
‘ಧರಣಿ ಸ್ಥಳಕ್ಕೆ ಬಂದು ಸಿಎಂ ಮನವಿ ಪಡೆದು ಸಮಸ್ಯೆ ಪರಿಹರಿಸಲಿ’
“ಕಳೆದ 1 ವರ್ಷದಿಂದ ಬೀದಿ ವ್ಯಾಪಾರಸ್ಥರು ಜೀವನ ನಡೆಸಲು ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಲ್ಲಿಯವರೆಗೂ ಅವರಿಗೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈ ಕುರಿತು ಸಚಿವರು, ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ. ಹಾಗಾಗಿ 02-01-2026ರಂದು ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದ್ದು, ಜ.3ರಂದು ಸಿಂಧನೂರಿಗೆ ಆಗಮಿಸುವ ಸಿಎಂ ಸಿದ್ದರಾಮಯ್ಯ ಅವರು ಧರಣಿ ಸ್ಥಳಕ್ಕೆ ಬಂದು ಮನವಿಪತ್ರ ಪಡೆಯುವ ಮೂಲಕ ಸಂತ್ರಸ್ತ ಕುಟುಂಬಗಳ ಬೇಡಿಕೆ ಈಡೇರಿಸಬೇಕು. ಇಲ್ಲದೇ ಹೋದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ” ಎಂದು ಡಿ.ಎಚ್.ಪೂಜಾರ್ ತಿಳಿಸಿದರು.

‘ಬಡವರಿಗೆ ಒಂದು ಕಾನೂನು ಬಲಿಷ್ಠರಿಗೆ ಒಂದು ಕಾನೂನು’
ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಪೌರಾಯುಕ್ತರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು, ಬಡವರ ಬದುಕನ್ನು ಬೀದಿಗೆ ತಳಿದ್ದಾರೆ. ರಾಜ್ಯ ಹೆದ್ದಾರಿ 30, ರಾಷ್ಟ್ರೀಯ ಹೆದ್ದಾರಿ 150ಎ ಅತಿಕ್ರಮಣ ಮಾಡಿದ್ದ 300ಕ್ಕೂ ಹೆಚ್ಚಿನ ಬಿಲ್ಡಿಂಗ್ ಮಾಲೀಕರಿಗೆ ನೋಟಿಸ್ ಕೊಟ್ಟರೂ ಅವರ ಕಟ್ಟಡಗಳ ತಂಟೆಗೆ ಹೋಗಲಿಲ್ಲ. ಪಿಡಬ್ಲುಡಿ ಅಧಿಕಾರಿಗಳು ಮಾರ್ಕ್ ಮಾಡಿದ್ದ ಯಾವ ಬಿಲ್ಡಿಂಗ್‌ಗಳನ್ನು ಮುಟ್ಟಿಲ್ಲ. ಭೂಕಬಳಿಕೆ ನಿಷೇಧ ಕೋಟ್ ಹಾಗೂ ಹೈಕೋರ್ಟ್ ಆದೇಶವನ್ನು ಬೀದಿ ವ್ಯಾಪಾರಿಗಳ ಮೇಲೆ ಅಸ್ತ್ರವಾಗಿ ಬಳಸಲಾಯಿತು. ರಸ್ತೆ ಮಧ್ಯದಿಂದ ಎರಡು ಕಡೆ 21 ಮೀಟರ್ ರಸ್ತೆ ತೆರವುಗೊಳಿಸುವ ಹೈಕೋರ್ಟಿನ ಆದೇಶವನ್ನು ಧಿಕ್ಕರಿಸಲಾಯಿತು. ಗಂಗಾವತಿ ರಸ್ತೆಯ ಬಲ ಭಾಗದಲ್ಲಿ 21 ಮೀಟರ್ ಬಿಟ್ಟು ಹಾಕಿಕೊಂಡಿದ್ದ ಶೆಡ್‌ಗಳನ್ನೂ ಸಹ ಅಧಿಕಾರಿಗಳು ದೌರ್ಜನ್ಯದಿಂದ ಕಿತ್ತಿದರು. ಎಡ ಭಾಗದಲ್ಲಿ 15 ಮೀಟರ್‌ಗಿಂತ ಕಡಿಮೆ ಅಂತರದಲ್ಲಿ 70ಕ್ಕೂ ಹೆಚ್ಚು ಬಿಲ್ಡಿಂಗ್ ಕಟ್ಟಡಗಳನ್ನು ಹಾಗೆಯೇ ಬಿಟ್ಟಿದ್ದಾರೆ. ನಗರ ಪೋಲಿಸ್ ಸ್ಟೇಷನ್ ಪಕ್ಕದ ರಾಯಚೂರು ರಸ್ತೆಯಲ್ಲಿನ ಬಿಲ್ಡಿಂಗ್‌ಗಳು 15 ಮೀಟರ್ ವ್ಯಾಪ್ತಿಯಲ್ಲಿವೆ. ಕೆಲ ವರ್ಷಗಳ ಹಿಂದೆ ಈ ಮಳಿಗೆಗಳ ಮುಂಭಾಗವನ್ನು ತೆರವುಗೊಳಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಬುಲ್ಡೋಜರನ್ನು ಹಾಲಿ ಶಾಸಕರು ತಡೆದು ನಿಲ್ಲಿಸಿದ್ದರು. ಈ ಕಾರಣದಿಂದಲೇ ಈ ಮಳಿಗೆಗಳ ಕಾರ್ಯಾಚರಣೆ ನಡೆಯಲಿಲ್ಲ ಎನ್ನುವ ಅನುಮಾನಗಳಿವೆ. ಹಾಗಾದರೆ ಸಿಂಧನೂರಿನಲ್ಲಿ ಬಡವರಿಗೊಂದು ಕಾನೂನು, ಬಲಿಷ್ಠರಿಗೆ ಒಂದು ಕಾನೂನು ಬೇರೆ ಇದೆಯೇ ? ಎಂದು ಪೂಜಾರ್ ಪ್ರಶ್ನಿಸಿದರು.
ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗಿದ್ದಾರೆ ?
ಕುಷ್ಟಗಿ ರಸ್ತೆಯ ಎಪಿಎಂಸಿ ಮುಂದುಗಡೆ 21 ಮೀಟರ್ ಬಿಟ್ಟು ಹಾಕಿದ್ದ ಶೆಡ್ ಮತ್ತು ಡಬ್ಬಾಗಳನ್ನು ತೆರವುಗೊಳಿಸಲಾಯಿತು. ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ಮುಂದಿನ ನೂರಾರು ಕಟ್ಟಡಗಳು 15 ಮೀಟರ್ ಒಳಗಡೆ ಇದ್ದರೂ ಈ ಬಿಲ್ಡಿಂಗ್‌ಗಳ ತಂಟೆಗೆ ಹೋಗಲಿಲ್ಲ. ಪಿಡಬ್ಲುö್ಯಡಿ ಕ್ಯಾಂಪಿನಲ್ಲಿ 21 ಮೀಟರ್ ಬಿಟ್ಟು ಹಾಕಿದ್ದ ಡಬ್ಬಾ, ಶೆಡ್‌ಗಳನ್ನು ಕಿತ್ತಿದ ಅಧಿಕಾರಿಗಳು, ಕೆಪಿಟಿಸಿಎಲ್ ಮುಂದಿನ ಅತಿಕ್ರಮಣಗೊಂಡ ಕಟ್ಟಡಗಳನ್ನು ಮಾತ್ರ ಮುಟ್ಟಿಲ್ಲ. ಹಾಗಾದರೆ ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ ಹಾಗೂ ಪಿಡಬ್ಲುö್ಯಡಿ ಇಲಾಖೆಯವರು ಯಾರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಸರ್ಕಾರಿ ಜಾಗೆಗಳ ಅತಿಕ್ರಮಣ
ಬಸ್ ನಿಲ್ದಾಣದ ಮುಂದಿನಿಂದ ಆದರ್ಶ ಕಾಲೋನಿಗೆ ಹೋಗುವ ಮೂರು ಒಳ ರಸ್ತೆಗಳನ್ನು ಅತಿಕ್ರಮಿಸಿ ಬಿಲ್ಡಿಂಗ್ ಕಟ್ಟಲಾಗಿದೆ. ಈ ಕಟ್ಟಡಗಳನ್ನು ತೆರವುಗೊಳಿಸಲು ದೂರು ಕೊಟ್ಟರೂ ಯಾವುದೇ ಕ್ರಮವಾಗಿಲ್ಲ. ಅಲ್ಲದೇ ನಗರದ ವಿವಿಧ ಕಡೆ ಇರುವ ಸರ್ಕಾರಿ ಜಾಗೆಗಳನ್ನು ಪ್ರಭಾವಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಅತಿಕ್ರಮಣ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ಜಾಗವನ್ನಾದರೂ ಬಾಡಿಗೆ ರೂಪದಲ್ಲಿ ವ್ಯಾಪಾರಸ್ಥರಿಗೆ ಕೊಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳಾಗಲೀ, ಶಾಸಕರಾಗಲೀ ಕೇಳುತ್ತಿಲ್ಲ. ಹೀಗಾದರೆ ಬೀದಿ ಬದಿ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
‘ಸಿಂಧನೂರು ಜಿಲ್ಲಾ ಕನಸಿನ ಗೋಪುರ ಕಟ್ಟಬೇಡಿ’
ಶಾಸಕರು ಸಿಂಧನೂರು ಜಿಲ್ಲಾ ರಚನೆ ಕುರಿತಂತೆ ಕೇವಲ ಕನಸಿನ ಗೋಪುರ ಕಟ್ಟುತ್ತಿದ್ದಾರೆ. ಅದನ್ನು ಕೈಬಿಟ್ಟು ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಸಿಎಂ ಸಿದ್ದರಾಮಯ್ಯ ಅವರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜ.3ರಂದು ಸಿಂಧನೂರಿಗೆ ಆಗಮಿಸಲಿದ್ದು, ಬೀದಿ ಬದಿ ವ್ಯಾಪಾರಸ್ಥರ ಅಳಲನ್ನು ಆಲಿಸಬೇಕು. ಇಲ್ಲದೇ ಹೋದರೆ ಬೀದಿ ವ್ಯಾಪಾರಸ್ಥರು ಸೇರಿದಂತೆ ಅವರ ಕುಟುಂಬಸ್ಥರೊAದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬಾದರ್ಲಿ, ಬಸವರಾಜ ಹಂಚಿನಾಳ, ರಮೇಶ ಪಾಟೀಲ್, ಕೃಷ್ಣಮೂರ್ತಿ ಧುಮತಿ, ಚಂದ್ರಶೇಖರ ಗೊರಬಾಳ, ಹಿರೇಬೇರಿಗಿ, ನಾರಾಯಣ ಬೆಳಗುರ್ಕಿ, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಖಾಸಿಂ ಕಾರ್ಪೆಂಟರ್ ಇನ್ನಿತರರಿದ್ದರು.

