ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 30
ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿ ಬಸವ ಸರ್ಕಲ್ ಬಳಿ ರಸ್ತೆ ದುರಸ್ತಿಗಾಗಿ ಅಂಗಡಿ-ಮುಂಗಟ್ಟುಗಳ ಮುಂದೆ ಮಣ್ಣಿನ ಗುಡ್ಡೆ ಹಾಕಲಾಗಿದ್ದು, ದೈನಂದಿನ ವ್ಯಾಪಾರ-ವ್ಯವಹಾರಕ್ಕೆ ಅಡಚಣೆಯಾಗಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಲಕ್ಷಾಂತರ ರೂಪಾಯಿ ಬಾಡಿಗೆ ಕೊಟ್ಟು ಮಳಿಗೆಗಳನ್ನು ಬಾಡಿಗೆ ಹಿಡಿದಿದ್ದೇವೆ, ಏಕಾಏಕಿ ರಸ್ತೆ ರಿಪೇರಿ ನೆಪದಲ್ಲಿ ಸಂಬಂಧಿಸಿದ ಇಲಾಖೆಯವರು ಮಣ್ಣಿನ ಗುಡ್ಡೆ ಹಾಕಿದ್ದಾರೆ. ಹೀಗಾದರೆ ಯಾವ ಗ್ರಾಹಕರು ಅಂಗಡಿಗೆ ಬರುತ್ತಾರೆ. ಎರಡ್ಮೂರು ದಿನದಿಂದ ಹೀಗೆ ಹಾಕಿದ್ದು, ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ಎಷ್ಟು ದಿನಕ್ಕೆ ಕೆಲಸ ಮುಗಿಸುತ್ತಾರೋ ತಿಳಿಯುತ್ತಿಲ್ಲ ಎಂದು ವ್ಯಾಪಾರಸ್ಥರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳಿಲ್ಲ
ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ನಡೆಸಲಾಗುತ್ತಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದ ಬೆಳಿಗ್ಗೆ ಟ್ರಾಫಿಕ್ ಹೆಚ್ಚಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವುದರಿಂದ ವ್ಯಾಪಾರಸ್ಥರಿಗಲ್ಲದೇ, ನಾಗರಿಕರಿಗೂ ಸಮಸ್ಯೆಯಾಗಿದೆ. ಯಾರಾದರೂ ಸಚಿವರು ಇಲ್ಲವೇ ದೊಡ್ಡ ಮಟ್ಟದ ಅಧಿಕಾರಿಗಳು ಬರುತ್ತಾರೆಂದರೆ ಸಾಕು ರಸ್ತೆ ರಿಪೇರಿಗೆ ಮುಂದಾಗುತ್ತಾರೆ. ಇಲ್ಲದಿದ್ದರೆ ಇದೇ ರಸ್ತೆಯಲ್ಲಿ ಜನರು ದಿನವೂ ಸಂಚರಿಸಿದರೂ ಕೇಳೋರು ಇರುವುದಿಲ್ಲ ಎಂದು ನಾಗರಿಕರೊಬ್ಬರು ತಿಳಿಸಿದ್ದರೆ.

