ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 25
ನಗರದ ಹೋಲಿಫ್ಯಾಮಿಲಿ ಚರ್ಚ್ ಸೇರಿದಂತೆ ತಾಲೂಕಿನ ವಿವಿಧೆಡೆ ಕ್ರಿಸ್‌ಮಸ್‌ನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಪವಿತ್ರ ಮಸ್ಸಾವನ್ನು ರೆವರೆಂಟ್ ಫಾದರ್ ಜ್ಞಾನ ಪ್ರಕಾಶ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ಯಾರಿಷ್ ಕೌನ್ಸಿಲ್ ಸದಸ್ಯರು, ಚರ್ಚ್ ಸಮಿತಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಿಷ್ ಸದಸ್ಯರು ಪಾಲ್ಗೊಂಡಿದ್ದರು.

ಪ್ರೀತಿ, ಶಾಂತಿ, ತ್ಯಾಗ, ಕ್ಷಮೆ ಹಾಗೂ ಸಹೋದರತ್ವ ಮೌಲ್ಯ ಅಳವಡಿಸಿಕೊಳ್ಳಿ: ಫಾದರ್ ಜ್ಞಾನ ಪ್ರಕಾಶ್
ಫಾದರ್ ಜ್ಞಾನ ಪ್ರಕಾಶ್ ಅವರು ಮಾತನಾಡಿ, ಯೇಸು ಕ್ರಿಸ್ತರ ಜನನದ ಮಹತ್ವವನ್ನು ವಿವರಿಸಿ, ಪ್ರೀತಿ, ಶಾಂತಿ, ತ್ಯಾಗ, ಕ್ಷಮೆ ಹಾಗೂ ಸಹೋದರತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಸಮಾಜದಲ್ಲಿ ಶಾಂತಿ, ಏಕತೆ ಮತ್ತು ಮಾನವೀಯತೆಯನ್ನು ಬೆಳೆಸುವಲ್ಲಿ ಕ್ರಿಸ್‌ಮಸ್ ಹಬ್ಬದ ಸಂದೇಶ ಅತ್ಯಂತ ಮಹತ್ವದ್ದೆಂದು ಅವರು ಬೋಧಿಸಿದರು. ಪವಿತ್ರ ಬಲಿ ಪೂಜೆ ಸಂದರ್ಭದಲ್ಲಿ ಕ್ರಿಸ್‌ಮಸ್ ಕೀರ್ತನೆಗಳು, ಬೈಬಲ್ ವಾಚನಗಳು ಮತ್ತು ವಿಶೇಷ ಪ್ರಾರ್ಥನೆಗಳು ನೆರವೇರಿದವು. ಈ ವೇಳೆ ಕ್ರೈಸ್ತ ಸಮುದಾಯ ಬಾಂಧವರು ಪರಸ್ಪರ ಕ್ರಿಸ್‌ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಜವಳಗೇರಾ ಚರ್ಚ್‌ನಲ್ಲಿ ಕ್ರಿಸ್ಮಮಸ್ ಆಚರಣೆ
ತಾಲೂಕಿನ ಜವಳಗೇರಾ ಗ್ರಾಮದ ಚರ್ಚ್‌ನಲ್ಲಿ ಗುರುವಾರ ಕ್ರಿಸ್ಮಸ್‌ನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಕ್ರಿಸ್ಮಸ್ ಮುನ್ನಾದಿನ ರಾತ್ರಿ ಚರ್ಚ್ನಲ್ಲಿ ಹಲವು ಕಾರ್ಯಕ್ರಮಗಳು ನಡೆದವು. ಗುರುವಾರ ಕ್ರೈಸ್ತ ಬಾಂಧವರು ಫಾದರ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

