ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 23
ಪ್ರಕೃತಿ ಕೇಂದ್ರಿತ ವಿಕಾಸ ಮರೆಯಾಗಿ, ವ್ಯಕ್ತಿ ಕೇಂದ್ರಿತ ವಿಕಾಸ ಹೆಚ್ಚಿದೆ. ಇದರಿಂದ ನದಿಗಳು, ನದಿಮೂಲಗಳು ಕಲುಷಿತಗೊಳ್ಳುತ್ತಿವೆ. ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ನದಿಗೂ ಅಪಾಯ ಕಾದಿದ್ದು, ಈ ಭಾಗದ ಎಲ್ಲ ಜನರು ನದಿ ಸಂರಕ್ಷಣೆಗೆ ಜನಾಂದೋಲನ ನಡೆಸಬೇಕಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ (ನವದೆಹಲಿ)ದ ಮುಖಂಡ ಬಸವರಾಜ ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಟೌನ್‌ಹಾಲ್‌ನಲ್ಲಿ ಮಂಗಳವಾರ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ (ನವದೆಹಲಿ) ಮತ್ತು ಪರ್ಯಾವರಣ ಟ್ರಸ್ಟ್ ವತಿಯಿಂದ ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಗಂಗಾವತಿ ತಾಲೂಕಿನ ಕಿಷ್ಕಿಂದೆಯಿAದ ಮಂತ್ರಾಲಯದ ವರೆಗೆ ಹಮ್ಮಿಕೊಂಡಿರುವ 3ನೇ ಹಂತದ ಪಾದಯಾತ್ರೆ ಮತ್ತು ಜಲ ಜಾಗೃತಿ-ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಜಾಗತಿಕ ಒಪ್ಪಂದಗಳಲ್ಲಿ ರೈತರ ಹಿತವನ್ನು ಕಡೆಗಣಿಸಲಾಗುತ್ತಿದೆ. ಬಂಡವಾಳ ಶಾಹಿ ವ್ಯವಸ್ಥೆ ವಿಪರೀತ ಅಸಮಾನತೆಯನ್ನು ಸೃಷ್ಟಿಮಾಡಿದೆ. ಒಂದು ಅಧ್ಯಯನದ ವರದಿಯ ಪ್ರಕಾರ ದೇಶದ 80ಕ್ಕೂ ಹೆಚ್ಚು ನದಿಗಳು ಕಲುಷಿತಗೊಂಡಿವೆ. ಈ ನದಿಗಳು ಕಲುಷಿತಗೊಳ್ಳಲು ಯಾರು ಕಾರಣ ಎನ್ನುವುದನ್ನು ನಾವು ಆತ್ಮ ವಿಶ್ಲೇಷಣೆ ಮಾಡಿಕೊಳ್ಳಬೇಕಿದೆ. ತುಂಗಭದ್ರಾ ನದಿಯ ಉಳಿವಿಗಾಗಿ ಈಗಾಗಲೇ 2 ಹಂತದ ಅಭಿಯಾನ ಮುಗಿದ್ದು, ಮೂರನೇ ಹಂತದ ಅಭಿಯಾನ ಆರಂಭಿಸಲಾಗಿದೆ” ಎಂದು ಅವರು ಹೇಳಿದರು.

‘ತುಂಗಭದ್ರಾ ನದಿ ಅಪಾಯದ ಅಂಚಿನಲ್ಲಿದೆ’
“ಮೂರು ರಾಜ್ಯಗಳಿಗೆ ನೀರೊದಗಿಸುವ ತುಂಗಭದ್ರಾ ನದಿ ಅಪಾಯದ ಅಂಚಿನಲ್ಲಿದೆ. ನದಿಯಲ್ಲಿನ ಹೂಳು ತುಂಬಿರುವುದು ಅಷ್ಟೇ ಅಲ್ಲದೇ ನೀರಲ್ಲಿ ತ್ಯಾಜ್ಯ ಸೇರುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದ ಜೀವನಾಡಿ ನದಿ ಇಂದು ಸಂಕಷ್ಟಕ್ಕೆ ಸಿಲುಕಿದೆ. ಆಂದೋಲನದ ಭಾಗವಾಗಿ ತುಂಗಭದ್ರಾ ನದಿ ವ್ಯಾಪ್ತಿಯ 300ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದ್ದು, ಹಲವು ಮಹತ್ವದ ಅಂಶಗಳು ಗೋಚರಿಸಿವೆ. ಬರುವ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಲಾಗುವುದು. ಮಂತ್ರಾಲಯದವರೆಗೆ ಪಾದಯಾತ್ರೆ ಮುಗಿದ ನಂತರ ಆಂಧ್ರಪ್ರದೇಶದಲ್ಲೂ ಅಭಿಯಾನ ನಡೆಯಲಿದೆ. ಅಲ್ಲಿನ ಸರ್ಕಾರಕ್ಕೂ ಈ ಬಗ್ಗೆ ಗಮನ ಸೆಳೆಯಲಾಗುವುದು” ಎಂದು ಬಸವರಾಜ ಪಾಟೀಲ್ ಹೇಳಿದರು. ಈ ಸಂದರ್ಭದಲ್ಲಿ ಯದ್ದಲದೊಡ್ಡಿಯ ಮಹಾಲಿಂಗಸ್ವಾಮೀಜಿ, ಮೂರುಮೈಲ್‌ಕ್ಯಾಂಪ್ ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯರು, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೇರಿದಂತೆ ಇನ್ನಿತರರು ಇದ್ದರು.

