ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು,ಅಕ್ಟೋಬರ್ 05
ಮಳೆಯಿಂದ ಹಾನಿಗೀಡಾದ ತಾಲೂಕಿನ ಉದ್ಘಾಳ ಇ.ಜೆ, ಗೋಮರ್ಸಿ, ಮಾಡಸಿರವಾರ, ಬೆಳಗುರ್ಕಿ, ಅಲಬನೂರು, ಹರೇಟನೂರು, ಬಾದರ್ಲಿ, ಒಳಬಳ್ಳಾರಿ ಗ್ರಾಮಗಳ ರೈತ ಜಮೀನುಗಳಿಗೆ ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ ಅವರು ಭಾನುವಾರ ಭೇಟಿ ನೀಡಿ ರೈತರೊಂದಿಗೆ ಕೆಲಕಾಲ ಚರ್ಚಿಸಿದರು.

ಪರಿಹಾರ ಕಾರ್ಯ ಚುರುಕುಗೊಳಿಸಲು ನಾಡಗೌಡ ಆಗ್ರಹ
“ಭಾರೀ ಮಳೆಯ ಕಾರಣ ಬೆಳೆಗಳಿಗೆ ಬಹಳಷ್ಟು ಹಾನಿಯಾಗಿದೆ. ಅಲ್ಲದೇ ಹಲವುಕಡೆ ರಸ್ತೆಗಳು ಕುಸಿತಗೊಂಡು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದಲ್ಲದೇ ಹಲವಾರು ಮನೆಗಳು ಕುಸಿದಿರುವುದರಿಂದ ಜನತೆ ದೊಡ್ಡ ಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಸುಧಾರಣೆಗೆ, ಬಿದ್ದ ಮನೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾ ಮತ್ತು ತಾಲೂಕು ಆಡಳಿತ ಪರಿಹಾರ ಕಾರ್ಯವನ್ನು ಚುರುಕುಗೊಳಿಸಬೇಕು” ಎಂದು ವೆಂಕಟರಾವ್ ನಾಡಗೌಡ ಅವರು ಆಗ್ರಹಿಸಿದ್ದಾರೆ.

ಹಕ್ಕೊತ್ತಾಯ: ಹಾನಿಗೊಳಗಾದ ಬೆಳೆಗಳಿಗೆ ತಕ್ಷಣ ಪರಿಹಾರ ಘೋಷಿಸುವುದು, ಕುಸಿದ ಮನೆಗಳಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳ ವ್ಯವಸ್ಥೆ ಮಾಡುವುದು, ರಸ್ತೆ ಸುಧಾರಣೆಗೆ ತುರ್ತು ಅನುದಾನ ಬಿಡುಗಡೆ ಮಾಡುವುದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ತಾತ್ಕಾಲಿಕ ಪುನರ್ ನಿರ್ಮಾಣ ಕಾರ್ಯ ಆರಂಭಿಸುವಂತೆ ಸರ್ಕಾರಕ್ಕೆ ನಾಡಗೌಡ ಅವರು ಒತ್ತಾಯಿಸಿದ್ದಾರೆ. ಈ ವೇಳೆ ನಗರಸಭೆ ಸದ್ಯಸರು, ಜೆಡಿಎಸ್ ಪಕ್ಷದ ಮುಖಂಡರು ಗ್ರಾಮದ ರೈತರು ಇದ್ದರು.
