ಮಸ್ಕಿ: ಅತಿವೃಷ್ಟಿಗೆ ತೊಗರಿ, ಹತ್ತಿ ಬೆಳೆಗಾರರು ತತ್ತರ !!

Spread the love

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್‌ 3

ಅತಿವೃಷ್ಟಿಯಿಂದಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದ ಗ್ರಾಮಗಳ ತೊಗರಿ, ಹತ್ತಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಗುಂಡಾ, ಸಂಕನಾಳ, ರತ್ನಾಪುರ, ರತ್ನಾಪುರಹಟ್ಟಿ, ಬೊಮ್ಮನಾಳ, ಮಾಂಪುರ, ವಿರುಪಾಪುರ, ಗಂಟೇರಹಟ್ಟಿ, ಮಂಗಮ್ಮರ ಹಟ್ಟಿ, ಹೊಗರನಾಳ, ಗುಡಿಹಾಳ, ಹಿರೇಬೇರಿಗಿ, ಚಿಕ್ಕಬೇರಿಗಿ ಹಾಗೂ ಭೋಗಾಪುರ ಗ್ರಾಮಗಳ ಸೀಮಾ ವ್ಯಾಪ್ತಿಯಲ್ಲಿ ಬೆಳೆದ ತೊಗರಿ ಬೆಳೆ ಮಳೆಯಿಂದ ಬಹಳಷ್ಟು ಹಾನಿಗೀಡಾಗಿದ್ದು, ರೈತರು ದಿಕ್ಕು ತೋಚದಂತಾಗಿದ್ದಾರೆ.
ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ನಾಮ್‌ಕೇವಾಸ್ತೆಗೆ ಕೆಲ ಅಧಿಕಾರಿಗಳು ಬಂದು ಹೋದದ್ದು ಬಿಟ್ಟರೆ, ಕಂದಾಯ, ಕೃಷಿ ಇಲಾಖೆಯಿಂದ ಪಾರದರ್ಶಕವಾಗಿ ಬೆಳೆನಷ್ಟ ಜಂಟಿ ಸಮೀಕ್ಷೆ ನಡೆದಿಲ್ಲ. ಶಾಸಕರಾದಿಯಾಗಿ ಚುನಾಯಿತ ಜನಪ್ರತಿನಿಧಿಗಳು ಇತ್ತ ಸುಳಿದಿಲ್ಲ. ಈಗಾಗಲೇ ಶೇ.10ರಷ್ಟು ನೆಟೇ ರೋಗದಿಂದ ಬೆಳೆ ಹಾನಿಗೀಡಾಗಿದೆ, ತಗ್ಗು ಪ್ರದೇಶದಲ್ಲಿ ನೀರು ನಿಂತು ಹಲವು ಕಡೆ ಕೊಳೆಯುತ್ತಿದೆ. ಆಗಾಗ ಸುರಿಯುತ್ತಿರುವ ಮಳೆಗೆ ತೊಗರಿ ಬೆಳೆಯ ಮೊಗ್ಗುಗಳು ಉದುರುತ್ತಿವೆ. ಹಾಗಾಗಿ ಈ ಬಾರಿ ತೊಗರಿ ಬೆಳೆ ಕೈಕೊಟ್ಟಂತೆಯೇ ಸರಿ ಎಂದು ಈ ಗ್ರಾಮಗಳ ರೈತರು ಆತಂಕದಿಂದ ಹೇಳುತ್ತಾರೆ.

Namma Sindhanuru Click For Breaking & Local News

ಕರ್ನಾಟಕ ರೈತ ಸಂಘದ ಮುಖಂಡರ ನಿಯೋಗ ಭೇಟಿ
ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಕರ್ನಾಟಕ ರೈತ ಸಂಘದ ಸಿಂಧನೂರು ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಭೇರಿಗಿ, ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಅವರು ಮಳೆಯಿಂದ ಹಾನಿಗೀಡಾದ ಗ್ರಾಮಗಳ ಜಮೀನುಗಳಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅತಿವೃಷ್ಟಿ ಉಂಟಾಗಿ ತಮಗಾದ ನಷ್ಟದ ಕುರಿತು ಅಳಲನ್ನು ತೋಡಿಕೊಂಡರು.

Namma Sindhanuru Click For Breaking & Local News

ಶೇ.80ರಷ್ಟು ಬೆಳೆ ನಷ್ಟ : ಡಿ.ಎಚ್.ಪೂಜಾರ್
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಭಾರಿ ವಿಪರೀತ ಮಳೆ ಸುರಿದು ಅತೀವೃಷ್ಟಿ ಉಂಟಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹತ್ತಿ, ತೊಗರಿ, ಜೋಳ, ಮೆಣಸಿನಕಾಯಿ, ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ಸೂರ್ಯಕಾಂತಿ, ಅಲಸಂದಿ, ಹೆಸರು ಸೇರಿದಂತೆ ಹಲವು ಬೆಳೆಗಳು ಶೇ.80ರಷ್ಟು ನಷ್ಟಗೊಂಡಿವೆ. ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ರೈತರಿಗೆ ಬೆಳೆನಷ್ಟ ಪರಿಹಾರವನ್ನು ತುಂಬಿಕೊಡಬೇಕು. ಸಿಂಧನೂರು ತಾಲೂಕು ಅಧಿಕಾರಿಗಳು ದಸರಾ ದರ್ಬಾರ್ ಕಾರ್ಯಕ್ರಮದ ಜವಾಬ್ದಾರಿಯನ್ನು ನಗರದ ಜನರಿಗೆ ಮತ್ತು ಯುವಜನರಿಗೆ ವಹಿಸಿ, ಬೆಳೆಹಾನಿ, ಆಸ್ತಿಪಾಸ್ತಿ ಹಾನಿಯಿಂದ ಸಂಕಷ್ಟದಲ್ಲಿರುವವರ ನೆರವಿಗೆ ಬರಬೇಕು ಎಂದು ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಆಗ್ರಹಿಸಿದ್ದಾರೆ.
“ಮಳಿಗೆ ಹತ್ತಿ ನೆಲಕ್ಕ ಬಿದ್ದದ್ದನ್ನು ನೋಡಿದ್ರ ಹೊಟ್ಟಿ ಚರ‍್ರಕ್ಕಂತೈತಿ, ಕಣ್ಣೀರು ಕಪಾಳಕ್ಕ ರ‍್ತಾವ”
“ತ್ರಾಸಪಟಗಂಡು ಸಾಲ-ಸೋಲ ಮಾಡಿ ಹತ್ತಿ ಬೆಳಿದಿದ್ವರ‍್ರಿ. ಒಂದೇ ಸಮನೇ ದಿನಾ ಮಳಿ ಹೊಡಿತೈತಿ. ಹಿಂಗಾಗಿ ಹೊಲ್ದಾಗಿನ ಹತ್ತೆಲ್ಲಾ ನೆಲಕ್ಕ ಬಿದ್ದೈತ್ರಿ. ಕಾಯಿ ಕೊಳತು ಹೋಗಾಕತ್ತ್ಯಾವ ಈ ವರ್ಷ ಹೊಟ್ಟಿ ತಿಪ್ಲ ಭಾಳ ಕಷ್ಟ ಐತಿ ನೋಡ್ರಿ. ಹಿಂಗಾ ಮಳಿ ಮುಂದುವರ್ತಿ ಅಂದ್ರ, ಬೆಳಿ ಎಲ್ಲಾ ನೆಲದ ಪಾಲಾಗತ್ತ ನೋಡ್ರಿ” ಎಂದು ಗಂಟೇರಹಟ್ಟಿ ಗ್ರಾಮದ ರೈತ ಮಹಿಳೆಯೊಬ್ಬರು ನೊಂದು ನುಡಿಯುತ್ತಾರೆ.


Spread the love

Leave a Reply

Your email address will not be published. Required fields are marked *