ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 27
ಸಿಂಧನೂರು ತಾಲೂಕು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು ಕೂಡಲೇ ಕಾರ್ಯಾನುಷ್ಠಾನಗೊಳಿಸುವ ಪ್ರಮುಖ ಬೇಡಿಕೆ ಸೇರಿದಂತೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ವೈದ್ಯರನ್ನು ನೇಮಿಸಬೇಕು ಹಾಗೂ ಮಸ್ಕಿ ತಾಲೂಕಿಗೆ ಕೂಡಲೇ ತಾಲೂಕು ಸಾರ್ವಜನಿಕ ಆಸ್ಪತ್ರೆ ಮಂಜೂರು ಮಾಡಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶನಿವಾರ ಮನವಿಪತ್ರ ಸಲ್ಲಿಸಲಾಯಿತು.
ಜನರು ರೋಗದಿಂದ ಬಳಲುತ್ತಿದ್ದರೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ : ಮಂಜುನಾಥ ಗಾಣಗೇರ ಆರೋಪ
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣೇರ, “ಸಿಂಧನೂರು ತಾಲೂಕು ರಾಯಚೂರು ಜಿಲ್ಲೆಯಲ್ಲಿ ಅತ್ಯಂತ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ರಾಯಚೂರು ಜಿಲ್ಲಾ ಕೇಂದ್ರಕ್ಕೆ ಸರಿಸಾಟಿಯಾಗಿ ಬೆಳೆಯುತ್ತಿದೆ. ಆದರೆ ಜನಸಂಖ್ಯೆಗೆ ತಕ್ಕಂತೆ ಇಲ್ಲಿನ ಜನರಿಗೆ ಸರ್ಕಾರದಿಂದ ಆರೋಗ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮಕ್ಕಳಲ್ಲಿ ವೈರಲ್ ಫಿವರ್ ಕಂಡುಬಂದು ಖಾಸಗಿ ಆಸ್ಪತ್ರೆಗಳು ತುಂಬಿ ತುಳುಕಿದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯರು ಸಿಬ್ಬಂದಿ ಇಲ್ಲದೆ ಬಡವರು ಗೋಳಾಡಿದರು. ಕೆಲ ಖಾಸಗಿ ಆಸ್ಪತ್ರೆಯವರು ಒಳ ಮತ್ತು ಒರರೋಗಿಗಳಿಗೆ ಚಿಕಿತ್ಸೆ ನೀಡಲು ವಿಪರೀತ ಒತ್ತಡ ಎದುರಿಸಿ ಕೈಚೆಲ್ಲಿದರು. ಜನರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ಪರಿತಪಿಸುವಂತಾಯಿತು. ಒಂದು ರೀತಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಯಿತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ: ಅಯ್ಯಪ್ಪ ಮೇಟಿ ಅಸಮಾಧಾನ
ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ ಮಾತನಾಡಿ, “ಸಿಂಧನೂರು ತಾಲೂಕು ಮಕ್ಕಳ ರೋಗಗಳ ಹಬ್ ಆಗಿದ್ದು, ಇಲ್ಲಿ 14 ಮಕ್ಕಳ ಆಸ್ಪತ್ರೆಗಳು ಇವೆ ಎಂದರೆ ಅಚ್ಚರಿಯಾಗಬಹುದು. ಇಲ್ಲಿಗೆ ರಾಯಚೂರು, ಬಳ್ಳಾರಿ, ಯಾದಗಿರಿ, ಗದಗ, ಕೊಪ್ಪಳ, ವಿಜಯನಗರ ಸೇರಿದಂತೆ ಇನ್ನಿತರೆ ಪ್ರದೇಶದ ಬಡ ಜನರು ಕೆಲ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಅದರಲ್ಲೂ ಹೈದ್ರಾಬಾದ್ ಕರ್ನಾಟಕ ಭಾಗದ ಹಿಂದುಳಿದ ಜನರೇ ಜಾಸ್ತಿ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ಇಲ್ಲಿನ ಜನರಿಗೆ ಆರೋಗ್ಯ ಜಾಗೃತಿ ಇಲ್ಲ, ಜಾಗೃತಿ ನೀಡಬೇಕಾದ ಮತ್ತು ಸೂಕ್ತ ಚಿಕಿತ್ಸೆ ಸೌಲಭ್ಯ ಒದಗಿಸಬೇಕಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಂಪೂರ್ಣ ಕೈಚೆಲ್ಲಿದೆ” ಎಂದು ಕಿಡಿಕಾರಿದರು.

ಮಸ್ಕಿಗೆ ತಾಲೂಕು ಆಸ್ಪತ್ರೆ ಮಂಜೂರು ಮಾಡಿ: ಬೀರಪ್ಪ ಹಾಲಾಪುರ ಒತ್ತಾಯ
ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ಬೀರಪ್ಪ ಹಾಲಾಪುರ ಮಾತನಾಡಿ “ಮಸ್ಕಿ ತಾಲೂಕು ಕೇಂದ್ರವಾಗಿದ್ದರೂ ಇನ್ನೂವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೇ ಉಳಿದಿದೆ. ಈ ತಾಲೂಕಿನ ಜನರು ಆರೋಗ್ಯ ಸೇವೆಗಾಗಿ ಪರದಾಡುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು, ಜಿಲ್ಲಾಡಳಿತ ಇಲ್ಲಿಯವರೆಗೂ ಏನೊಂದು ಕ್ರಮ ಕೈಗೊಳ್ಳದೇ ಕಾಲಹರಣ ಮಾಡುತ್ತಿದೆ. ಇನ್ನೂ ತಾವು ಕೂಡ ಮಾನ್ವಿಯಲ್ಲಿ ಕಳೆದ ಆರೇಳು ತಿಂಗಳ ಹಿಂದೆ ಮಸ್ಕಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದಾಗಿ ಹೇಳಿದ್ದಿರಿ. ಆ ಮಾತು ಕೂಡ ಹುಸಿಯಾಗಿದೆ. ಹಾಗಾದರೆ ಜನಸಾಮಾನ್ಯರು ಯಾರನ್ನು ನಂಬಬೇಕು. ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗವು ಅದರಲ್ಲೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಒಂದು ರೀತಿಯಲ್ಲಿ ರೋಗಗಳ ಗೂಡಾಗಿದ್ದು ಈ ಕುರಿತು ರಾಜ್ಯಮಟ್ಟದ ತಂಡವನ್ನು ರಚಿಸಿ ವಿಶೇಷವಾಗಿ ಮಕ್ಕಳು, ಮಧ್ಯವಯಸ್ಕರು, ಮಹಿಳೆಯರು ಹಾಗೂ ವಯೋವೃದ್ಧರಾದಿಯಾಗಿ ಎಲ್ಲ ಮಾನದಂಡಗಳನ್ನು ಅನುಸರಿಸಿ ಒಂದು ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಆ ಮೂಲಕ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು” ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ರುದ್ರಗೌಡ, ರಾಘು ಆಲೂಕರ್, ಚಂದ್ರಶೇಖರ್ ಬಿಎಸ್ಆರ್, ಯಲ್ಲಪ್ಪ ಕೋಣದ್, ಪ್ರಶಾಂತ್ ಕುಮಾರ್, ಅಶೋಕ್, ರಮೇಶ್ ಗೊರೆಬಾಳ್ ಇದ್ದರು.
ಹಕ್ಕೊತ್ತಾಯಗಳು:
ಸಿಂಧನೂರು ತಾಲೂಕು ಕೇಂದ್ರಕ್ಕೆ ಮಂಜೂರಾಗಿರುವ ಜಿಲ್ಲಾ ಆಸ್ಪತ್ರೆಯನ್ನು ಕೂಡಲೇ ಕಾರ್ಯಾನುಷ್ಠಾನಗೊಳಿಸಬೇಕು. ಈ ಆಸ್ಪತ್ರೆಗೆ ಜಾಗದ ಕೊರತೆಯಾದರೆ ಜಿ.ಪಂ. ಎಂಜಿನಿಯ ರಿಂಗ್ ಇಲಾಖೆಯನ್ನು ಬೇರೆ ಕಡೆಗೆ ವ್ಯವಸ್ಥೆ ಮಾಡಿ ಆ ಜಾಗವನ್ನು ಬಳಸಿಕೊಳ್ಳಬೇಕು, ಮಸ್ಕಿ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೇ ಇದ್ದು, ಈ ಕೂಡಲೇ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು, ರಾಯಚೂರು ಜಿಲ್ಲೆಯಲ್ಲಿ ಇತ್ತೀಚಿಗೆ ಅದರಲ್ಲೂ ಸಿಂಧನೂರು, ಮಸ್ಕಿ, ಮಾನ್ವಿ, ಲಿಂಗಸುಗೂರು, ದೇವದುರ್ಗ ತಾಲೂಕು ವ್ಯಾಪ್ತಿಯಲ್ಲಿ ಮಹಿಳೆಯರ, ಮಕ್ಕಳ ರೋಗಗಳು ಹೆಚ್ಚುತ್ತಿದ್ದು, ಈ ಕುರಿತು ಆರೋಗ್ಯ ಇಲಾಖೆ, ಇದರ ಕಾರಣವನ್ನು ಪತ್ತೆ ಹಚ್ಚಿ ಪರಿಹಾರೋಪಾಯಗಳನ್ನು ಕಾರ್ಯಾನುಷ್ಠಾನುಗೊಳಿಸಬೇಕು, ಕಳೆದ ಸೆಪ್ಟೆಂಬರ್ನಲ್ಲಿ ಸಿಂಧನೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ನಾಲ್ವರು ಮಹಿಳೆಯರು ಮೃತಪಟ್ಟಿದ್ದು ಅವರ ಕುಟುಂಬದವರಿಗೆ 50 ಲಕ್ಷ ಪರಿಹಾರ ನೀಡಬೇಕು ಹಾಗೂ ಅನಾಥರಾದ ನಾಲ್ಕು ಮಕ್ಕಳ ಹೆಸರಲ್ಲಿ 10 ಲಕ್ಷ ಬ್ಯಾಂಕ್ನಲ್ಲಿ ಠೇವಣಿ ಇಡಬೇಕು. ಅವರ ಎಲ್ಲ ಶೈಕ್ಷಣಿಕ ಖರ್ಚು-ವೆಚ್ಚ ಸರ್ಕಾರ ಭರಿಸಬೇಕು, ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದ ಅವಧಿಯಲ್ಲಿ ಕೆಲಸ ಮಾಡದೇ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಕೆಲ ವೈದ್ಯರು, ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು, ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಹಲವು ವಿಭಾಗಗಳಲ್ಲಿ ಸಾಮಗ್ರಿ, ಪರಿಕರ ಹಾಗೂ ಅಗತ್ಯ ಆಧುನಿಕ ಯಂತ್ರೋಪಕರಣಗಳ ಕೊರತೆಯಿದ್ದು ಕೂಡಲೇ ಆ ಎಲ್ಲಾ ಸಾಮಗ್ರಿಗಳನ್ನು ಒದಗಿಸಬೇಕು.
