ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಗಸ್ಟ್ 03, 2026
“ಕಳೆದ 15 ವರ್ಷಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ 40 ಟಿಎಂಸಿಗೂ ಕಡಿಮೆ ನೀರು ಸಂಗ್ರಹ ಇದ್ದ ಸಂದರ್ಭದಲ್ಲಿ ನಾಲೆಗಳಿಗೆ ನೀರು ಹರಿಬಿಟ್ಟ ನಿದರ್ಶನಗಳಿವೆ. ಹಾಗಾಗಿ ಎಡದಂಡೆ ನಾಲೆಗೆ ರಾಜ್ಯ ಸರ್ಕಾರ ಕೂಡಲೇ ನೀರು ಹರಿಸಬೇಕು. ಇಲ್ಲದೇ ಹೋದರೆ ರೈತರೊಂದಿಗೆ ಸೇರಿ ಜೆಡಿಎಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ” ಅವರು ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹಾಲಿ ಶಾಸಕ ಶಿವರಾಜ್ ತಂಗಡಗಿ ಅವರು ಜಲಾಶಯದಲ್ಲಿ 75 ಟಿಎಂಸಿ ನೀರು ಸಂಗ್ರಹವಾದ ಮೇಲೆ ಕಾಲುವೆಗೆ ನೀರು ಹರಿಸುವುದಾಗಿ ಹೇಳುತ್ತಿದ್ದಾರೆ. ಇದು ಸಮಂಜಸವಾದ ಉತ್ತರವಲ್ಲ. ಈಗಾಗಲೇ ಡ್ಯಾಂನಲ್ಲಿ ಪ್ರಸ್ತುತ 44 ಟಿಎಂಸಿ ನೀರು ಇದ್ದರೂ ನಾಲೆಗೆ ಹರಿಸದಿರುವುದು ಸರ್ಕಾರದ ಬೇಜವಾಬ್ದಾರಿಗೆ ಸಾಕ್ಷಿ” ಎಂದು ಅವರು ಆಪಾದಿಸಿದರು.
“ಕಳೆದ ಸಾರಿಯಂತೆ ಈ ಬಾರಿ ಗೊಂದಲ ಮಾಡಬೇಡಿ”
“ಕಳೆದ ವರ್ಷ ಡ್ಯಾಂನಲ್ಲಿ ನೀರಿದ್ದರೂ ಗೇಟ್ ಅಳವಡಿಸುವ ನೆಪದಲ್ಲಿ ವಿನಾಃಕಾರಣ ಗೊಂದಲ ಉಂಟು ಮಾಡಿ ಒಂದೇ ಬೆಳೆಗೆ ನೀರು ಹರಿಸಲಾಯಿತು. ಮೇಲ್ಭಾಗದ ಅಣೆಕಟ್ಟೆಗಳಿಂದ ಪ್ರಸ್ತುತ 90 ಸಾವಿರದಿಂದ 1 ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿದು ಬರುತ್ತಿದ್ದು, ಇನ್ನೂ ಮಲೆನಾಡ ಭಾಗದಲ್ಲಿ 4 ದಿನ ಮಳೆ ಇದೆ. ಜೊತೆಗೆ ನದಿಪಾತ್ರದ ಹಾವೇರಿ, ದಾವಣೆಗೆರ ಜಿಲ್ಲೆಯ ಹಲವು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹಳಷ್ಟು ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬರಲಿದೆ. ಹೀಗಾಗಿ ನಾಲೆಗೆ ಸದ್ಯ ನೀರು ಹರಿಸುವುದು ಸೂಕ್ತ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ” ಎಂದು ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.
“ನೀರು ಕಡಿಮೆ ಸಂಗ್ರಹ ಇದ್ದ ಸಂದರ್ಭದಲ್ಲಿಯೂ ಕಾಲುವೆಗೆ ನೀರು”
“2008ರಲ್ಲಿ 36.836 ಟಿಎಂಸಿ ನೀರು ಸಂಗ್ರಹ ಇದ್ದಾಗ 05-07-2008 ರಂದು ನಾಲೆಗೆ ನೀರು ಹರಿಸಲಾಗಿತ್ತು. ಅದರಂತೆ 2010ರಲ್ಲಿ 38.549 ಟಿಎಂಸಿ ನೀರು ಸಂಗ್ರಹ ಇದ್ದಾಗ 28-07-2010 ರಂದು, 2012ರಲ್ಲಿ 41.102 ಟಿಎಂಸಿ ನೀರು ಸಂಗ್ರಹ ಇದ್ದಾಗ 06-08-2012 ರಂದು, 2016ರಲ್ಲಿ 40.787 ಟಿಎಂಸಿ ನೀರು ಸಂಗ್ರಹ ಇದ್ದಾಗ 27-07-2016 ರಂದು, 2020ರಲ್ಲಿ 39.316 ಟಿಎಂಸಿ ನೀರು ಸಂಗ್ರಹ ಇದ್ದಾಗ 27-07-2020 ರಂದು ಎಡದಂಡೆ ನಾಲೆಗೆ ನೀರು ಹರಿಸಲಾಗಿತ್ತು” ಎಂದು ನಾಡಗೌಡ ಅವರು ವಿವರಿಸಿದರು.
“ಒಂದು ಬೆಳೆಗೆ ಸಾಕಾಗುವಷ್ಟು ಡ್ಯಾಂನಲ್ಲಿ ನೀರಿದೆ”
“ಒಂದು ಬೆಳೆಗೆ ಅಂದಾಜು 35 ಟಿಎಂಸಿ ನೀರು ಅವಶ್ಯವಿದೆ. ತಿಂಗಳಿಗೆ 10 ರಿಂದ 11 ಟಿಎಂಸಿ ನೀರು ಕಾಲುವೆಗೆ ಹರಿಸಿದರೆ ಸಾಕಾಗುತ್ತೆ. ಆದರೆ ಸರ್ಕಾರ ವಿನಾಃಕಾರಣ ಗೊಂದಲ ಮಾಡುತ್ತಿದೆ. ಈಗಾಗಲೇ ರೈತರು ಸಸಿಮಡಿ ಹಾಕಿದ್ದು, ಸದ್ಯ ಕಾಲುವೆಗೆ ನೀರು ಹರಿಸದಿದ್ದರೆ ಆರ್ಥಿಕ ಸಂಕಷ್ಟಕ್ಕೀಡಾಗಲಿದ್ದಾರೆ. ಒಂದು ವೇಳೆ ನೀರು ಬಿಡುವುದು ವಿಳಂಬವಾದರೆ ಟೇಲೆಂಡ್ ಭಾಗದ ರೈತರಿಗೆ ನೀರು ಸಿಗದೇ ನಷ್ಟಕ್ಕೀಡಾಗಲಿದ್ದಾರೆ. ಹಾಗಾಗಿ ತಡಮಾಡದೇ ಸರ್ಕಾರ ನೀರು ಹರಿಸಬೇಕು” ಎಂದು ಆಗ್ರಹಿಸಿದರು.
“ಇಬ್ಬರೂ ಶಾಸಕರು ಕ್ಷೇತ್ರಕ್ಕೆ ಬನ್ನಿ”
“ಕಳೆದ ಹಲವು ದಿನಗಳಿಂದ ಇಬ್ಬರೂ ಶಾಸಕರು ಡೆಲ್ಲಿ, ಬೆಂಗಳೂರು ಸುತ್ತುತ್ತಿದ್ದು, ಕ್ಷೇತ್ರದ ರೈತರು, ಜನಸಾಮಾನ್ಯರನ್ನು ಸಂಪೂರ್ಣ ಮರೆತಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ ರೈತರ ಬೆಳೆಗಳು ಹಾನಿಗೀಡಾಗಿದ್ದು, ಮೊದಲು ಆ ಪ್ರದೇಶಗಳಿಗೆ ಭೇಟಿ ನೀಡಿ, ಅಧಿಕಾರಿಗಳ ಮೂಲಕ ಸರ್ವೆ ಕಾರ್ಯ ನಡೆಸಿ, ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿಸಬೇಕು. ಕೂಡಲೇ ಸರ್ಕಾರ ಬರಗಾಲ ಘೋಷಿಸಿ ಬರ ಪರಿಹಾರ ನೀಡಬೇಕು. ಜೋಳದ ಬಾಕಿ ಹಣ 280 ಕೋಟಿ ರೂಪಾಯಿಯಲ್ಲಿ ಕೇವಲ 80 ಕೋಟಿ ಮಂಜೂರಾಗಿದ್ದು, ಇನ್ನೂ 200 ಕೋಟಿ ಬಾಕಿದೆ. ಇದಕ್ಕೆ ಆಡಳಿತ ಪಕ್ಷದ ಚುನಾಯಿತ ಪ್ರತಿನಿಧಿಗಳ ಬೇಜವಾವ್ದಾರಿಯೇ ಕಾರಣ. ಒಂದು ವರ್ಷವಾದರೂ ರೈತರ ಖಾತೆಗೆ ಹಣ ಜಮಾ ಆಗಿಲ್ಲದ ಎಂದು ನಾಚಿಗೆಗೇಡು” ಎಂದು ನಾಡಗೌಡ ದೂರಿದರು.
“ಮಂತ್ರಿ ಆದ್ರೆ ಸಂತೋಷ ! ಮೊದ್ಲು ಕಾಲುವೆಗೆ ನೀರು ಬಿಡ್ಸಿ”
“ಹಂಪನಗೌಡರು ಮಂತ್ರಿ ಆದ್ರೆ ಸಂತೋಷ, ಒಳ್ಳೆಯದ್ದು. ಆದ್ರೆ ಈ ಭಾಗದ ರೈತರು ಸಂಕಷ್ಟದಲ್ಲಿದ್ದು ಕೂಡಲೇ ಕಾಲುವೆಗೆ ನೀರು ಬಿಡ್ಸಿ. ಇಲ್ಲದೇ ಹೋದ್ರೆ ಜೆಡಿಎಸ್ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ” ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಅಶೋಕಗೌಡ ಗದ್ರಟಗಿ, ಸತ್ಯನಾರಾಯಣ, ಧರ್ಮನಗೌಡ ಮಲ್ಕಾಪುರ, ಎಸ್.ಬಿ.ಟೇಲರ್, ವೆಂಕೋಬಣ್ಣ ಕಲ್ಲೂರು, ಸೈಯ್ಯದ್ ಆಸೀಫ್ ಇನ್ನಿತರರಿದ್ದರು.
