ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 22, 2026
ನೀಟ್ ಅಕ್ರಮ ಖಂಡಿಸಿ, ನೈತಿಕ ಹೊಣೆ ಹೊತ್ತು ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೊಸದಿಲ್ಲಿಯ ಜಂತರ್-ಮAತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ, ಯುವಜನರು ಹಾಗೂ ಪ್ರತಿಭಟನಾಕಾರರ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ಪೊಲೀಸರ ಮೂಲಕ ಅಮಾನವೀಯ ದಾಳಿ ನಡೆಸಿರುವುದು ದೇಶದ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿದೆ ಎಂದು ಸಿಪಿಐ ಮುಖಂಡ ಹಾಗೂ ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಭಾಷುಮಿಯಾ ಅವರು ಖಂಡಿಸಿದ್ದಾರೆ.
ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಅವರು, “ನೀಟ್ ಪರೀಕ್ಷೆಯಲ್ಲಿ ಅಕ್ರಮದಿಂದಾಗಿ ದೇಶಾದ್ಯಂತ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಶರಣರಾಗಿದ್ದಾರೆ. 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರು ಪರೀಕ್ಷೆಯಿಂದ ತೊಂದರೆಗೀಡಾಗಿದ್ದಾರೆ. ಇದನ್ನು ಖಂಡಿಸಿ ಹೋರಾಟ ನಡೆಸಿದ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿ, ರಸ್ತೆಯಲ್ಲಿ ರಕ್ತಹರಿಸಿರುವುದು ಕೇಂದ್ರ ಸರ್ಕಾರದ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಭವಿಷ್ಯದ ನಾಯಕರಾದ ವಿದ್ಯಾರ್ಥಿಗಳ ಮೇಲೆ ಪೈಶಾಚಿಕ ದೌರ್ಜನ್ಯ ಎಸಗುವ ಮೂಲಕ ಬಿಜೆಪಿ ಸರ್ಕಾರ ದೇಶದ ಕಾನೂನುಗಳನ್ನು ಗಾಳಿಗೆ ತೂರಿದೆ. ದೆಹಲಿ ಪೊಲೀಸರೊಂದಿಗೆ ಕೆಲ ಬಾಡಿಗೆ ಗೂಂಡಾಗಳು ಯುವ ವಿದ್ಯಾರ್ಥಿನಿಯರ ಮೇಲೆ ಲಾಠಿಗಳ ಮೂಲಕ ಮನಸೋಇಚ್ಛೆ ದಾಳಿ ಮಾಡಿರುವುದು ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಬಿಜೆಪಿ ವಾಮಮಾರ್ಗ ಅನುಸರಿಸಿರುವುದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.
ನೀಟ್ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪಾಲಕರು ಸಮಸ್ಯೆ ಅನುಭವಿಸಿದರೂ ಆ ಬಗ್ಗೆ ತುಟಿಪಿಟಕ್ ಎನ್ನದ ಪ್ರಧಾನಿ ಮೋದಿಯವರ ಮೌನವನ್ನು ಪ್ರತಿಭಟಿಸಿ, ಪ್ರಧಾನಿಯವರ ಮನೆಯ ಮುಂದೆ ಧರಣಿ ನಡೆಸಿದ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿರುವುದನ್ನು ಗಮನಿಸಿದರೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಂವಿಧಾನ, ಕಾಯ್ದೆ-ಕಾನೂನು ಹಾಗೂ ಜನರ ಭಯವಿಲ್ಲ. ಪ್ರಶ್ನೆ ಮಾಡುವವರ ಮೇಲೆ ದರ್ಪ, ದೌರ್ಜನ್ಯ ನಡೆಸುವ ಮೂಲಕ ಪ್ರಜಾತಂತ್ರದ ಮೌಲ್ಯಗಳನ್ನೇ ಪುಡಿಗಟ್ಟುತ್ತಿದೆ. ಇಡೀ ದೇಶವನ್ನು ಖಾಸಗೀಕರಣ ಮಾಡಲು ಸರ್ಕಾರ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನೇ ಬಲಿಕೊಟ್ಟಿದೆ” ಎಂದು ಅವರು ಆಪಾದಿಸಿದ್ದಾರೆ.
ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆಯರ ವಿರೋಧಿಯಾಗಿರುವ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಅದರ ನೀತಿ ನಿಯಮಗಳನ್ನು ಎಡ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು, ಪ್ರಜಾತಂತ್ರವಾದಿಗಳು, ಜನರು ಒಗ್ಗೂಡಿ ಸೋಲಿಸುವ ಮೂಲಕ ದೇಶದಲ್ಲಿ ಪ್ರಜಾತಂತ್ರದ ಮೌಲ್ಯ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಭಾಷುಮಿಯಾ ಕರೆ ನೀಡಿದ್ದಾರೆ.
