ಸಿಂಧನೂರು: ಸೋನಮ್ ವಾಂಗ್ಚುಕ್ ನಿರಶನ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 17, 2026

ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಪರಿಸರ, ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಹಾಗೂ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ತಹಸಿಲ್ ಕಚೇರಿಯ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿ, ಶಿರಸ್ತೆದಾರ್ ಅಂಬಾದಾಸ್ ಅವರ ಮೂಲಕ ವಿವಿಧ ಹಕ್ಕೊತ್ತಾಯಗಳ ಮನವಿಪತ್ರವನ್ನು ರಾಷ್ಟçಪತಿಗಳಿಗೆ ಶುಕ್ರವಾರ ರವಾನಿಸಲಾಯಿತು.
ಕಳೆದ 19 ದಿನಗಳಿಂದ ಸೋನಮ್ ವಾಂಗ್‌ಚುಕ್ ಮತ್ತು ಉಪವಾಸ ನಿರತ ಇತರ ಪ್ರತಿಭಟನಾಕಾರರ ಆರೋಗ್ಯ ದಿನದಿಂದ ದಿನಕ್ಕೆ ಗಣನೀಯವಾಗಿ ಹದಗೆಡುತ್ತಿದ್ದರೂ ಕೇಂದ್ರ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸತ್ಯಾಗ್ರಹಿಗಳ ಬೇಡಿಕೆಗಳನ್ನು ಆಲಿಸದೇ ಇರುವುದು ಗಮನಿಸಿದರೆ ಫ್ಯಾಸಿಸ್ಟ್ ಸರ್ಕಾರದ ಜೀವ ವಿರೋಧಿ ನೀತಿಗೆ ಸ್ಪಷ್ಟ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸುವ ನಾಗರಿಕರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ನೀಟ್‌ ಅಕ್ರಮ ವ್ಯವಸ್ಥಿತ ಹಗರಣ : ಚಂದ್ರಶೇಖರ ಗೊರಬಾಳ ಆರೋಪ
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ನೀಟ್ ಪ್ರಶ್ನೆ ಪತ್ರಿಕೆ ಹಗರಣಕ್ಕೆ ಸಂಬAಧಿಸಿದAತೆ, ಸಿಬಿಐ ನಡೆಸಿದ ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸುವ ಮಂಡಳಿಯ ಮಹಾರಾಷ್ಟç ಮೂಲದ ಸದಸ್ಯನೇ ಪ್ರಶ್ನೆ ಪತ್ರಿಕೆಯನ್ನು ಖಾಸಗಿ ಕೋಚಿಂಗ್ ಸೆಂಟರ್‌ವೊಂದಕ್ಕೆ ಮಾರಾಟ ಮಾಡಿರುವುದು ಬಯಲಾಗಿದೆ. ಇಂತಹ ಹಲವು ಪ್ರಕರಣಗಳು ನಡೆದಿವೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲ ಇದೊಂದು ಹಗರಣ ಎನ್ನುವುದು ಸಾರ್ವಜನಿಕ ವಲಯದಲ್ಲಿ ಜಗಜ್ಜಾಹೀರಾಗಿದೆ. ಪ್ರಾಮಾಣಿಕವಾಗಿ ಅಭ್ಯಾಸ ಮಾಡಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಇದರಿಂದ ವಂಚನೆಗೊಳಗಾಗಿದ್ದಾರೆ. ಕೇಂದ್ರ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಹೊಣೆಹೊತ್ತ ಸಚಿವರು ಈ ಬಗ್ಗೆ ಕಿಂಚಿತ್ತೂ ಮಾತನಾಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

“ಕೇಂದ್ರದ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ” : ಬಸವಂತರಾಯಗೌಡ ಕಲ್ಲೂರು ಆಕ್ರೋಶ
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡ ಬಸವಂತರಾಯಗೌಡ ಮಾತನಾಡಿ, “ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ದೇಶವನ್ನು ಅಧೋಗತಿಗೆ ದೂಡಿದೆ ಎಂದು ಆರೋಪಿಸಿ, ಅಣ್ಣಾ ಹಜಾರೆಯವರನ್ನು ಮುಂದಿಟ್ಟುಕೊಂಡು ದೊಡ್ಡ ಆಂದೋಲನ ಸೃಷ್ಟಿಮಾಡಿ 2013ರ ವೇಳೆ ಜನರಿಗೆ ನೂರಾರು ಹುಸಿ ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ತದನಂತರ ತಾನೂ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ. ರೈತರ ಆದಾಯವನ್ನು ದ್ವಿಗುಣ ಮಾಡುತ್ತೇನೆ ಎಂದು ಮೋದಿಯವರು ಹೇಳಿದ್ದರೂ, ಆದರೆ ವಾಸ್ತವದಲ್ಲಿ ಕೃಷಿಗೆ ಹಾಕಿದ ಬಂಡವಾಳ ವಾಪಸ್ ಬರುತ್ತಿಲ್ಲ. ಇದರಿಂದ ರೈತರು ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಈ ಬಗ್ಗೆ ಪ್ರಧಾನಿಯರು ತುಟಿಪಿಟಕ್ಕೆನ್ನುತ್ತಿಲ್ಲ” ಎಂದು ಆಪಾದಿಸಿದರು.

Namma Sindhanuru Click For Breaking & Local News

“ನೀಟ್‌ ಪರೀಕ್ಷಾ ಕ್ರಮ ಪಾರದರ್ಶಕ ತನಿಖೆಯಾಗಲಿ”: ಡಾ.ವಸೀಮ್‌ ಅಹ್ಮದ್‌ ಆಗ್ರಹ
ಎಸ್‌ಐಒ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಸೀಮ್ ಮಾತನಾಡಿ, “ನೀಟ್ ಪರೀಕ್ಷಾ ಅಕ್ರಮ 22 ಲಕ್ಷ ವಿದ್ಯಾರ್ಥಿಗಳನ್ನು ಮಾನಸಿಕ ಖಿನ್ನತೆಗೆ ದೂಡಿದೆ. ಅಲ್ಲದೇ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ನುಚ್ಚುನೂರು ಮಾಡಿದೆ. ಇದೊಂದು ಬಹುದೊಡ್ಡ ಹಗರಣವಾಗಿದ್ದು, ವಿದ್ಯಾರ್ಥಿಗಳ ಬೇಡಿಕೆಗಳನ್ನಿಟ್ಟುಕೊಂಡು ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳು ಕಳೆದ 19 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಕನಿಷ್ಠ ಸೌಜನ್ಯಕ್ಕಾದರೂ ಕೇಂದ್ರ ಸರ್ಕಾರ ಅವರ ಅಹವಾಲನ್ನು ಆಲಿಸಿಲ್ಲ. ಪುನಃ ಅವರ ಹೋರಾಟವನ್ನು ಹೇಗಾದರೂ ಮಾಡಿ ಹತ್ತಿಕ್ಕಲು ನೋಡುತ್ತಿರುವುದು ಸರಿಯಲ್ಲ” ಎಂದು ಹೇಳಿದರು.

Namma Sindhanuru Click For Breaking & Local News

“ಖಾಸಗಿ ಕೋಚಿಂಗ್‌ ಸೆಂಟರ್‌ಗಳ ಲಾಬಿ ಅಡಗಿದೆ” : ಎಸ್‌.ದೇವೇಂದ್ರಗೌಡ
ಸಮುದಾಯದ ಮುಖಂಡ ಎಸ್.ದೇವೇಂದ್ರಗೌಡ ಮಾತನಾಡಿ, “ನೀಟ್ ಪ್ರಶ್ನೆ ಪತ್ರಿಕಾ ಮಂಡಳಿಯ ಸದಸ್ಯರೇ ಅಕ್ರಮದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬಯಲಾಗಿದ್ದು, ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ಇದರ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿ ಮತ್ತು ಕೇಂದ್ರ ಸರ್ಕಾರದ ಕೆಲ ಕಾಣದ ಕೈಗಳ ಹುನ್ನಾರ ಅಡಗಿದೆ. ದೇಶದ ಶಿಕ್ಷಣ ವ್ಯವಸ್ಥೆ ಅಧೋಗತಿಗೀಡಾಗಿದ್ದು, ಸಂಪೂರ್ಣ ಖಾಸಗೀಮಯವಾಗುತ್ತಿದೆ. ಇದರ ನೈತಿಕ ಹೊಣೆ ಹೊರಬೇಕಾದ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿದೆ” ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡ ಅಮೀನ್‌ಪಾಷಾ ದಿದ್ದಿಗಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಮೂಗು, ಬಾಯಿ ಇಲ್ಲ; ಪ್ರಜ್ಞಾಶೂನ್ಯವಾಗಿದೆ. ನೀಟ್ ಅಕ್ರಮ ಖಂಡಿಸಿ, ವಿದ್ಯಾರ್ಥಿಗಳ ಸಲುವಾಗಿ ಸೋನಮ್ ವಾಂಗ್ಚುಕ್ ಹಾಗೂ ಪ್ರಜಾಸತ್ತಾತ್ಮಕ ಸಂಘಟನೆಯ ವಿದ್ಯಾರ್ಥಿಗಳು ಉಪವಾಸ ಕುಳಿತರೆ ಪ್ರಧಾನಿ ಮೋದಿಯವರು ದೇಶ ದೇಶ ಸುತ್ತುತ್ತಿದ್ದಾರೆ. ಗಾಂಧೀಜಿಯವರು ಉಪವಾಸ ಕುಳಿತರೆ ಬ್ರಿಟಿಷ್ ಅಧಿಕಾರಿಗಳೇ ಅವರು ಇರುವಲ್ಲಿಗೆ ಬಂದಿದ್ದರು. ಆದರೆ ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿನ ಸಚಿವರ, ಅಧಿಕಾರಿಗಳ ದರ್ಪ, ದೌರ್ಜನ್ಯ ನೋಡಿದರೆ, ಈ ದೇಶದ ಜನರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ಅರ್ಥವಾಗುತ್ತದೆ” ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿಯಿಂದ ಜನವಿರೋಧಿ ನೀತಿ ಜಾರಿ” : ಭಾಷುಮಿಯಾ
ಸಿಪಿಐ ಮುಖಂಡ ಭಾಷುಮಿಯಾ ಮಾತನಾಡಿ, “ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ, ದುಡಿಯುವ ಜನರ ಮೇಲೆ ಹಾಗೂ ವಿದ್ಯಾರ್ಥಿ ಯುವಜನರ ಮೇಲೆ ದಾಳಿ ನಡೆಸುತ್ತಿದೆ. ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳು ಇಡೀ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಮಾಡಿದ್ದು, ಜನರು ಅಗತ್ಯವಸ್ತುಗಳನ್ನು ಕೊಳ್ಳಲು ಪರದಾಡುತ್ತಿದ್ದಾರೆ. ಈ ಫ್ಯಾಸಿಸ್ಟ್ ಸರ್ಕಾರವನ್ನು ಬೃಹತ್ ಜನಾಂದೋಲನದ ಮೂಲಕವೇ ಹಿಮ್ಮೆಟ್ಟಿಸಲು ಸಾಧ್ಯ ಎಂದು ಹೇಳಿದರು.
ಉಪನ್ಯಾಸಕ ಶಂಕರ ಗುರಿಕಾರ, ಡಿಎಸ್‌ಎಸ್ ಮೂರ್ತಿ ಬಣದ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ, ಕೃಷ್ಣಮೂರ್ತಿ ಧುಮುತಿ, ರೈತ ಮುಖಂಡ ಬಸವರಾಜ ಗೋಡಿಹಾಳ, ಸಮ್ಮದ್ ಚೌದ್ರಿ, ಎನ್ನಾರ್ಬಿಸಿ ಹೋರಾಟಗಾರ ನಾಗರಡ್ಡೆಪ್ಪ ದೇವರಮನಿ, ಅವರು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿದರು. ಪ್ರತಿಭಟನಾ ಧರಣಿಯಲ್ಲಿ ಜಮಾಅತೆ ಇಸ್ಲಾಂ ಹಿಂದ್‌ನ ಹುಸೇನ್‌ಸಾಬ್, ವೆಂಕನಗೌಡ ಗದ್ರಟಗಿ, ಕಂಟೆಪ್ಪ, ಡಿ.ಎಚ್.ಕಂಬಳಿ, ನಾಗರಾಜ್ ಪೂಜಾರ್, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಬಸವರಾಜ ಬಾದರ್ಲಿ, ಗಂಗಮ್ಮ ಗೊರಬಾಳ, ಸರಸ್ವತಿ ಪಾಟೀಲ್, ಶಕುಂತಲಾ ಪಾಟೀಲ್, ಹನುಮೇಶ ಗುಡದೂರು, ಬಸವರಾಜ ಕೊಂಡೆ, ಬಸವರಾಜ ಹಸಮಕಲ್, ಡಾ.ಬಸವರಾಜ ನಾಯಕ, ವೀರೇಶ ಕನ್ನಾರಿ, ಕಟ್ಟಡ ಕಾರ್ಮಿಕರ ಸಂಘದ ಜಗದೀಶ್, ತುಳಸಪ್ಪ ದಡೇಸುಗೂರು, ಸಿಪಿಐ(ಎಂಎಲ್) ಲಿಬರೇಶನ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಇಮ್ತಿಯಾಜ್, ಖಾಸಿಂ ಕಾರ್ಪೆಂಟರ್, ಅಬುಲೈಸ್ ನಾಯ್ಕ, ರಾಘವೇಂದ್ರ ಉಪ್ಪಳ, ಸಜ್ಬಲಿಸಾಬ್‌, ರಾಜಶೇಖರ್‌ ಸೇರಿದಂತೆ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *