ಕಾರ್ಪೊರೇಟ್ ಕೋಮುವಾದ ಹಿಮ್ಮೆಟ್ಟಿಸಲು ಸಂಘಟಿತರಾಗಿ: ನಾಗರಾಜ ಪೂಜಾರ್‌ ಕರೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 6, 2026

ಕೇಂದ್ರದ ಆಡಳಿತಾರೂಢ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ರೈತ, ಕಾರ್ಮಿಕ ಹಾಗೂ ದುಡಿಯುವ ವರ್ಗಗಳ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಸಾರ್ವಜನಿಕ ಸಂಪತನ್ನು ಲೂಟಿ ಹೊಡೆಯುತ್ತಿದೆ. ಇದನ್ನು ಮರೆಮಾಚಲು ಧರ್ಮ, ಜಾತಿ ಹಾಗೂ ಮತ-ಪಂಥಗಳ ನಡುವೆ ಕೋಮುದ್ವೇಷ ಬಿತ್ತಿ, ಜನರನ್ನು ದಿಕ್ಕುತಪ್ಪಿಸುತ್ತಿದೆ. ದುಡಿಯುವ ಜನರು ಇದನ್ನು ಮನಗಂಡು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಕಾರ್ಪೋರೇಟ್ ಕೋಮುವಾದವನ್ನು ಹಿಮ್ಮೆಟ್ಟಿಸಬೇಕಿದೆ ಎಂದು ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಕರೆ ನೀಡಿದರು.
ನಗರದ ಎಪಿಎಂಸಿಯ ರೈತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2ನೇ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಸರ್ಕಾರಗಳು ಮಂಡಿಸುವ ಬಜೆಟ್‌ನಲ್ಲಿ ಹೆಚ್ಚು ತೆರಿಗೆಯನ್ನು ಜನರ ಮೇಲೆ ಹೇರಿ, ಬಂಡವಾಳಿಗರಿಗೆ ವಿನಾಯಿತಿ ನೀಡುತ್ತಿವೆ. ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ಜಾರಿಯಿಂದ ಜನರು ಬೀದಿಗೆ ಬೀಳುತ್ತಿದ್ದು, ದೈನಂದಿನ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲಾಗದಂತಹ ದುಸ್ಥಿತಿಗೆ ತಲುಪಿದ್ದಾರೆ. ಜನರ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಹೋರಾಟ ನಡೆಸುವ ಸಂಘಟನೆಗಳು ಹಾಗೂ ನಾಯಕರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುವ ಮೂಲಕ ಪ್ರಜಾತಂತ್ರದ ಮೌಲ್ಯಗಳನ್ನು ಧೂಳಿಪಟ ಮಾಡಿದೆ. ಹಾಗಾಗಿ ಸಂಘಟನೆಗಳು ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಒಗ್ಗೂಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿದರು. ಪಕ್ಷದ ಮುಖಂಡರಾದ ರಾಘವೇಂದ್ರ ಉಪ್ಪಳ, ಆರ್.ಎಚ್.ಕಲಮಂಗಿ, ಪಂಪಾಪತಿ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಹಟ್ಟಿ, ಕಂಠೆಪ್ಪ ರೈತನಗರಕ್ಯಾಂಪ್, ತುಳಸಪ್ಪ ದಡೇಸುಗೂರು, ಮಹಾದೇವಮ್ಮ, ಮಹಾಂಕಾಳೆಮ್ಮ, ರೇಣುಕಮ್ಮ ಇನ್ನಿತರರಿದ್ದರು.
ತಾಲ್ಲೂಕು ಕಾರ್ಯದರ್ಶಿಯಾಗಿ ಬಸವರಾಜ ಬೆಳಗುರ್ಕಿ ಪುನರಾಯ್ಕೆ
2ನೇ ತಾಲ್ಲೂಕು ಸಮ್ಮೇಳದ ವೇಳೆ ತಾಲ್ಲೂಕು ಸಮಿತಿಯನ್ನು ಆಯ್ಕೆ ಮಾಡಲಾಯಿತು. ಎರಡನೇ ಅವಧಿಗೆ ಬಸವರಾಜ ಬೆಳಗುರ್ಕಿ ಅವರನ್ನು ತಾಲ್ಲೂಕು ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಯಿತು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *