ಸ್ಪೆಷಲ್ ಸುದ್ದಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಜುಲೈ 1, 2026
ಈ ದಿನಗಳ ಹೊತ್ತಿಗಾಗಲೇ ಜಲರಾಶಿಯಿಂದ ತುಂಬಿ ತುಳುಕಬೇಕಿದ್ದ ತುಂಗಭದ್ರೆಯ ಒಡಲು ಬರಿದಾಗಿದೆ.. ನದಿಯೊಳಗಿದ್ದು ನೀರಿಲ್ಲದೇ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಕುರುಚಲು ಗಿಡಗಳು, ಆಪು ಬಾಡಿ ನಿಂತಿದೆ. ಬಂಡೆಗಲ್ಲುಗಳು, ಮರಳು, ಕಪ್ಪೆಚಿಪ್ಪುಗಳು ಕಣ್ಣಿಗೆ ರಾಚುತ್ತಿವೆ.. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ನದಿ ತಟದ ಹೊಲ ಗದ್ದೆಗಳು ಈಗ ನೀರಿಲ್ಲದೇ ಬಿಕೊ ಎನ್ನುತ್ತಿವೆ… ಮುಂಗಾರು ತನ್ನ ‘ಹಂಗಾಮ’ ಮರೆತಿರುವುದರಿಂದ, ‘ಬರ’ವೆದ್ದು ನದಿಯ ಒಡಲೂ ಬಿರಿದಿದೆ..!!
ತಾಲ್ಲೂಕಿನ ದಡೇಸುಗೂರು ಗ್ರಾಮದ ಬಳಿಯ ತುಂಗಭದ್ರಾ ನದಿ ಕಳೆದ ಹಲವು ದಿನಗಳಿಂದ ನೀರಿಲ್ಲದೇ ಬತ್ತಿ ಹೋಗಿದೆ. ಇದರಿಂದ ನದಿ ತಟದ ಗ್ರಾಮಗಳ ಜನರು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ದಡೇಸುಗೂರು, ಕೆಂಗಲ್, ಉಪ್ಪಳ, ಸಾಲಗುಂದಾ, ಬಾದರ್ಲಿ, ಒಳಬಳ್ಳಾರಿ, ಚಿಂತಮಾನದೊಡ್ಡಿ, ಹುಲುಗುಂಚಿ ಸೇರಿದಂತೆ ಹಲವು ಗ್ರಾಮಗಳಿಗೆ ತುಂಗಭದ್ರಾ ನದಿ ಜೀವದಾಯಿಯಾಗಿದೆ. ಆದರೆ ಈ ಬಾರಿ ಮುಂಗಾರು ಮಳೆ ಸಕಾಲಕ್ಕೆ ಸುರಿಯದೇ ಇರುವುದರಿಂದ ಹೊಳೆಯಲ್ಲಿ ನೀರಿಲ್ಲದಂತಾಗಿದೆ.

ಸಸಿಮಡಿ ಕುಂಠಿತ
ಪ್ರತಿ ಸಾರಿಯೂ ನದಿ ತಟದ ಗ್ರಾಮಗಳು ತುಂಗಭದ್ರಾ ಅಣೆಕಟ್ಟೆಯಿಂದ ಎಡದಂಡೆ ನಾಲೆಗೆ ನೀರು ಹರಿಸುವ ಮುಂಚೆಯೇ ನದಿಯಲ್ಲಿನ ನೀರು ಬಳಸಿಕೊಂಡು ಈ ಭಾಗದ ರೈತರು ಸಸಿಮಡಿ ಹಾಕುತ್ತಿದ್ದರು. ಆದರೆ ಈ ಬಾರಿ ನದಿಯಲ್ಲಿ ನೀರು ಸಂಪೂರ್ಣ ಕುಸಿದಿರುವುದರಿಂದ ಸಸಿಮಡಿ ಹಾಕುವವರ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ ಎಂದು ರೈತರೊಬ್ಬರು ಹೇಳುತ್ತಾರೆ.
“ಡ್ಯಾಂಗೆ ಇನ್ನೂವರೆಗೂ ಒಳಹರಿವು ಇಲ್ಲ”
“ಮುಂಗಾರು ಮಳೆ ಕೊರತೆಯಿಂದ ಈ ಬಾರಿ ತುಂಗಭದ್ರಾ ಡ್ಯಾಂಗೆ ಇಲ್ಲಿವರೆಗೂ ಒಳಹರಿವು ಇಲ್ಲದಂತಾಗಿದೆ. ಸದ್ಯ ಡ್ಯಾಂನಲ್ಲಿ 9.33 ಟಿಎಂಸಿ ನೀರು ಮಾತ್ರ ಸಂಗ್ರಹ ಇದೆ. ಕಳೆದ ವರ್ಷ ದಿನಾಂಕ: 01-07-2025ರಂದು ಡ್ಯಾಂನಲ್ಲಿ 60.61 ಟಿಎಂಸಿ ನೀರಿನ ಸಂಗ್ರಹವಿತ್ತು, ಆದರೆ ಈ ವರ್ಷ ತದ್ವಿರುದ್ಧ ಪರಿಸ್ಥಿತಿ ಇದೆ. ವಾರ ಅಥವಾ ಹದಿನೈದು ದಿನಗಳ ಒಳಗೆ ಮಳೆ ಬರದೇ ಹೋದರೆ ರೈತರು ಇನ್ನಷ್ಟು ಸಮಸ್ಯೆ ಎದುರಿಸುವಂತಾಗಲಿದೆ” ಎಂದು ರೈತರೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.

