ಸಿಂಧನೂರು: ‘ರಾಯಚೂರು ಜಿಲ್ಲೆ ಬರಗಾಲಪೀಡಿತ ಪ್ರದೇಶ’ ಎಂದು ಘೋಷಿಸಿ: ಸಿಎಂಗೆ ಕೆಆರ್‌ಎಸ್ ಒತ್ತಾಯ

Spread the love

ಲೋಕಲ್ ಸುದ್ದಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಜುಲೈ 1, 2026

ರಾಯಚೂರು ಜಿಲ್ಲೆಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಗುಳೆ ತಡೆಯಲು ಈ ಹಿಂದೆ ಜಾರಿಯಲ್ಲಿದ್ದ ಮನರೇಗಾ ಯೋಜನೆ ಜಾರಿಗೊಳಿಸಬೇಕು ಸೇರಿ ಇನ್ನಿತರೆ ಪ್ರಮುಖ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರೈತ ಸಂಘ (ಎಐಯುಕೆಎಸ್)ದಿಂದ ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಬುಧವಾರ ಮನವಿಪತ್ರ ರವಾನಿಸಲಾಯಿತು.
ಕೇಂದ್ರ, ರಾಜ್ಯ ಸರ್ಕಾರಗಳು ಬರಪರಿಹಾರ ಕಾರ್ಯಕ್ರಮ ಜಾರಿಗೊಳಿಸಲಿ: ರಮೇಶ ಪಾಟೀಲ್‌ ಭೇರ್ಗಿ
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಭೇರಿರ್ಗಿ,“ಈ ಭಾರಿ ಮಳೆ ಸಂಪೂರ್ಣ ವೈಫಲ್ಯವಾಗಿದೆ. ಹಾಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ಮೇ-ಜೂನ್ ತಿಂಗಳಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗುತ್ತಿದ್ದವು. ಆದರೆ ಮಳೆಬಾರದ ಕಾರಣ ಕೃಷಿ ಚಟುವಟಿಕೆಗಳು ಸಂಪೂರ್ಣ ನಿಂತು ಹೋಗಿವೆ. ಇದರಿಂದ ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಹಾಗಾಗಿ ರಾಜ್ಯವನ್ನು ಸಂಪೂರ್ಣ ಬರಪೀಡಿತ ಪ್ರವೇಶವೆಂದು ಘೋಷಿಸಬೇಕು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಬ ಮಾಡದೇ ಬರ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು” ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು: ಬಿ.ಎನ್‌.ಯರದಿಹಾಳ ಆಗ್ರಹ
ಸಿಪಿಐ(ಎಂಎಲ್) ಮಾಸ್‌ಲೈನ್ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ ಮಾತನಾಡಿ,“ ಬರಗಾಲದಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೆರೆಗಳು ತಳಕಂಡಿದ್ದು, ನೀರು ಸರಬರಾಜು ಬಹುತೇಕ ಕಡೆ ಸ್ಥಗಿತಗೊಂಡಿದೆ. ಹಳ್ಳ-ಕೊಳ್ಳ ಹಾಗೂ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಇದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ಹಾಹಾಕಾರ ಎದುರಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಹಕ್ಕೊತ್ತಾಯಗಳು
ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಬರಗಾಲಪೀಡಿತ ಪ್ರದೇಶಗಳೆಂದು ಘೋಷಿಸಬೇಕು, ವಿದ್ಯುತ್ ಸರಬರಾಜನ್ನು ಟಾಟಾ ಕಂಪನಿಗೆ ಗುತ್ತಿಗೆ ನೀಡುವುದನ್ನು ಕೈಬಿಡಬೇಕು, ಗುಳೆ ತಡೆಗೆ ಈ ಹಿಂದೆ ಜಾರಿಯಲ್ಲಿದ್ದ ಮನರೇಗಾ ಯೋಜನೆಯನ್ನೇ ಅನುಷ್ಠಾನಗೊಳಿಸಬೇಕು, ಜೆಜೆಎಂ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಯೋಜನೆಯನ್ನು ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು, ಮೇ ತಿಂಗಳಲ್ಲಿ ಜಿಲ್ಲೆಯ ಕೆಲವು ಭಾಗದಲ್ಲಿ ಅಲ್ಪ-ಸ್ವಲ್ಪ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಮಾಡಿದ್ದರೂ, ಆದರೆ ಒಂದುವರೆ ತಿಂಗಳಿAದ ಮಳೆ ಬಾರದೆ ಇರುವುದರಿಂದ ಬಿತ್ತನೆ ಮಾಡಿದ ಬೆಳೆ ಒಣಗಿ ಹೋಗಿದೆ, ಹಾಗಾಗಿ 5 ಎಕರೆಗಿಂತ ಕಡಿಮೆ ಇರುವ ಸಣ್ಣ ರೈತರಿಗೆ ಪ್ರತಿ ಎಕರೆಗೆ ರೂ. 25 ಸಾವಿರ ಪರಿಹಾರ ನೀಡಬೇಕು, ರೈತರು ಕೃಷಿಗಾಗಿ ಸ್ಥಳೀಯ ಮತ್ತು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು, ಜಾನುವಾರು ಸಾಕಣೆದಾರರ ಮನೆ ಮನೆಗೆ ಮೇವು ಸರಬರಾಜು ಮಾಡಬೇಕು” ಎಂಬ ಹಕ್ಕೊತ್ತಾಯದ ಮನವಿಪತ್ರವನ್ನು ಶಿರಸ್ತೇದಾರ್ ವಾಣಿ ಅವರ ಮೂಲಕ ಸಿಎಂ ಅವರಿಗೆ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಗಂಗರಾಜ ಭೀಮರಾಜ ಕ್ಯಾಂಪ್, ನಿಂಗಪ್ಪ ಚಿಕ್ಕಭೇರಿಗಿ, ಬಾಲಾಜಿ ಉದ್ಬಾಳ, ಬಸಪ್ಪ ಕಡಬೂರು, ಯಮನೂರಪ್ಪ ರತ್ನಾಪುರಹಟ್ಟಿ, ಅಸ್ಲಂ, ಕಾಶಿಮಸಾಬ್, ಮರಿಯಪ್ಪ ನಾಯಕ ಭೇರ್ಗಿ, ಕರಿಯಪ್ಪ ತುರ್ವಿಹಾಳ, ನಿಂಗಪ್ಪ ಕೆ., ಲಾಲಸಾಬ್ ಜಿಲೇಬಿ, ಮಹ್ಮದ್ ಅಲಿ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *