ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 25, 2026
“ಕಾರ್ಪೋರೇಟ್ ಬಂಡವಾಳವಾದ ಹಾಗೂ ಆರ್ಎಸ್ಎಸ್ ಫ್ಯಾಸಿಸಂನ್ನು ಹಿಮ್ಮೆಟ್ಟಿಸೋಣ’ ಎಂಬ ಘೋಷವಾಕ್ಯದಡಿ, ಸಿಪಿಐ(ಎಂಎಲ್) ರೆಡ್ಸ್ಟಾರ್ 12ನೇ ರಾಜ್ಯ ಸಮ್ಮೇಳನವನ್ನು ಮೈಸೂರಿನ ಇನ್ಸಿಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಹಾಲ್ನಲ್ಲಿ ಜೂನ್ 27 ಹಾಗೂ 28ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ” ಎಂದು ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ್ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸಿ ಸರ್ವಾಧಿಕಾರದ ದಿಕ್ಕಿಗೆ ತಳ್ಳುತ್ತಿದೆ. ಆರ್ಎಸ್ಎಸ್ನ ಹಿಂದೂತ್ವದ ರಾಜಕೀಯ ಅಜೆಂಡಾವನ್ನು ಆಡಳಿತದ ಮೇಲೆ ಹೇರಲಾಗುತ್ತಿದೆ. ದೇಶದ ನೈಸರ್ಗಿಕ ಸಂಪತ್ತು, ಸಾರ್ವಜನಿಕ ಸಂಸ್ಥೆಗಳು, ರೈತರು, ಕಾರ್ಮಿಕರು ಮತ್ತು ಯುವಜನರ ಭವಿಷ್ಯವನ್ನು ಅದಾನಿ–ಅಂಬಾನಿಯಂತಹ ಏಕಸ್ವಾಮ್ಯ ಬಂಡವಾಳ ಶಾಹಿಗಳಿಗೆ ಒಪ್ಪಿಸಲಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ ಮತ್ತು ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ಗಳ ಮೂಲಕ ದುಡಿಯುವ ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಲಾಗಿದೆ. ಜಾತಿ–ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ, ಜನರ ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುವ ರಾಜಕಾರಣ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
‘ಎಸ್ಐಆರ್ ಮೂಲಕ ಮತದಾನದ ಹಕ್ಕು ಕಸಿಯುವ ಹುನ್ನಾರ’
“ಮತದಾನದ ಹಕ್ಕಿನ ಮೇಲೆಯೂ ದಾಳಿ ನಡೆಯುತ್ತಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್ಐಆರ್ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ದುಡಿಯುವ ಜನರ ಪರ್ಯಾಯ ರಾಜಕೀಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಿಪಿಐ(ಎಂಎಲ್) ರೆಡ್ ಸ್ಟಾರ್ 12ನೇ ರಾಜ್ಯ ಸಮ್ಮೇಳನ ಏರ್ಪಡಿಸಿದೆ” ಎಂದು ಅವರು ಹೇಳಿದ್ದಾರೆ.
