ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 19, 2026
ನಗರದ ಕೆಲ ಖಾಸಗಿ ಪದವಿ ಪೂರ್ವ ಕಾಲೇಜುಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983, ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮ ಹಾಗೂ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಹೊರಡಿಸಿದ ಹಲವು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರೂ ರಾಯಚೂರು ಜಿಲ್ಲಾ ಡಿಡಿಪಿಯು ಅವರು ಸೂಕ್ತ ಕ್ರಮ ಜರುಗಿಸುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆಂಬ ಆರೋಪಗಳು ಪಾಲಕರಿಂದ ಕೇಳಿಬಂದಿವೆ.
ನಗರದಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಬಹಳಷ್ಟು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಕೆಲ ಖಾಸಗಿ ಆಡಳಿತ ಮಂಡಳಿಗಳು ನಿರ್ಲಕ್ಷಿಸಿದ್ದು, ಇದರಿಂದ ಕಲಿಕೆಗೆ ಬರುವ ವಿದ್ಯಾರ್ಥಿಗಳು ಅಭದ್ರತೆ ಭಾವ ಎದುರಿಸುತ್ತಿದ್ದಾರೆ. ಇತ್ತೀಚಿಗೆ ಖಾಸಗಿ ಶಿಕ್ಷಣ ಸಂಸ್ಥೆಯೊAದರ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಕಾರೊಂದು ಹರಿದು ಓರ್ವ ವಿದ್ಯಾರ್ಥಿನಿ ಮೃತಪಟ್ಟು, ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾದರೂ ಡಿಡಿಪಿಯು ಅವರು ವಿದ್ಯಾರ್ಥಿಗಳು ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆಯಾ ಕಾಲೇಜುಗಳಿಗೆ ಸೂಚನೆ ನೀಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.
“ಶಿಕ್ಷಣ ಹಕ್ಕು ಕಾಯ್ದೆ 2009” ಏನು ಹೇಳುತ್ತದೆ ?
ಶಿಕ್ಷಣ ಹಕ್ಕು ಕಾಯ್ದೆ 2009 ರಂತೆ ಶಾಲಾ ಮಕ್ಕಳಿಗೆ ಸುರಕ್ಷಿತ ಮತ್ತು ಮಕ್ಕಳ ಸ್ನೇಹಿ ವಾತಾವರಣವನ್ನು ಒದಗಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಅಕ್ಟೋಬರ್ 1, 2021ರಂದು ‘ಶಾಲಾ ಸುರಕ್ಷತೆ ಮತ್ತು ಭದ್ರತೆಯ ಕುರಿತು ಮಾರ್ಗಸೂಚಿಗಳು’ ಅನ್ನು ನಿಗದಿಪಡಿಸಿದ್ದು, ಅದರಂತೆ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯನಿರ್ವಹಿಸಬೇಕಿದೆ. ಈ ನಡುವೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಷರತ್ತು 3ರಂತೆ “ಆಡಳಿತ ಮಂಡಳಿಯವರು ನಿಯಮಾನುಸಾರ ಕಾಲೇಜಿಗೆ ಅಗತ್ಯವಾದ ಕಟ್ಟಡ ಪ್ರಯೋಗಾಲಯ, ಪೀಠೋಪಕರಣ, ಪಾಠೋಪಕರಣ, ಆಟದ ಮೈದಾನ, ಗ್ರಂಥಾಲಯ ಹಾಗೂ ಇತರೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಾಲೇಜು ಪ್ರಾರಂಭಿಸುವ ಸಮಯದೊಳಗೆ ಒದಗಿಸತಕ್ಕದ್ದು, ಆದರೆ ಕೆಲ ಆಡಳಿತ ಮಂಡಳಿಯವರು ಮಂಜೂರಾತಿ ಆದೇಶದಲ್ಲಿನ ಷರತ್ತುಗಳನ್ನು ಪಾಲಿಸಿರುವುದನ್ನು ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕಿದೆ”. ಆದರೆ ಈ ನಿಟ್ಟಿನಲ್ಲಿ ಕ್ರಮಗಳಾಗುತ್ತಿಲ್ಲ. ಇದರಿಂದಾಗಿ ಕೆಲ ಖಾಸಗಿ ಕಾಲೇಜುಗಳು ತಾವು ಆಡಿದ್ದೇ ಆಟ ಎನ್ನುವಂತೆ ವರ್ತಿಸುತ್ತಿವೆ ಎಂದು ವಿದ್ಯಾರ್ಥಿ ಪಾಲಕರೊಬ್ಬರು ಆರೋಪಿಸುತ್ತಾರೆ.
ಹೆದ್ದಾರಿ ಪಕ್ಕ ಇದ್ದರೂ ನಿಯಮ ಪಾಲಿಸದ ಕೆಲ ಸಂಸ್ಥೆಗಳು ?
“ನಗರದ ಗಂಗಾವತಿ, ಕುಷ್ಟಗಿ, ರಾಯಚೂರು ಮಾರ್ಗದಲ್ಲಿರುವ ಕೆಲ ಖಾಸಗಿ ಕಾಲೇಜುಗಳು ಹೆದ್ದಾರಿ ಪಕ್ಕದಲ್ಲಿದ್ದರೂ ಶಿಕ್ಷಣ ಇಲಾಖೆಯ ನಿಯಮಗಳನ್ನಾಗಲಿ, ಸುರಕ್ಷತಾ ಮಾರ್ಗಸೂಚಿಗಳನ್ನಾಗಲಿ ಪಾಲಿಸುತ್ತಿಲ್ಲ. ಕೆಲವೊಂದು ಕಾಲೇಜುಗಳಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ ಕಾವಲುಗಾರರನ್ನು ನೇಮಿಸಿಕೊಂಡಿಲ್ಲ, ಟ್ರಾಫಿಕ್ ನಿಯಂತ್ರಣಾ ವ್ಯವಸ್ಥೆ ಇಲ್ಲ, ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ, ಕಾಲೇಜಿಗೆ ಹೋಗಿ-ಬರುವ ದಾರಿಯು ಅತ್ಯಂತ ಇಕ್ಕಟ್ಟಾಗಿರುವುದಲ್ಲದೇ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಲು ಅಡೆತಡೆ ಅನುಭವಿಸುತ್ತಾರೆ. ಇನ್ನೂ ಕೆಲ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂತ್ರಾಲಯವಾಗಲಿ, ಶೌಚಾಲಯಗಳಾಗಲಿ ಇಲ್ಲ” ಎಂದು ಸಂಘಟನೆಯ ಮುಖಂಡರೊಬ್ಬರು ದೂರುತ್ತಾರೆ.
ಸುರಕ್ಷತೆ, ಭದ್ರತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಯಾರದ್ದು ?
ಕಾಲೇಜುಗಳಿಗೆ ಅಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಆಡಳಿತ ಮಂಡಳಿಯದ್ದು ಎಂದು ಹೇಳಿ ಶಿಕ್ಷಣ ಇಲಾಖೆ ಕೈತೊಳೆದುಕೊಂಡಿದೆ. ಆದರೆ ಸುರಕ್ಷತೆ, ಭದ್ರತೆಯನ್ನು ನಿರ್ಲಕ್ಷಿಸಿ, ಅವಘಡಗಳಿಗೆ ಕಾರಣವಾದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಮಗಳ ಅನ್ವಯ ಕ್ರಮ ಕೈಗೊಳ್ಳದೇ ಇನ್ನಷ್ಟು ತಪ್ಪುಗಳನ್ನು ಮಾಡಲು ಇಲಾಖೆಯ ಮೇಲಧಿಕಾರಿಗಳು ಪ್ರಚೋದಿಸಿದಂತಿದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಕೆಲ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಗ್ರಾಹಕರ ದೃಷ್ಟಿಕೋನದಿಂದ ನೋಡುತ್ತವೆ. ಅವರಿಂದ ಕಾಲೇಜು ಶುಲ್ಕ ಬಂದರೆ ಸಾಕೆಂಬ ರೀತಿಯಲ್ಲಿ ವರ್ತಿಸುತ್ತಿವೆ. ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡುತ್ತಿಲ್ಲ ಎಂದು ಪಾಲಕರೊಬ್ಬರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
ವಿಚಿತ್ರ ಮತ್ತು ವಿಪರ್ಯಾಸ ?
“ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ತಾಲ್ಲೂಕಿನಲ್ಲಿ ವಿಚಿತ್ರ ವಾತಾವರಣವಿದೆ. ಚುನಾಯಿತ ಜನಪ್ರತಿನಿಧಿಯೊಬ್ಬರು ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ. ಅತ್ತ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಅವರೇ, ಇತ್ತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷರು ಅವರೇ ಆಗಿರುವುದರಿಂದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಮತ್ತು ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಾದ ಲೋಪದೋಷಗಳಿಗೆ ಪರಿಹಾರ ಕಂಡುಕೊಳ್ಳಲು ಯಾರು ಬಳಿ ಹೋಗಬೇಕೆನ್ನುವುದು ಯಕ್ಷ ಪ್ರಶ್ನೆಯಾಗಿದೆ” ಎಂದು ವಿದ್ಯಾರ್ಥಿ ಪಾಲಕರೊಬ್ಬರು ಹೇಳುತ್ತಾರೆ.
